Advertisement

ಕರಾಟೆಯಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಯುವ ಕರಾಟೆ ಪಟು ನಿವೇದಿತಾ ಕುಲಾಲ್ ವಿಟ್ಲ

05:21 PM Oct 03, 2020 | sudhir |

ಕರಾಟೆ ಎಂದರೆ ಜಪಾನೀಸ್ ಭಾಷೆಯಲ್ಲಿಖಾಲಿ ಕೈ. ಅಂದರೆ ಶಸ್ತ್ರಾಸ್ತ್ರಗಳನ್ನು ಬಳಸದೇ ಕೈ ಕಾಲು ಮತ್ತಿತರ ಶಾರೀರಿಕ ಭಾಗಗಳನ್ನು ಬಳಸಿಕೊಂಡು ಪ್ರದರ್ಶಿಸುವ ಸಮರ ಕಲೆ. ಪೂರ್ವ ಏಷ್ಯಾದಲ್ಲಿ ಶತಮಾನಗಳ ಹಿಂದೆ ಪ್ರಾರಂಭವಾಗಿ, 1920ರಲ್ಲಿ ಜಪಾನ್ ನಲ್ಲಿ ಅಭಿವೃದ್ಧಿಗೊಂಡ ಕಲೆ, ಇದೀಗ ವಿಶ್ವವ್ಯಾಪಿಯಾಗಿ ಹಬ್ಬಿದ್ದು, ಆತ್ಮರಕ್ಷಣಿಯ ದೃಷ್ಟಿಯಿಂದ ಅತ್ಯಂತ ಪ್ರಾಧಾನ್ಯತೆಯನ್ನು ಹೊಂದಿದೆ.

Advertisement

ಇಂತಹ ಅಂತಾರಾಷ್ಟ್ರೀಯ ಮನ್ನಣೆ ಪಡೆದ ಸಮರ ಕಲೆಯನ್ನು ಅಭ್ಯಸಿಸಿ, ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಕ್ರೀಡಾ ಕೂಟದಲ್ಲಿ ಭಾರತವನ್ನು ಪ್ರತಿನಿಧಿಕರಿಸಿ, ಎದುರಾಳಿಗಳನ್ನು ನಿರಾತಂಕವಾಗಿ ಮಣಿಸಿ ಪದಕಗಳನ್ನು ತನ್ನದಾಗಿಸಿಕೊಂಡು, ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವಲ್ಲಿ ಸಫಲರಾಗಿದವರ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ನಿವೇದಿತಾ ಕುಲಾಲ್ ಕೂಡ ಒಬ್ಬರು.

ಈಕೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ವಿಟ್ಲದ ಕಸಬ ಗ್ರಾಮದ ಅಪ್ಪಯ್ಯ ಮೂಲ್ಯ ಹಾಗೂ ಶಾಲಿನಿ ದಂಪತಿಗಳ ಪ್ರಥಮ ಪುತ್ರಿ.

ಉಕ್ಕುಡ ಸರಕಾರಿ ಶಾಲೆಯಲ್ಲಿ ಶೈಕ್ಷಣಿಕ ಜೀವನ ಪ್ರಾರಂಭಿಸಿದ ಈಕೆ, ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ತನ್ನ ಶಿಕ್ಷಕಿ, ಅತ್ತೆ ಜಯಶ್ರೀ ಪಡಿಬಾಗಿಲು ರವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದ ಫಲವಾಗಿ ಖ್ಯಾತ ಕರಾಟೆ ಗುರುಗಳಾದ ಮಾಧವ್ ಅಳಿಕೆ ಯವರಿಂದ ಕರಾಟೆ ತರಬೇತಿ ಪಡೆಯಲು ಪ್ರಾರಂಭಿಸಿದರು.

Advertisement

ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಪ್ರಥಮ ಬಾರಿಗೆ ವಾಮದ ಪದವಿನಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ, ಬೆಳ್ಳಿ ಪದಕ ಗಳಿಸಿದ್ದರು.

ಕಿರು ವಯಸ್ಸಿನಲ್ಲೇ ಕರಾಟೆ ತರಬೇತಿಯೊಂದಿಗೆ ಶಿಕ್ಷಕ ಉಮೇಶ್ ರವರ ಮಾರ್ಗದರ್ಶನದಲ್ಲಿ ಈಜುವಿಕೆ ತರಬೇತಿಯನ್ನು ಕೂಡ ಪಡೆದ ಈಕೆ, ಈಜುವಿಕೆ ಸ್ಪರ್ಧೆಗಳಲ್ಲೂ ಬಹುಮಾನಗಳನ್ನು ಗಳಿಸಿದ್ದರು. ಅದರೊಂದಿಗೆ ವಲಯ ಹಾಗೂ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ತುಳು ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸಿದ್ದರು.

ಆರನೇ ತರಗತಿಯಿಂದ ಸೈಂಟ್ ರಿಟ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ ಈಕೆ, ಕರಾಟೆ ಪಂದ್ಯಾವಳಿಗಳಲ್ಲಿ ಮಾತ್ರವಲ್ಲದೆ ತ್ರೋಬಾಲ್, ಶೋಟ್ ಪುಟ್, ಡಿಸ್ಕಸ್ ತ್ರೋ ಮತ್ತಿತರ ಕ್ರೀಡಾ ಸ್ಪರ್ಧೆಗಳಲ್ಲಿ ಹಾಗೂ ಶಾಲಾ ಮಟ್ಟ, ವಲಯ ಮಟ್ಟ, ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ತುಳು ಕಂಠಪಾಠ ಸ್ಪರ್ಧೆಯಲ್ಲೂ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.

ಬಳಿಕ ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದ ಈಕೆ, ಅಂತಾರಾಷ್ಟ್ರೀಯ ಒಕಿನವನ್ ಗೊಜುರ್ಯು ಕರಾಟೆ ಮಲೈಷಿಯಾ ಆಶ್ರಯದಲ್ಲಿ ಮಲೈಷಿಯಾದಲ್ಲಿ ನಡೆದ 2019ನೇ ಸಾಲಿನ ಅಂತಾರಾಷ್ಟ್ರೀಯ ಕರಾಟೆಡು ಓಪನ್ ಚಾಂಪಿಯನ್ ಶಿಪ್ ಕುಮಿಟೆವಿಭಾಗದ ನಲ್ಲಿ ಬೆಳ್ಳಿ ಪದಕ ಹಾಗೂ ಕಾಟವಿಭಾಗದಲ್ಲಿ ನಲ್ಲಿ ಕಂಚಿನ ಪದಕ ಗಳಿಸಿ, ಭಾರತದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸುವಲ್ಲಿ ಸಫಲರಾಗಿದ್ದರು.

ಅದೇ ರೀತಿ 2016ರಲ್ಲಿ ಮಂಗಳೂರಿನಲ್ಲಿ ನಡೆದ ವೆಸ್ಟರ್ನ್ ನ್ಯಾಷನಲ್ ಲೆವೆಲ್ ಓಪನ್ ಕರಾಟೆ ಪಂದ್ಯಾವಳಿಯಲ್ಲಿ 3 ಚಿನ್ನದ ಪದಕ, 2017ರಲ್ಲಿ 2 ಚಿನ್ನದ ಪದಕ ಹಾಗೂ ಒಂದು ಕಂಚಿನ ಪದಕ, 2018ರಲ್ಲಿ ಚಿನ್ನದ ಪದಕ ಹಾಗೂ ಎರಡು ಬೆಳ್ಳಿ ಪದಕ, 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲಿ ವಾಮದ ಪದವಿನಲ್ಲಿ ನಡೆದ ತಾಲೂಕು ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಬೆಳ್ಳಿ ಪದಕ, ವಾಮಂಜೂರಿನಲ್ಲಿ ನಡೆದ 2018- 19ನೇ ಸಾಲಿನ ಜಿಲ್ಲಾ ಮಟ್ಟದ ಕರಾಟೆಯಲ್ಲಿ ಬೆಳ್ಳಿ ಪದಕ, 2019ರಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ, ‘ಕಟವಿಭಾಗದಲ್ಲಿ ಚಿನ್ನ ಹಾಗೂ ಕುಮಿಟೆವಿಭಾಗದಲ್ಲಿ ಬೆಳ್ಳಿ ಪದಕಗಳನ್ನು, ಮಿಲ್ಗ್ರೀಸ್ ಸಿಬಿಎಸ್ಸಿ ಶಾಲೆಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಚಿನ್ನ ಹಾಗೂ ಕಂಚಿನ ಪದಕಗಳನ್ನು ಗಳಸಿದ್ದರು.

ಕರಾಟೆ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲೇ ಅದ್ವಿತೀಯ ಪ್ರದರ್ಶನ ನೀಡಿದ ಈಕೆಗೆ, ವಿಟ್ಲ ಪದವಿಪೂರ್ವ ಕಾಲೇಜು ಹಾಗೂ ಲಯನ್ಸ್ ಕ್ಲಬ್ ವಿಟ್ಲ, ಕುಲಾಲ ಸಂಘ ವಿಟ್ಲ, ಶಾರದೋತ್ಸವ ಸಮಿತಿ ವಿಟ್ಲ, ಅಯ್ಯಪ್ಪ ಸೇವಾ ಸಮಿತಿ ಗುಂಡಮಜಲು, ಯುವವೇದಿಕೆ ವಿಟ್ಲ ಮತ್ತಿತರ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆದಿದೆ.

ಕಿರು ವಯಸ್ಸಿನಲ್ಲಿ ಲಭಿಸಿದ ಪ್ರೋತ್ಸಾಹ, ಮಾರ್ಗದರ್ಶನ, ತರಬೇತಿ ಪೋಷಕರ, ಗೆಳೆಯರ ಹಾಗೂ ಕುಟುಂಬದ ಬೆಂಬಲ ತನ್ನ ಸಾಧನೆಯ ಹಿಂದಿರುವ ಬೆನ್ನೆಲುಬು ಎನ್ನುತ್ತಾರೆ ನಿವೇದಿತಾ ಕುಲಾಲ್.

ಪ್ರಸ್ತುತ ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷ ಪದವಿ ಶಿಕ್ಷಣ ಪೂರೈಸುತ್ತಿರುವ ಈಕೆ, ಈಗಾಗಲೇ 30ಕ್ಕಿಂತಲೂ ಹೆಚ್ಚು ಪದಕಗಳು ಕೈಸೇರಿದ್ದು, ಕರಾಟೆ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಎಂಬ ಛಲವನ್ನು ಕೈಬಿಡದೇ, ಎಂಜಿನಿಯರಿಂಗ್ ಶಿಕ್ಷಣ ಪಡೆದು ಎಂಜಿನಿಯರ್ ಆಗಿ ವೃತ್ತಿ ಜೀವನ ಸಾಗಿಸಬೇಕೆಂಬ ಕನಸ್ಸನ್ನು ಹೊತ್ತು ಮುನ್ನಡೆಯುತ್ತಿದ್ದಾರೆ.

ಯಾವ ಕ್ಷೇತ್ರವೇ ಆಗಿರಲಿ, ಯಾವ ವಿಭಾಗವೇ ಆಗಿರಲಿ. ಸಾಧಿಸುವೆನು ಎಂಬ ಅಚಲವಾದ ಛಲವೊಂದಿದ್ದಲ್ಲಿ ಸಾಧಿಸಲು ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ನಿವೇದಿತಾ ಕುಲಾಲ್ ರವರ ಸಾಧನೆಯ ಹಾದಿಯನ್ನು ಗಮನಿಸುವಾಗ ಕಂಡುಕೊಳ್ಳಬಹುದು.

ಪ್ರತಿಭೆಗಳ ಪ್ರೋತ್ಸಾಹಕ್ಕೆ ಇನ್ನಷ್ಟು ಸಂಘ ಸಂಸ್ಥೆಗಳು, ವ್ಯಕ್ತಿಗಳು ಮುಂದೆ ಬರುವಂತಾಗಲಿ. ಕಿರು ವಯಸ್ಸಿನಲ್ಲೇ ಪ್ರತಿಭೆಗಳ ಹೊರಹೊಮ್ಮುವಿಕೆಗೆ ಸೂಕ್ತ ಮಾರ್ಗದರ್ಶನ ಹಾಗೂ ವೇದಿಕೆ ಲಭಿಸುವಂತಾಗಲಿ. ಪ್ರತಿಭೆಗಳ ಸಾಧನೆಯ ಹಾದಿ ಸುಗಮವಾಗಿ ಸಾಗಲಿ ಎಂದು ಹಾರೈಸೋಣ.

– ️ ಪ್ರದೀಪ್ ಎಸ್. ಕುಲಾಲ್.

Advertisement

Udayavani is now on Telegram. Click here to join our channel and stay updated with the latest news.

Next