Advertisement

NMPT: ಸೋಲಾರ್‌ನಿಂದ ದಿನಕ್ಕೆ 20ಸಾವಿರ ಯೂನಿಟ್‌ ವಿದ್ಯುತ್‌ ಉತ್ಪಾದನೆ

07:25 AM May 04, 2018 | Karthik A |

ಮಂಗಳೂರು: ದೇಶದ ಬೃಹತ್‌ ಬಂದರುಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಪ್ರತಿಷ್ಠಿತ ನವಮಂಗಳೂರು ಬಂದರು (NMPT)ಗೆ ಈಗ ವಿದ್ಯುತ್‌ ಖರೀದಿ ಅಗತ್ಯವೇ ಇಲ್ಲ. ಇಲ್ಲಿ ದೈನಂದಿನ ಅಗತ್ಯಗಳಿಗೆ ಬೇಕಾದ ಶೇ. 95ರಷ್ಟು ವಿದ್ಯುತ್ತನ್ನು ಸ್ವಂತವಾಗಿ ಸೌರಶಕ್ತಿಯಿಂದ ಉತ್ಪಾದಿಸಲಾಗುತ್ತಿದೆ. ಸೋಲಾರ್‌ ವಿದ್ಯುತ್‌ ಉತ್ಪಾದನೆಯ ಮೂಲಕ ಸಂಪೂರ್ಣ ಸ್ವಾವಲಂಬಿಯಾದ ಎನ್‌ಎಂಪಿಟಿಗೆ ‘ಗ್ರೀನ್‌ ಪೋರ್ಟ್‌’ ಮಾನ್ಯತೆಯೂ ಸಿಕ್ಕಿದೆ. ಪ್ರತಿದಿನ ಇಲ್ಲಿ ಸೋಲಾರ್‌ ನಿಂದ ಒಟ್ಟು 20 ಸಾವಿರ ಯೂನಿಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಇಲ್ಲಿ ಒಂದು ದಿನಕ್ಕೆ ಅಗತ್ಯವಿರುವ ವಿದ್ಯುತ್‌ 24 ಸಾವಿರ ಯೂನಿಟ್‌. ಅಂದರೆ ಸದ್ಯ ಕೇವಲ ನಾಲ್ಕು ಸಾವಿರ ಯೂನಿಟ್‌ಗಾಗಿ ಮಾತ್ರ ಬೇರೆ ಮೂಲಗಳನ್ನು ಅವಲಂಬಿಸಲಾಗಿದೆ. ಕೆಲವೇ ವರ್ಷಗಳಲ್ಲಿ ಸಂಪೂರ್ಣ ಸ್ವಾವಲಂಬಿಯಾಗಿ ಶೇ.100ರಷ್ಟು ಯಶಸ್ಸು ಸಾಧಿಸುವ ನಿರೀಕ್ಷೆಯಲ್ಲಿದೆ.

Advertisement

ಉತ್ಪಾದನೆ ಸಾಮರ್ಥ್ಯ 5.19 ಮೆ. ವ್ಯಾ.


ಇಲ್ಲಿ ಪ್ರಸ್ತುತ 5.19 ಮೆ. ವ್ಯಾ. ವಿದ್ಯುತ್‌ ಉತ್ಪಾದನೆ ಸಾಮರ್ಥ್ಯದ ಸೋಲಾರ್‌ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಬಾಷ್‌ ನ್ಯೂ ಕಂಪೆನಿಯು ಬಂದರಿನ ಕಾರ್ಮಿಕರ ವಸತಿ ನಿಲಯದ ಸಮೀಪ 4 ಮೆ. ವ್ಯಾ. ಸಾಮರ್ಥ್ಯದ ಸೋಲಾರ್‌ ವಿದ್ಯುತ್‌ ಉತ್ಪಾದನೆ ಘಟಕ ಸ್ಥಾಪಿಸಿದೆ. ಉಳಿದಂತೆ ರೂಫ್‌ ಟಾಪ್‌ ವ್ಯವಸ್ಥೆಯ ಮೂಲಕ 350 ಕಿ.ವ್ಯಾ. ಹಾಗೂ 840 ಕಿ. ವ್ಯಾ. ವಿದ್ಯುತ್‌ ಪಡೆಯಲಾಗುತ್ತಿದೆ. ದೇಶದ ಎಲ್ಲ ಬಂದರುಗಳಲ್ಲಿ ಸೋಲಾರ್‌ ವಿದ್ಯುತ್‌ ಉತ್ಪಾದನೆ ಮಾಡುವಂತೆ ಕೇಂದ್ರ ಸರಕಾರದಿಂದ ಸೂಚನೆ ಇರುವ ಹಿನ್ನೆಲೆಯಲ್ಲಿ ಈ ಕುರಿತ ಕಾರ್ಯಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಹಲವು ವಿಧ ಕಾರ್ಯನಿರ್ವಹಣೆ
NMPT ಮೂಲಕ ಮರದ ದಿಮ್ಮಿಗಳು, ಕಾರ್ಗೊ ಪಾರ್ಸೆಲ್‌ಗ‌ಳು, ಘನೀಕೃತ ಪುಡಿಗಳು, ಸಿಮೆಂಟ್‌, ಕಲ್ಲಿದ್ದಲು, ರಸಗೊಬ್ಬರ, ಅಡುಗೆ ಎಣ್ಣೆ, ರಾಸಾಯನಿಕ ದ್ರವಗಳು ಮುಂತಾದ ಪ್ರಮುಖ ಕಾರ್ಗೊ ರಫ್ತಾಗುತ್ತವೆ. ಕಚ್ಚಾತೈಲ, ಕಬ್ಬಿಣ ಅದಿರಿನ ಉಂಡೆಗಳು, ಗ್ರಾನೈಟ್‌, ಮೈದಾ, ತೈಲೋತ್ಪನ್ನಗಳು, ಕಾಫಿ, ಸಂಸ್ಕರಿತ ಗೋಡಂಬಿ ಆಮದಾಗುತ್ತವೆ. ವಿಶೇಷವಾಗಿ MRPl, ONGC, KIOCL, ELF, ಕಿಸ್ಕೋ, MCF, HPCL, IOC, UPCL ಮುಂತಾದ ಮೆಗಾ ಉದ್ಯಮಗಳ ಕಾರ್ಗೊ ನಿರ್ವಹಣೆಗೆ NMPT ಆಧಾರ. ಈ ಸಂದರ್ಭದಲ್ಲಿ ಆವಶ್ಯಕ ವಿದ್ಯುತ್‌ ಸೋಲಾರ್‌ ಮೂಲಕವೇ ಪಡೆಯಲಾಗುತ್ತಿದೆ. 

MRPL ಸೋಲಾರ್‌ ದಾಖಲೆ
ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೋ ಕೆಮಿಕಲ್ಸ್‌ (MRPL) ಸಂಸ್ಥೆಯು ಪ್ರಸ್ತುತ ಸೋಲಾರ್‌ ಉತ್ಪಾದನೆ ಮೂಲಕ ಸಾಧನೆ ತೋರಿದೆ. ವಾರ್ಷಿಕ 88 ಲಕ್ಷ ಮೆ. ವ್ಯಾ. ಉತ್ಪಾದನೆ ಸಾಮರ್ಥ್ಯವಿರುವ ಸೋಲಾರ್‌ ಘಟಕವನ್ನು 27 ಕೋ.ರೂ. ವೆಚ್ಚದಲ್ಲಿ ಕುತ್ತೆತ್ತೂರಿನಲ್ಲಿ ನಿರ್ಮಿಸಿದೆ.

NMPT ವಿದ್ಯುತ್‌ ಸ್ವಾವಲಂಬಿ
ಸೋಲಾರ್‌ ವಿದ್ಯುತ್‌ ಉತ್ಪಾದನೆಯ ಮೂಲಕ ನವಮಂಗಳೂರು ಬಂದರು ಸ್ವಾವಲಂಬಿಯಾಗಿದೆ. ನಿತ್ಯ ಇಲ್ಲಿ 20ರಿಂದ 21 ಸಾವಿರ ಯೂನಿಟ್‌ಗಳಷ್ಟು ವಿದ್ಯುತ್‌ ಸೋಲಾರ್‌ ಮೂಲಕವೇ ಪಡೆಯಲಾಗುತ್ತಿದೆ. ಬಂದರು ‘ಗ್ರೀನ್‌ ಪೋರ್ಟ್‌’ ಎಂಬ ಹೆಗ್ಗಳಿಕೆ ಪಡೆದುಕೊಂಡಿದೆ.
– ಹಾಲೇಶಪ್ಪ, ಅಧೀಕ್ಷಕ ಅಭಿಯಂತರರು (ವಿದ್ಯುತ್‌), NMPT 

Advertisement

ನವಮಂಗಳೂರು ಬಂದರು
ಗುರುಪುರ ಹಾಗೂ ನೇತ್ರಾವತಿ ನದಿಗಳ ಸಂಗಮ ಸ್ಥಾನವಾದ ಹಳೆ ಬಂದರಿಗೆ ಮಂಗಳೂರಿನ ಸಾಗರ ವ್ಯಾಪಾರ ವಹಿವಾಟಿನ ಆಧುನಿಕ ಕಾಲಘಟ್ಟದ ಬೇಡಿಕೆಗಳನ್ನು ನಿಭಾಯಿಸುವಲ್ಲಿ ತನ್ನದೇ ಆದ ಮಿತಿಗಳಿದ್ದವು. ಹೀಗಾಗಿ ಸುಸಜ್ಜಿತ ನೂತನ ಬಂದರಿನ ಆವಶ್ಯಕತೆ ತಲೆದೋರಿ ನವಮಂಗಳೂರು ಬಂದರು ಹುಟ್ಟಿಕೊಂಡಿತು. ಉಳ್ಳಾಲ ಶ್ರೀನಿವಾಸ ಮಲ್ಯರ ನಿರಂತರ ಪ್ರಯತ್ನದ ಫಲವಾಗಿ ನಿರ್ಮಾಣಗೊಂಡು 1974 ಮೇ 4ರಂದು ಕಾರ್ಯಾರಂಭ ಮಾಡಿದರೂ 1975 ಜ. 11ರಂದು ಪ್ರಧಾನಿಯವರು ಔಪಚಾರಿಕವಾಗಿ ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದರು. 1980ರಿಂದ ಬಂದರು ಟ್ರಸ್ಟ್‌ ಸಮಿತಿ ರಚನೆಯ ಬಳಿಕ ಗಣನೀಯ ಪ್ರಮಾಣದಲ್ಲಿ ನವಮಂಗಳೂರು ಬಂದರು ಅಭಿವೃದ್ಧಿಗೊಂಡಿತು.

— ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next