Advertisement
ಉಡುಪಿ: ಮುಂಗಾರು ಪೂರ್ವ ಮಳೆ ಆರಂಭವಾಗಿದೆ. ನಗರಸಭೆ ಮಳೆಗಾಲಕ್ಕೆ ಸಿದ್ಧತೆ ಮಾಡಿ ಕೊಳ್ಳದೆ ಇರುವುದರಿಂದ ನಿಟ್ಟೂರು ಮತ್ತು ಕಿನ್ನಿಮೂಲ್ಕಿ ವಾರ್ಡ್‌ಗಳಲ್ಲಿ ಎದುರಾಗ ಬಹುದಾದ ಸಮಸ್ಯೆಗಳು ಚಿಂತೆಗೀಡು ಮಾಡಿವೆ. ಎರಡೂ ವಾರ್ಡ್‌ಗಳಲ್ಲಿ ಮಳೆ ನೀರು ಹರಿಯುವ ಚರಂಡಿಗಳಲ್ಲಿ ಕೊಳಚೆ ನೀರು ಹರಿಯುತ್ತಿದೆ. ಕೆಲವೆಡೆ ಶೇ. 90ರಷ್ಟು ಕಸ, ಪ್ಲಾಸ್ಟಿಕ್, ಹೂಳು ತುಂಬಿದೆ. ಮಳೆಗಾಲ ಪ್ರಾರಂಭವಾದರೆ ಮಳೆ ನೀರು ಉಕ್ಕಿ ಹರಿಯಲಿದೆ.
ವರ್ಷದ 365 ದಿನವೂ ಹನುಮಂತ ನಗರ ಸಹಿತ ವಿವಿಧ ರಸ್ತೆಗಳ ಮ್ಯಾನ್ ಹೋಲ್‌ಗಳು ಉಕ್ಕುತ್ತವೆ. ಮಳೆಗಾಲ ಪ್ರಾರಂಭವಾದರೆ ಸಾಕು, ಕೊಳಚೆ ನೀರು ಮಳೆ ನೀರಿನೊಂದಿಗೆ ಸೇರಿ ಊರೆಲ್ಲ ಹರಿಯುತ್ತದೆ. ಕೊಳಚೆ ಅಲ್ಲಲ್ಲಿ ನಿಲ್ಲುವುದರಿಂದ ಸಾಂಕ್ರಾಮಿಕ ರೋಗ ಭೀತಿ ತಪ್ಪಿದ್ದಲ್ಲ. 2017ರಲ್ಲಿ ನಿಟ್ಟೂರು ವಾರ್ಡ್‌ನಲ್ಲಿ ಸುಮಾರು 52ಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು.
ಇಲ್ಲಿಯೇ ಇಲ್ಲ ಚರಂಡಿ ವ್ಯವಸ್ಥೆ
ಜಿಲ್ಲಾಧಿಕಾರಿ ನಿವಾಸ ಇರುವುದು ಕಿನ್ನಿಮೂಲ್ಕಿ ವಾರ್ಡ್‌ನಲ್ಲಿಯೇ. ಇಲ್ಲೇ ಇರುವ ಸರಕಾರಿ ನೌಕರರ ಕಾಲನಿಯಲ್ಲಿ ವಿವಿಧ ಸರಕಾರಿ ಇಲಾಖೆಗಳ 60ಕ್ಕೂ ಅಧಿಕ ಸಿಬಂದಿ ವಾಸವಾಗಿದ್ದಾರೆ. ಇಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಕೊಳಚೆ ನೀರು ಮನೆ ಸುತ್ತಮುತ್ತ ಸಂಗ್ರಹ ವಾಗುತ್ತಿದೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಪ್ರಸರಣದ ತಾಣಗಳಾಗಿ ಪರಿವರ್ತನೆಯಾಗುತ್ತಿವೆ, ಸೊಳ್ಳೆ ಗಳ ಉತ್ಪತ್ತಿ ಕೇಂದ್ರವಾಗುತ್ತಿವೆ. ಉರಿಯದ ಬೀದಿ ದೀಪಗಳು
ಕಿನ್ನಿಮೂಲ್ಕಿ, ನಿಟ್ಟೂರು ವಾರ್ಡ್ ಗಳ ಕೆಲವೆಡೆ ವಿದ್ಯುತ್ ತಂತಿಗಳು ಜೋತು ಬಿದ್ದಿವೆ. ಕೆಲವೆಡೆ ಹಗಲು ಬೀದಿ ದೀಪ ಉರಿಯುತ್ತಿವೆ. ನಗರ ಸಭೆಗೆ ಸ್ಥಳೀಯರು ದೂರು ನೀಡಿ ಸುಸ್ತಾಗಿದ್ದಾರೆ. ಜನರು ಸಮಸ್ಯೆ ಹೇಳಿದರೆ, ಅಧಿಕಾರಿಗಳು ಕೊರೊನಾದಿಂದಾಗಿ ಕಾರ್ಮಿಕರು ಊರಿಗೆ ಸಿಬಂದಿ ಕೊರತೆ ಇದೆ ಎಂದು ಹೇಳುತ್ತಾರೆ.
ಎಚ್ಚರವಾಗಿ
ನಗರಸಭೆ ಮಳೆಗಾಲದ ಮುನ್ನೆಚ್ಚರಿಕೆ ಕ್ರಮವನ್ನು ನಿಧಾನಗೊಳಿಸಿದೆ. ಲಾಕ್‌ಡೌನ್ ನಿಂದಾಗಿ ಕಾರ್ಮಿಕರ ಕೊರತೆ, ಯಂತ್ರ ಗಳ ಕೊರತೆಯ ನೆಪ ಹೇಳುತ್ತಿದೆ. ಮಳೆಗಾಲ ಪ್ರಾರಂಭವಾದರೆ ವಾರ್ಡ್ ನ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲು ತ್ತದೆ. ಕೊಂಬೆಗಳು ತುಂಡಾಗಿ ವಿದ್ಯುತ್ ತಂತಿ ಮೇಲೆ ಬಿದ್ದು ಅನಾಹುತ ಸಂಭವಿಸುವ ಮುನ್ನ ಸ್ಥಳೀಯಾಡಳಿತ, ಜನ ಪ್ರತಿನಿಧಿಗಳು ಎಚ್ಚೆತ್ತು ಕೊಳ್ಳಬೇಕು ಎನ್ನುವುದು ವಾರ್ಡ್ ಜನರ ಅಭಿಪ್ರಾಯ.
Related Articles
ಎರಡು ತಿಂಗಳ ಹಿಂದೆಯೇ ಚರಂಡಿಗಳ ಹೂಳೆತ್ತಲು ಅಗತ್ಯವಿರುವ ಜೆಸಿಬಿ, ಕಾರ್ಮಿಕರನ್ನು ಒದಗಿಸುವಂತೆ ನಗರಸಭೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯ ವರೆಗೂ ನೀಡಿಲ್ಲ. ಎಪ್ರಿಲ್‌ನಲ್ಲಿ ನಡೆಯಬೇಕಿದ್ದ ಮಳೆಗಾಲದ ಸಿದ್ಧತೆ ಮೇ ಕಳೆದರೂ ಪ್ರಾರಂಭವಾಗಿಲ್ಲ.
-ಸಂತೋಷ್ ಜತ್ತನ್, ನಿಟ್ಟೂರು ವಾರ್ಡ್ ಸದಸ್ಯ.
Advertisement
ಹೂಳೆತ್ತುವ ಕಾರ್ಯ ವಿಳಂಬಕಿನ್ನಿಮೂಲ್ಕಿ ವಾರ್ಡ್‌ನ ರಸ್ತೆಯಲ್ಲಿ ಮಳೆ ನೀರು ನಿಲ್ಲುವ ಪ್ರದೇಶ ಗುರುತಿಸಿ ನಗರಸಭೆಗೆ ನೀಡಲಾಗಿದೆ. ಕೊರೊನಾದಿಂದ ತೋಡುಗಳ ಹೂಳೆತ್ತುವ ಕಾರ್ಯ ತಡವಾಗಿದೆ.
-ಅಮೃತಾ ಕೃಷ್ಣಮೂರ್ತಿ,
ಕಿನ್ನಿಮೂಲ್ಕಿ ವಾರ್ಡ್ ಸದಸ್ಯೆ.