Advertisement

ನಿವಾರ್‌ ಚಳಿ-ಮಳೆಗೆ ಜನಜೀವನ ತತ್ತರ

03:32 PM Nov 29, 2020 | Adarsha |

ಕೊಪ್ಪಳ: ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ನಿವಾರ್‌ ಚಂಡಮಾರುತ ಜನರನ್ನು ತಲ್ಲಣಗೊಳಿಸಿದೆ. ಬಿಸಿಲ ನಾಡು ಕೊಪ್ಪಳ ಜಿಲ್ಲೆಯಲ್ಲೂ ಚಳಿಗಾಳಿ ಬೀಸುತ್ತಿದ್ದು, ಇದರಿಂದ ಜನ ಮನೆಯಿಂದ ಹೊರ ಬರದಂತಾಗಿದೆ. ಜಿನುಗು ಮಳೆಗೆ ರೈತಾಪಿ ವಲಯ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದೆ. ಹೌದು.. ಎರಡು ದಿನಗಳಿಂದ ನಿವಾರ್‌ ಚಂಡಮಾರುತವು ಅನ್ಯ ರಾಜ್ಯಗಳಲ್ಲಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ.

Advertisement

ರಾಜ್ಯಕ್ಕೂ ಇದರ ಬಿಸಿ ತಟ್ಟಿದ್ದು, ಕೊಪ್ಪಳವೂ ಇದಕ್ಕೆ ಹೊರತಾಗಿಲ್ಲ. ಮೊದಲೇ ಚಳಿಗಾಲ ಆರಂಭವಾಗಿದೆ. ಅದರಲ್ಲೂ ನಿವಾರ್‌ ಚಂಡಮಾರುತದಿಂದಾಗಿ ಚಳಿ ಇನ್ನೂ ಹೆಚ್ಚಾಗಿದ್ದು, ಜನರು ನಡುಗುತ್ತಿದ್ದಾರೆ.

ಈ ವರ್ಷ ಉತ್ತಮ ಮಳೆಯಾಗಿದೆ. ಎಲ್ಲೆಡೆಯೂ ಉತ್ತಮ ಫಸಲು ಬಂದಿದೆ. ಒಣ ಬೇಸಾಯ ಭಾಗದಲ್ಲಿ ಈಗಾಗಲೇ ಮೆಕ್ಕೆಜೋಳ ಕಟಾವಿಗೆ ಬಂದಿದೆ. ದೀಪಾವಳಿ ಹಬ್ಬದ ಬಳಿಕ ಕಟಾವು ಮಾಡಿ ಮಾರುಕಟ್ಟೆಗೆ ಕಳಿಸಬೇಕೆಂಬ ಲೆಕ್ಕಾಚಾರದಲ್ಲಿದ್ದ ರೈತಾಪಿ ವಲಯಕ್ಕೆ ನಿವಾರ್‌ ಚಂಡಮಾರುತದಿಂದ ಬೀಸುತ್ತಿರುವ ಶೀತಗಾಳಿ, ಜಿನುಗು ಮಳೆ ಸಂಕಷ್ಟವನ್ನೇ ತಂದಿಟ್ಟಿದೆ.

ನೀರಾವರಿ ಭಾಗದ ರೈತರು ಈಗಾಗಲೇ ಮೆಕ್ಕೆಜೋಳವನ್ನು ಒಕ್ಕಲು ಮಾಡಿ ಮಾರುಕಟ್ಟೆಗೆ ರವಾನೆ ಮಾಡಿದ್ದರೆ, ಒಣ ಬೇಸಾಯದ ರೈತರು ಮೆಕ್ಕೆಜೋಳ, ಸಜ್ಜೆ ಸೇರಿದಂತೆ ಇತರೆ ಬೆಳೆಯನ್ನು ಕಟಾವು ಮಾಡಿ ಹೊಲದಲ್ಲಿ ರಾಶಿ ಮಾಡಿದ್ದಾರೆ.

ಕೆಲವರು ಒಕ್ಕಲು ಮಾಡಿ ರಾಶಿಯನ್ನು ಒಣಗಿಸುತ್ತಿರುವ ವೇಳೆಗೆ ನಿವಾರ್‌ ಚಂಡಮಾರುತವು ರಾಶಿ ಒಣಗದಂತೆ ಮಾಡಿದೆ. ಜಿನುಗು ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತ ಪರಿಸ್ಥಿತಿಯಾಗುತ್ತಿದೆಯಲ್ಲ ಎಂದು ರೈತರುಗೋಗರೆಯುತ್ತಿದ್ದಾರೆ. ಇನ್ನೂ ಭತ್ತ ಬೆಳದ ರೈತರಿಗೂ ಇದೇ ಚಿಂತೆಯಾಗಿದ್ದು, ಜಿನುಗು ಮಳೆಯಿಂದ ಭತ್ತದರಾಶಿಯು ನೆನೆಯುತ್ತಿದೆ.

Advertisement

ಎಲ್ಲೆಡೆ ತಾಡಪಾಲನಿಂದ  ಬೆಳೆ ಸಂರಕ್ಷಣೆ ಮಾಡಿಕೊಳ್ಳುವಂತಾಗಿದೆ. ಇನ್ನು ಹೊಲದಲ್ಲಿನ ಮೆಕ್ಕೆಜೋಳ ಸೇರಿದಂತೆ ಇತರೆ ಮೇವು ನೀರಿಗೆ ಕೆಡುವಂತಾಗುತ್ತಿದೆ. ಈಗಾಗಲೇ ಚಳಿಗಾಲ ಶುರುವಾಗಿದೆ. ಈ ವೇಳೆ ನಿವಾರ್‌ ಚಂಡಮಾರುತದಿಂದ ತಂಪು ಗಾಳಿ ಬೀಸುತ್ತಿರುವುದರಿಂದ ಜನರು ತತ್ತರಗೊಂಡಿದ್ದಾರೆ. ಮಕ್ಕಳು, ವೃದ್ಧರು ಮನೆಯಿಂದ ಹೊರ ಬರದಂತಾಗಿದೆ.

ಇದನ್ನೂ ಓದಿ:ದೇವಸ್ಥಾನ ಅಭಿವೃದ್ಧಿಗೆ 52 ಲಕ್ಷ ರೂ. ಅನುದಾನ

ಒಟ್ಟಿನಲ್ಲಿ ಬಿತ್ತನೆ ಮಾಡಿ ಕಷ್ಟಪಟ್ಟು ಬೆಳೆ ಸಂರಕ್ಷಣೆ ಮಾಡಿಕೊಂಡು ಬಂದಿದ್ದ ರೈತರಿಗೆ ಜಿನುಗು ಮಳೆ ಸಂಕಷ್ಟ ತರುತ್ತಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದಾ

ನೆಲಕ್ಕುರುಳಿತು ಕಟಾವಿಗೆ ಬಂದ ಭತ್ತ

ಕಾರಟಗಿ: ವಾಯುಭಾರ ಕುಸಿತದಿಂದ ಉಂಟಾಗಿರುವ “ನಿವಾರ್‌’ ಚಂಡಮಾರುತದ ವಕ್ರದೃಷ್ಟಿ ರೈತರು ಬೆಳೆದ ಭತ್ತದ ಮೇಲೆ ಬಿದ್ದಿದೆ. ಶುಕ್ರವಾರ ಬೆಳಗ್ಗೆಯಿಂದ ಶನಿವಾರ ಬೆಳಗಿನ ಜಾವದವರೆಗೆ ಜಿಟಿ ಜಿಟಿ ಮಳೆ ಸುರಿದಿದ್ದು, ಇದರಿಂದ ತಾಲೂಕು ವ್ಯಾಪ್ತಿಯಲ್ಲಿ ಕಟಾವು ಹಂತದಲ್ಲಿದ್ದ ಭತ್ತದ ಬೆಳೆ ನೆಲಕ್ಕುರುಳಿದ್ದು, ರೈತರು ಆತಂಕಗೊಂಡಿದ್ದಾರೆ. ಭತ್ತ ನಾಟಿ ಮಾಡಿದಾಗಿನಿಂದ ನಿರಂತರ ಸುರಿದ ಮಳೆಗೆ ಭತ್ತ ಕಣೆ ರೋಗಕ್ಕೆ ತುತ್ತಾಗಿತ್ತು. ಶಕ್ತಿ ಮೀರಿ ಬೆಳೆ ಉಳಿಸಿಕೊಂಡಿದ್ದ ರೈತನಿಗೆ ಈಗ ಏನು ಮಾಡಬೇಕೆಂದು ತೋಚದೆ ಮುಗಿಲು ನೋಡುವಂತಾಗಿದೆ. ಬೆಳೆ ನೆಲಕ್ಕೆಬಿದ್ದಿರುವಾಗ ಕಟಾವು ಯಂತ್ರದಿಂದ ಕೊಯ್ಲ  ಮಾಡಿಸುವುದೇ ಸವಾಲಿನ ಕೆಲಸವಾಗಿದೆ.

ನೆಲಕ್ಕೊರಗುವ ಮುಂಚೆಯೇ ಗಂಟೆಗೆ2500 ರೂ. ಕೊಟ್ಟರೂ ಬಾರದಿದ್ದ ಕಠಾವು ಯಂತ್ರಗಳು ಈಗ ನಿಗದಿ  ಪಡಿಸಿದ ಬೆಲೆಗಿಂತ ಹೆಚ್ಚು ಹಣ ಕೇಳುತ್ತಿದ್ದಾರೆ.ನೆಲಕ್ಕೆ ಬಿದ್ದ ಭತ್ತ ಕಟಾವು ಮಾಡಲು ಎಕರೆಗೆ 2 ಗಂಟೆ ಹಿಡಿಯುತ್ತೇ ದುಬಾರಿ ಬೆಲೆ ತೆರುವುದು ಮಾತ್ರ ತಪ್ಪಿದ್ದಲ್ಲ ಎನ್ನುತ್ತಾರೆರೈತರು.

ಪರಿಹಾರಕ್ಕೆ ರೈತರ ಆಗ್ರಹ: ಜಿಟಿ ಜಿಟಿಮಳೆ ಸುರಿಯುತ್ತಿದ್ದರೆ ಮಾರುಕಟ್ಟೆಗಳಲ್ಲಿ ಭತ್ತವನ್ನು ಕೇಳುವವರೇ ಇಲ್ಲದಂತಾಗುತ್ತದೆ. ಪಟ್ಟಣದ ಹೊರವಲಯದಲ್ಲಿ ರೈತರೊಬ್ಬರು ತಾವು ಬೆಳೆದ ಬೆಳೆ ಎಕರೆಗೆ 40ರಿಂದ 45 ಚೀಲ ಇಳುವರಿಯ ನಿರೀಕ್ಷೆಯಲ್ಲಿದ್ದರು. ಆದರೆ “ನಿವಾರ್‌’ ಚಂಡಮಾರುತದಿಂದಾಗಿ ಮಳೆಯ ಆರ್ಭಟಕ್ಕೆ ಸಿಲುಕಿರುವ ಅವರ ಭತ್ತ ಸಂಪೂರ್ಣ ನೆಲಕ್ಕುರುಳಿರುದ್ದು, ಕಣ್ಣೀರಿಡುತ್ತಿದ್ದಾರೆ. ಒಟ್ಟಾರೆ ಹೇಗೆ ಲೆಕ್ಕಾಚಾರ ಮಾಡಿದರೂ ಪ್ರತಿ ಎಕರೆಗೆ 15 ಸಾವಿರ ರೂ. ನಷ್ಟ ಉಂಟಾಗುತ್ತೆ ಎನ್ನಲಾಗುತ್ತಿದೆ. ಸರ್ಕಾರ ಸಂಕಷ್ಟಕ್ಕೆ ತುತ್ತಾಗಿರುವ ರೈತರಿಗೆ ಬೆಳೆ ಪರಿಹಾರ ನೀಡುವುದರ ಮೂಲಕ ರೈತರ ಬೆನ್ನಿಗೆ ನಿಲ್ಲಬೇಕು ಎಂದು ರೈತರು ಆಗ್ರಹಿಸಿದ್ದಾರೆ

ನಿವಾರ್‌ ಮಳೆಯು ಡಿ. 3ರ ವರೆಗೂ ಇರುವ ಕುರಿತು ಹವಾಮಾನ ಇಲಾಖೆ ವರದಿ ಹೇಳುತ್ತದೆ. ಹಾಗಾಗಿ ರೈತರು ತಮ್ಮ ಬೆಳೆ ಕಟಾವು ಮಾಡುವುದನ್ನು ಮೂರು ದಿನ ಮುಂದೂಡಿದರೆ ಒಳ್ಳೆಯದು. ಈಗಾಗಲೇ ಕಟಾವು ಮಾಡಿದ ರೈತರು ಬೆಳೆ ಸಂರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಬೇಕು. ಇನ್ನು ಕೆಲವು ಬೆಳೆಗಳಿಗೆ ರೋಗ ಬಾಧೆ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ದ್ರಾಕ್ಷಿ ಬೆಳೆಗಳಿಗೆ ಸಿಲೀಂದ್ರ ನಾಶಕ ಔಷಧ  ಸಿಂಪರಣೆ ಮಾಡುವುದು. ಕೃಷಿ ಬೆಳೆಗಳಿಗೆ ರಸಾಯನಿಕ ಸಿಂಪರಣೆ ಮಾಡುವುದು ಒಳ್ಳೆಯದು.

 ಡಾ| ಬದರಿ ಪ್ರಸಾದ್‌, ಕೃಷಿ ವಿಜ್ಞಾನಿ, ಕೊಪ್ಪಳ

ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next