ಭುವನೇಶ್ವರ: 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ಒಕ್ಕೂಟ ರಚಿಸುವ ಪ್ರಯತ್ನದ ಭಾಗವಾಗಿ ಮಂಗಳವಾರ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಒಡಿಶಾ ಸಿಎಂ, ಬಿಜು ಜನತಾದಳದ ನಾಯಕ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.
ಇತ್ತೀಚೆಗೆ ನಿತೀಶ್ ಕುಮಾರ್ ಹಾಗೂ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದರು. ಆ ಬಳಿಕ ಮಮತಾ ಬ್ಯಾನರ್ಜಿ ಅವರು, ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.
ನಿತೀಶ್ ಕುಮಾರ್ ಮತ್ತು ನವೀನ್ ಪಟ್ನಾಯಕ್ ಅವರ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಆದರೆ ಈ ಭೇಟಿಯ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಈರ್ವರು ನಾಯಕರೂ ಸಮಾಲೋಚನೆಯ ಬಳಿಕ ತಿಳಿಸಿದರು.
ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸದ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನೇತೃತ್ವದ ಎರಡೂ ಮೈತ್ರಿಕೂಟದಿಂದ ಹೊರಗಿದ್ದು ತಟಸ್ಥ ನಿಲುವು ತಾಳಿದ್ದಾರೆ.