Advertisement

15 ದಿನಗಳ ಒಳಗೆ ಸುರತ್ಕಲ್‌ ಟೋಲ್‌ ತೆರವು : ಟ್ರಕ್‌ ಮಾಲಕರ ಸಂಘಕ್ಕೆ ಗಡ್ಕರಿ ಭರವಸೆ

08:30 AM Sep 13, 2022 | Team Udayavani |

ಸುರತ್ಕಲ್‌: ಸುರತ್ಕಲ್‌ನ ಟೋಲ್‌ ಗೇಟನ್ನು ತೆರವುಗೊಳಿಸುವ ಬಗ್ಗೆ 15 ದಿನಗಳ ಒಳಗಾಗಿ ಕ್ರಮ ಜರಗಿಸುವ ಭರವಸೆಯನ್ನು ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಟ್ರಕ್‌ ಮಾಲಕರ ಸಂಘದ ಅಧ್ಯಕ್ಷ ಸುನೀಲ್‌ ಡಿ’ಸೋಜಾ ಹೇಳಿದರು.

Advertisement

ಕೂಳೂರಿನಲ್ಲಿ ಮಾಧ್ಯಮ ದೊಂದಿಗೆ ಮಾತನಾಡಿದ ಅವರು, ನಮ್ಮ ಸಂಘದ ರಾಜ್ಯಾಧ್ಯಕ್ಷ ಡಾ| ಜಿ.ಆರ್‌. ಷಣ್ಮುಗಪ್ಪ ಅವರು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರನ್ನು ಸೆ. 9ರಂದು ಟ್ರಾನ್ಸ್‌ ಪೋರ್ಟ್‌ ಮೀಟ್‌ ಸಭೆಯ ಬಳಿಕ ಭೇಟಿ ಮಾಡಿ ಟೋಲ್‌ ಗೇಟ್‌ ತೆರವು ಬಗ್ಗೆ ಮನವಿ ನೀಡಿದ್ದು, ಸಚಿವರಿಂದ ಭರವಸೆ ದೊರಕಿದೆ. ಟೋಲ್‌ ಗೇಟ್‌ ವಿರೋಧಿ ಸಮಿತಿ ಸೆ. 13ರಂದು ನಡೆಸಲು ಉದ್ದೇಶಿಸಿರುವ ಧರಣಿಯಲ್ಲಿ ನಾವೂ ಭಾಗಿಯಾಗುತ್ತೇವೆ. ಸರಕಾರ ಮಾತು ತಪ್ಪಿದಲ್ಲಿ ಟ್ರಕ್‌ಗಳ ಮೂಲಕ ಟೋಲ್‌ ಗೇಟ್‌ಗೆ ಮುತ್ತಿಗೆ ಹಾಕುತ್ತೇವೆ ಎಂದರು.

ಮಂಗಳೂರಿನಿಂದ ಲಾರಿಗಳಿಗೆ ಬಾಡಿಗೆ ನಿಗದಿ ಪಡಿಸುವ ಬಗ್ಗೆ ರಾಜ್ಯಾಧ್ಯಕ್ಷ ಷಣ್ಮುಗಪ್ಪ ಹಾಗೂ ಇತರರೊಂದಿಗೆ ನಮ್ಮ ಸಂಘದ ಮಹತ್ವದ ಸಭೆ ಸೆ. 13ರಂದು ಮಂಗಳೂರಿನಲ್ಲಿ ನಡೆಯಲಿದೆ. ಜಂಟಿ ಸಭೆಯಲ್ಲಿ ದರ ನಿಗದಿ ಪಡಿಸಿ ಜಾರಿಗೆ ತರುತ್ತೇವೆ. ಇದಕ್ಕೆ ವಿರೋಧ ಕಂಡುಬಂದಲ್ಲಿ ಲಾರಿ ಮುಷ್ಕರ ಸಹಿತ ನಮ್ಮ ಪ್ರತಿಭಟನೆ ಮುಂದಿನ ದಿನಗಳಲ್ಲಿ ಉಗ್ರವಾಗಿ ನಡೆಯಲಿದೆ ಎಂದು ತಿಳಿಸಿದರು.

ಧರಣಿಗೆ ಬೆಂಬಲ
ಸುರತ್ಕಲ್‌ ಟೋಲ್‌ ಗೇಟ್‌ ಮುಂಭಾಗ ಸೆ. 13ರಂದು ಹಮ್ಮಿಕೊಂಡಿರುವ ಸಾಮೂಹಿಕ ಧರಣಿಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಟ್ಯಾಕ್ಸಿಮೆನ್ಸ್‌ ಮತ್ತು ಮ್ಯಾಕ್ಸಿ ಕ್ಯಾಬ್‌ ಅಸೋಸಿಯೇಶನ್‌, ಉಭಯ ಜಿಲ್ಲೆಗಳ ಬಸ್‌ ಮಾಲಕರ ಸಂಘಟನೆಗಳು, ಕಾರ್ಮಿಕರ ಸಂಘಟನೆಗಳು, ವಿವಿಧ ಪಕ್ಷಗಳು ಸೇರಿದಂತೆ ಹಲವು ಸಂಘ- ಸಂಸ್ಥೆಗಳು ಭಾಗವಹಿಸುವುದಾಗಿ ಘೋಷಿಸಿವೆ.

ಇದನ್ನೂ ಓದಿ : ಎನ್‌ಇಪಿ: ಪರೀಕ್ಷಾ ಸುಧಾರಣೆ, ಕಲಿಕಾ ಮೌಲ್ಯಮಾಪನ

Advertisement
Advertisement

Udayavani is now on Telegram. Click here to join our channel and stay updated with the latest news.

Next