Advertisement

ನಿತೀಶ್‌ ಗೆಲುವು ಗೆಲುವಲ್ಲ; ರಾಜನೀತಿಗೆ ಒದಗಿದ ಸೋಲು

07:36 AM Jul 29, 2017 | Team Udayavani |

ಬಿಹಾರ ರಾಜಕಾರಣದಲ್ಲಿ ನಿತೀಶ್‌ ಕೈಗೊಂಡ ನಿರ್ಧಾರಗಳು ರಾಜಧರ್ಮದ ನಡೆಯಲ್ಲ. ಅಲ್ಲಿನ ರಾಜಕೀಯದಲ್ಲಿ ಅವರು ಗೆದ್ದಿರಬಹುದು. ಆದರೆ ರಾಜನೀತಿ ಸೋತಿದೆ. 

Advertisement

ಬಿಹಾರದ ರಾಜಕೀಯದಲ್ಲಿ ಬೀಸಿದ ಬಿರುಗಾಳಿ ನಿತೀಶ್‌ ಕುಮಾರ್‌ ಆರನೇ ಸಲ ಮುಖ್ಯಮಂತ್ರಿಯಾಗಿ ವಿಶ್ವಾಸ ಮತ ಗೆಲ್ಲುವುದರೊಂದಿಗೆ ಸದ್ಯಕ್ಕೆ ತಣ್ಣಗಾಗಿದೆ. ಆದರೆ ಇದು ಇನ್ನೊಂದು ಪ್ರಚಂಡ ಚಂಡಮಾರುತ ಬೀಸುವ ಮೊದಲು ನೆಲೆಸುವ ಶಾಂತಿ ಎಂದು ಹೇಳಲು ಹಲವು ಕಾರಣಗಳಿವೆ. ಏಕೆಂದರೆ ನಿತೀಶ್‌ ಬಿಜೆಪಿ ನೆರವಿನಿಂದ ಸರಕಾರ ರಚಿಸಿದ ರೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಆರ್‌ಜೆಡಿ ನಿರ್ಧರಿಸಿದೆ. ಸರಕಾರ ಪತನಗೊಂಡ ಅಥವಾ ವಿಸರ್ಜನೆಯಾದ ಬಳಿಕ ಹೊಸ ಸರಕಾರ ರಚನೆಯಾಗುವ ಸಂದರ್ಭದಲ್ಲಿ ಅತಿ ಹೆಚ್ಚು ಸ್ಥಾನ ಹೊಂದಿದ ಪಕ್ಷವನ್ನು ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನಿಸುವುದು ಸಂಪ್ರದಾಯ. ಆದರೆ ಬಿಹಾರದ ರಾಜ್ಯಪಾಲರು 80 ಸ್ಥಾನಗಳನ್ನು ಹೊಂದಿರುವ ಲಾಲೂ ಪ್ರಸಾದ್‌ ನೇತೃತ್ವದ ಆರ್‌ಜೆಡಿಗೆ ಸರಕಾರ ರಚನೆಗೆ ಹಕ್ಕುಮಂಡಿಸುವ ಅವಕಾಶ ನೀಡದೆ 71 ಸ್ಥಾನಗಳನ್ನು ಹೊಂದಿರುವ ನಿತೀಶ್‌ಗೆ ಪ್ರಮಾಣವಚನ ಬೋಧಿಸಿರುವುದು ಸರಿಯಾದ ಕ್ರಮವಲ್ಲ.

ಬಿಹಾರದಲ್ಲಿ ಸದ್ಯದಲ್ಲೇ ರಾಜಕೀಯ ವಿಪ್ಲವವೊಂದು ಸಂಭವಿಸಲಿದೆ ಎನ್ನುವ ಸುಳಿವು ಕೆಲ ತಿಂಗಳ ಹಿಂದೆಯೇ ಇತ್ತು. ಮೋದಿಯ ನೋಟು ರದ್ದುಗೊಳಿಸಿದ ಕ್ರಮವನ್ನು ನಿತೀಶ್‌ ಕುಮಾರ್‌ ಬಲವಾಗಿ ಸಮರ್ಥಿಸಿಕೊಂಡಾಗಲೇ ಅವರ ಮನಸ್ಸು ಮತ್ತೆ ಹಳೆ ಸಂಗಾತಿಗಾಗಿ ಹಂಬಲಿಸುತ್ತಿದೆ ಎನ್ನುವುದನ್ನು ಚಾಣಾಕ್ಷರು ಅರ್ಥ ಮಾಡಿಕೊಳ್ಳಬಹುದಿತ್ತು. ಆದರೆ ಮಹಾಘಠಬಂಧನ್‌ ಕಟ್ಟಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನು ಹಿಮ್ಮೆಟ್ಟಿಸುವ ಕನಸು ಕಾಣುತ್ತಿದ್ದ ಕಾಂಗ್ರೆಸ್‌ಗಾಗಲಿ ಹಾಗೂ ಉಳಿದ ಪಕ್ಷಗಳಿಗಾಗಲಿ ಇದು ಅರ್ಥವಾಗಿರಲಿಲ್ಲ. ಉಪಮುಖ್ಯಮಂತ್ರಿಯಾಗಿದ್ದ ಲಾಲೂ ಪುತ್ರ ತೇಜಸ್ವಿ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಎಫ್ಐಆರ್‌ ದಾಖಲಾಗಿರುವುದು ಬಿಹಾರದಲ್ಲಿ ಮಹಾಘಠಬಂಧನ್‌ ಮುರಿಯಲು ನೆಪವಾಗಿದೆ. ಹೀಗೆ 2015ರಲ್ಲಿ ಮೋದಿಯನ್ನು ವಿರೋಧಿಸುವ ಏಕೈಕ ಅಜೆಂಡಾದೊಂದಿಗೆ ಅಸ್ತಿತ್ವಕ್ಕೆ ಬಂದಿದ್ದ ಮಹಾಘಠಬಂಧನ್‌ ಆಯುಷ್ಯ ಮುಗಿದಿದೆ. 

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸುವ ಸಾಮರ್ಥ್ಯ ಯಾವ ಪಕ್ಷಕ್ಕೂ ಇಲ್ಲ. ಹೀಗಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಲಾಲೂ ಪ್ರಸಾದ್‌  ರಾಷ್ಟ್ರಮಟ್ಟದಲ್ಲೂ ಬಿಹಾರ ಮಾದರಿಯ ಮೈತ್ರಿಕೂಟ ರಚಿಸುವ ನಿಟ್ಟಿನಲ್ಲಿ ಪ್ರಯತ್ನ ನಿರತರಾಗಿದ್ದರು. ಹಾಗೊಂದು ವೇಳೆ ಮಹಾಮೈತ್ರಿಕೂಟ ರಚನೆಯಾದರೆ ವರ್ಚಸ್ವಿ ನಾಯಕ ನಿತೀಶ್‌ ಕುಮಾರ್‌ ಅವರೇ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲಿದ್ದರು. ಆದರೆ ಬಿಜೆಪಿ ವಿರೋಧಿ ಪಾಳಯದ ಸೇನಾಪತಿಯನ್ನೇ ಹೈಜಾಕ್‌ ಮಾಡಿದೆ. ನಿತೀಶ್‌ ನಿಷ್ಠೆ ಬದಲಾದ್ದರಿಂದ ಅವರಿಗೆ ಏನೂ ನಷ್ಟವಾಗಿಲ್ಲ. ರಾಜೀನಾಮೆ ಕೊಟ್ಟ 16 ತಾಸುಗಳಲ್ಲೇ ಅವರು ಮರಳಿ ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿತರಾಗಿದ್ದಾರೆ. ಆರ್‌ಜೆಡಿಗೆ ಅನುಕಂಪದ ಅಲೆಯ ಲಾಭವಾಗಿದೆ. ನಷ್ಟ ಆಗಿರುವುದು ಕಾಂಗ್ರೆಸ್‌ಗೆ ಮಾತ್ರ. ಆದರೆ ನಿತೀಶ್‌ ವೈಯಕ್ತಿಕವಾಗಿ ಬಹಳಷ್ಟನ್ನು ಕಳೆದುಕೊಂಡಿದ್ದಾರೆ. ಮೊದಲಾಗಿ ರಾಜಕೀಯದಲ್ಲಿ ಅವರ ವಿಶ್ವಾಸಾರ್ಹತೆಗೆ  ಪ್ರಶ್ನಾರ್ಥಕ ಚಿಹ್ನೆಯಿದೆ.  

ಬುಧವಾರದ ತನಕ ಬಿಹಾರದ ರಾಜಕೀಯ ಬೆಳವಣಿಗೆಗಳು ನಿರೀಕ್ಷಿಸಿದಂತೆಯೇ ಸಾಗಿದ್ದವು. ತೇಜಸ್ವಿ ಯಾವ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಲಾಲೂ ಪಟ್ಟು ಹಿಡಿದ ಬಳಿಕ ನಿತೀಶ್‌ಗೆ ರಾಜೀನಾಮೆ ನೀಡುವುದೊಂದೇ ಉಳಿದಿದ್ದ ದಾರಿ. ಆದರೆ ರಾಜೀನಾಮೆ ನೀಡಿದ ಕೆಲವೇ ತಾಸಿನಲ್ಲಿ ಅವರು ಬಿಜೆಪಿ ಬೆಂಬಲದೊಂದಿಗೆ ಗದ್ದುಗೆ ಏರಿದ್ದಾರೆ ಈ ಮೂಲಕ 2015ರ ಜನಾದೇಶಕ್ಕೆ ಅಪಚಾರ ಎಸಗಿದಂತಾಗಿದೆ. ಸಂವಿಧಾನದ ನಿಯಮಗಳ ಪ್ರಕಾರ ಇದು ಸರಿಯಾಗಿದ್ದರೂ ರಾಜಕೀಯ ನೀತಿ ಮತ್ತು ರಾಜಧರ್ಮಕ್ಕೆ ತಕ್ಕ ನಡೆಯಲ್ಲ. 

Advertisement

ಸರಕಾರ ವಿಸರ್ಜಿಸಿ ಬಿಜೆಪಿ ಜತೆಗೆ ಚುನಾವಣೆ ಎದುರಿಸಿ ಮತ್ತೂಮ್ಮೆ ಜನಾದೇಶ ಪಡೆದುಕೊಂಡು ಬರುವುದು ಸಮುಚಿತ ನಿರ್ಧಾರವಾಗುತ್ತಿತ್ತು. ಇದಲ್ಲದಿದ್ದರೆ ತೇಜಸ್ವಿಯನ್ನು ಸಂಪುಟದಿಂದ ಉಚ್ಛಾಟಿಸಿ ಮುಂದಿನ ಪರಿಣಾಮಗಳನ್ನು ಎದುರಿಸುವ ದಿಟ್ಟತನವನ್ನು ತೋರಿಸಿದ್ದರೆ ನಿತೀಶ್‌ ಜನರ ಕಣ್ಣಿನಲ್ಲಿ ಹೀರೊ ಆಗುತ್ತಿದ್ದರು. ಬಿಹಾರದ ರಾಜಕೀಯದ ಆಟದಲ್ಲಿ ನಿತೀಶ್‌ ಗೆದ್ದರೂ ರಾಜನೀತಿ ಸೋತಿದೆ.

Advertisement

Udayavani is now on Telegram. Click here to join our channel and stay updated with the latest news.

Next