Advertisement

ನಿತ್ಯಾನಂದ ಹಳದಿಪೂರ ಅವರಿಗೆ ಡಾ.ಮನಸೂರ ರಾಷ್ಟ್ರೀಯ ಸಂಗೀತ ಪ್ರಶಸ್ತಿ ಪುರಸ್ಕಾರ

07:30 PM Dec 28, 2021 | Team Udayavani |

ಧಾರವಾಡ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ|ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ (ರಿ) ಟ್ರಸ್ಟ್ ವತಿಯಿಂದ ಡಾ|ಮಲ್ಲಿಕಾರ್ಜುನ ಮನಸೂರ 111ನೇ ಜನ್ಮ ದಿನಾಚರಣೆ ಪ್ರಯುಕ್ತ ಕೊಡ ಮಾಡುವ 1 ಲಕ್ಷ ನಗದು ಒಳಗೊಂಡ ರಾಷ್ಟ್ರೀಯ ಪ್ರಶಸ್ತಿಗೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಮುಂಬಯಿಯ ಪಂ.ನಿತ್ಯಾನಂದ ಹಳದಿಪೂರ ಭಾಜನರಾಗಿದ್ದಾರೆ.

Advertisement

ಇದಲ್ಲದೇ 24 ಸಾವಿರ ನಗದು ಒಳಗೊಂಡ ಯುವ ಪ್ರಶಸ್ತಿಗೆ ಧಾರವಾಡದ ಯುವ ಗಾಯಕಿ ಶಿವಾನಿ ಮಿರಜಕರ ಆಯ್ಕೆಯಾಗಿದ್ದು, 2022 ಜ.1 ರಂದು ಸಂಜೆ 5;30 ಗಂಟೆಗೆ ನಗರದ ಸೃಜನಾ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಪ್ರಶಸ್ತಿ ಪ್ರದಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಗಮಿಸಲಿದ್ದಾರೆ. ಶಾಸಕ ಅರವಿಂದ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲೆಯ ವಿಧಾನ ಪರಿಷತ್ ಸದಸ್ಯರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿ ಪ್ರದಾನದ ಬಳಿಕ ನಡೆಯುವ ಸಂಗೀತ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತರಾದ ಪಂ.ನಿತ್ಯಾನಂದ ಹಳದಿಪೂರ ಅವರಿಂದ ಕೊಳಲು ವಾದನ ಹಾಗೂ ಶಿವಾನಿ ಮಿರಜಕರ ಗಾಯನ ಕಾರ್ಯಕ್ರಮ ಜರುಗಲಿದೆ. ಇದಲ್ಲದೇ ಡಿ.31 ರಂದು ಬೆಳಿಗ್ಗೆ 9 ಗಂಟೆಗೆ ಮನಸೂರ ಟ್ರಸ್ಟ್ ಆವರಣದ ಡಾ|ಮಲ್ಲಿಕಾರ್ಜುನ ಮನಸೂರ ಸಮಾಧಿಗೆ ಪೂಜೆ, ಸಂಗೀತ ಸೇವೆ ನಡೆಯಲಿದೆ. ಇದಾದ ಬಳಿಕ 10;30 ಗಂಟೆಗೆ ಮನಸೂರ ಗ್ರಾಮದ ಮಲ್ಲಿಕಾರ್ಜುನ ಮನಸೂರ ಅವರು ಹುಟ್ಟಿದ ಮನೆಯಲ್ಲಿ ಪುಷ್ಪಾರ್ಪಣೆ ಪೂಜಾ ಕಾರ್ಯಕ್ರವೂ ಜರುಗಲಿದೆ.

ಇದನ್ನೂ ಓದಿ : ಚುನಾವಣೆಯ ನೆಪ ಮಾಜಿ ಶಾಸಕರಿಂದ ಪೊಳ್ಳು ಆರೋಪ: ಕೆ.ಮಹದೇವ್

ಪಂ.ಹಳದೀಪೂರ ಬಗ್ಗೆ ಒಂದಿಷ್ಟು : ದೇಶದ ಅಗ್ರಗಣ್ಯ ಕೊಳಲು ವಾದಕರಾಗಿದ್ದು, ಸೇನಿಯಾ-ಮೈಹರ್ ಘರಾನಾದ ವಿದೂಷಿ ಅನ್ನಪೂರ್ಣ ದೇವಿ ಅವರ ಹಿರಿಯ ಶಿಷ್ಯರು. ಮುಂಬನ ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿದ್ದು, ಮನೆಯಲ್ಲಿ ಸಂಗೀತದ ವಾತಾವರಣವಿದೆ. ಮನೆಯಲ್ಲಿಯೇ ಸಂಗೀತ ಸಂಸ್ಕಾರ ಪಡೆದ ನಂತರದ ಎರಡು ದಶಕಗಳಲ್ಲಿ ಪನ್ನಾಲಾಲ್ ಘೋಷ್ ಅವರ ಹಿರಿಯ ಶಿಷ್ಯರಾದ ಪಂಡಿತ್ ಚಿದಾನಂದ ನಗರ್ಕರ್ ಹಾಗೂ ಪಂಡಿತ್ ದೇವೇಂದ್ರ ಮುರುಡೇಶ್ವರ ಅವರಲ್ಲಿ ಉನ್ನತ ಸಂಗೀತ ಅಭ್ಯಾಸ ಮಾಡಿದರು. 1986 ರಲ್ಲಿ ಸೇನಿಯಾ ಮೈಹರ್-ಘರಾನಾದ ಮೇರು ಪರ್ವತ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಸಾಹೇಬ್ (ಬಾಬಾ) ಅವರ ಪುತ್ರಿ ಅನ್ನಪೂರ್ಣ ದೇವಿಯವರ ಗರಡಿಯಲ್ಲಿ ಹಳದೀಪುರರ ಸಂಗೀತ ಹೊಸ ಮಜಲು ಪಡೆದಿದ್ದಾರೆ. ರೇಡಿಯೋ ಹಾಗೂ ದೂರದರ್ಶನದ ಎ ಟಾಪ್ೞಮಾನ್ಯತೆ ಪಡೆದ ನಿತ್ಯಾನಂದ ಹಳದಿಪೂರ್ ಅವರು ರಾಷ್ಟ್ರೀಯ ಸಂಗೀತ ಸಮ್ಮೇಳನ, ಆಕಾಶವಾಣಿ ಸಂಗೀತ ಸಮ್ಮೇಳನಗಳು, ಸಾರ್ಕ್ ಸಂಗೀತ ಸಮ್ಮೇಳನ ಹಾಗೂ ಅಪ್ನಾ ಉತ್ಸವ್ ಸರಣಿಗಳಲ್ಲಿ ತಮ್ಮ ಸಂಗೀತ ಸುಧೆ ಹರಿಸಿದ್ದು, ಈಗಾಗಲೇ ಸಾಕಷ್ಟು ಪ್ರಶಸ್ತಿಗಳು ಅರಿಸಿ ಬಂದಿದೆ.

ಶಿವಾನಿ ಬಗ್ಗೆ ಒಂದಿಷ್ಟು : ಧಾರವಾಡದ ಉದಯೋನ್ಮುಖ ಸಂಗೀತ ಪ್ರತಿಭೆಯಾಗಿದ್ದು, ಬಾಲ್ಯದಿಂದಲೇ ಸಂಗೀತದತ್ತ ಒಲವು. ಚಂದ್ರಶೇಖರ ಪುರಾಣಿಕಮಠ ಅವರಿಂದ ದೊರೆತ ಅತ್ಯಮೂಲ್ಯ ಪ್ರಾರಂಭಿಕ ಹಂತದ ಸಂಗೀತ ಶಿಕ್ಷಣದ ಬಳಿಕ ಕಿರಾನಾ ಘರಾನೆಯ ಪಂ.ಕೈವಲ್ಯಕುಮಾರ ಗುರುವ ಅವರಿಂದ ಆಳವಾದ ಮಾರ್ಗದರ್ಶನ ಪಡೆದು, ಪ್ರಸ್ತುತ ಜೈಪುರ-ಗ್ವಾಲಿಯರ್-ಆಗ್ರಾ ಘರಾಣೆಗಳ ಶ್ರೇಷ್ಠ ಗಾಯಕರು ಪದ್ಮಶ್ರೀ ಪುರಸ್ಕೃತ ಪಂ.ಉಲ್ಲಾಸ ಕಶಾಳಕರ್ ಅವರಲ್ಲಿ ಸಂಗೀತಾಭ್ಯಾಸ ಮುಂದುವರೆಸಿದ್ದಾರೆ.ಆಕಾಶವಾಣಿಯ ಬಿ-ಹೈ ಶ್ರೇಣಿಯ ಕಲಾವಿದರಾಗಿದ್ದು, ಕ್ಲಾಸಿಕಲ್ ವೋಕಲ್ ಆಪ್ ಇಂಡಿಯಾ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next