ಕಾರ್ಕಳ : ಪ್ರತಿಯೊಬ್ಬ ವ್ಯಕ್ತಿಯು ಜೀವನ ಪೂರ್ತಿ ಕಲಿಯುತ್ತಲೇ ಇರುತ್ತಾನೆ. ಅದೊಂದು ನಿರಂತರ ಪ್ರಕ್ರಿಯೆ. ವಿದ್ಯಾರ್ಥಿಗಳಲ್ಲಿ ಕಲಿಕೆಯ ಬಗ್ಗೆ ವ್ಯಾಮೋಹ ಅತೀ ಅಗತ್ಯ. ಅವರ ಆಸಕ್ತಿಯ ಕ್ಷೇತ್ರದ ಆಯ್ಕೆ ಕಲಿಕೆಯ ವ್ಯಾಮೋಹ ಮತ್ತು ಕಲಿಕೆಯನ್ನು ಅವಲಂಬಿಸಿದೆ. ಈ ಬಗ್ಗೆ ಚಿಂತನೆ ಸದಾಕಾಲ ನಡೆಯಬೇಕು ಎಂದು ಕ್ಯಾರಿಯರ್ 36ರ ಹೊಸದಿಲ್ಲಿ ಸಂಸ್ಥೆಯ ಸ್ಥಾಪಕಾಧ್ಯಕ್ಷ ಮಹೇಶ್ವರ ಪೆರಿ ಹೇಳಿದರು.
ಅವರು ನಿಟ್ಟೆಯ ಜಸ್ಟಿಸ್ ಕೆ.ಎಸ್. ಹೆಗ್ಡೆ ಉದ್ಯಮಾಡಳಿತ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿದ ನಿಟ್ಟೆ ಬ್ಲೂಮ್‌ಬರ್ಗ್ ಲ್ಯಾಬ್‌ನ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಸಂಸ್ಥೆಯ ಹಳೆ ವಿದ್ಯಾರ್ಥಿ ನಿಶಾಂತ್ ಫ್ರಾನ್ಸಿಸ್ ಮಾತನಾಡಿ, ದೇಶ ಎಲ್ಲ ರೀತಿಯಲ್ಲಿಯೂ ವೇಗವಾಗಿ ಬೆಳೆಯುತ್ತಿದೆ. ಕೆಲವೊಂದು ಉದ್ದಿಮೆಗಳು ಮುಂಚೂಣಿಯಲ್ಲಿವೆ. ಅಂತಹ ಉದ್ದಿಮೆಗಳನ್ನು ಮತ್ತಷ್ಟು ಬೆಳೆಸಬೇಕು. ವೃತ್ತಿಪರತೆ, ಮಾನವೀಯ ಮೌಲ್ಯಗಳು, ಸಮಯ ನಿರ್ವಹಣೆಯೂ ಇಂದಿನ ಅನಿವಾರ್ಯತೆ ಎಂದರು.
ನಿಟ್ಟೆ ವಿ.ವಿ.ಯ ಸಹಕುಲಾಧಿಪತಿ ವಿಶಾಲ್ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿಟ್ಟೆ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ಶುಭ ಹಾರೈಸಿದರು. ಡಾ| ಕೃಷ್ಣ ಪ್ರಸಾದ್ ಬ್ಲೂಮ್‌ಬರ್ಗ್ ಲ್ಯಾಬ್‌ನ ಮಹತ್ವ ತಿಳಿಸಿದರು. ಸಂಸ್ಥೆಯ ನಿರ್ದೇಶಕ ಡಾ| ಕೆ. ಶಂಕರನ್ ಸ್ವಾಗತಿಸಿ, ಸಂಜನಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.