ಕೋಲ್ಕತಾ: 2024ರ ಲೋಕಸಭಾ ಚುನಾವಣೆಗೆ ಇನ್ನೊಂದು ವರ್ಷ ಮಾತ್ರ ಬಾಕಿಯುಳಿದಿದೆ. ಇಡೀ ದೇಶದಲ್ಲಿ ಅತ್ಯಂತ ಪ್ರಬಲವಾಗಿ ಬೆಳೆದಿರುವ ಬಿಜೆಪಿಯನ್ನು ಬಗ್ಗುಬಡಿಯಲು ಇತರೆಲ್ಲ ಪಕ್ಷಗಳು ತಮ್ಮಿಂದಾಗುವ ಎಲ್ಲ ಯತ್ನಗಳನ್ನೂ ಮಾಡುತ್ತಿವೆ. ಇದೀಗ ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ – ಪ.ಬಂಗಾಲ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಸರದಿ.
ಇಬ್ಬರೂ ಕೋಲ್ಕತಾದಲ್ಲಿ ಭೇಟಿಯಾಗಿ ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳನ್ನು ಒಗ್ಗೂಡಿಸುವ ಕುರಿತು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಭೇಟಿ ಯಶಸ್ವಿಯಾಗಿದೆ ಎಂದಿದ್ದಾರೆ.
ಭೇಟಿ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಮತಾ, ಎಲ್ಲ ವಿಪಕ್ಷಗಳು ಒಗ್ಗೂಡಿ ಬಿಜೆಪಿಯನ್ನು ಎದುರಿಸಬೇಕು. ನಮಗೆ ಯಾರಿಗೂ ವ್ಯಕ್ತಿಗತ ಅಹಂಕಾರಗಳಿಲ್ಲ, ಒಗ್ಗೂಡಿ ಕೆಲಸ ಮಾಡುವ ಉದ್ದೇಶ ಹೊಂದಿ ದ್ದೇವೆ. ಲೋಕನಾಯಕ ಜಯಪ್ರಕಾಶ್ ನಾರಾ ಯಣ್ ಹಿಂದೆ ಬಿಹಾರದಿಂದಲೇ ಹೋರಾಟ ಶುರು ಮಾಡಿದ್ದರು. ನಮ್ಮ ಮುಂದಿನ ಭೇಟಿ ಕೂಡ ಬಿಹಾರದಲ್ಲೇ ನಡೆಯಬೇಕು ಎಂದಿದ್ದಾರೆ. ಇದೇ ಧಾಟಿಯಲ್ಲಿ ನಿತೀಶ್ ಕುಮಾರ್ ಕೂಡ ಮಾತನಾಡಿದರು. ಇದೇ ವೇಳೆ, ಕಾಂಗ್ರೆಸ್ ವಿಧಾನಸಭೆ ಚುನಾವಣೆಯ ಬಳಿಕ ಸುಮಾರು 19 ಪಕ್ಷಗಳ ನಾಯಕರು ಸಭೆ ಸೇರಲಿದ್ದಾರೆ. ಎಐಸಿಸಿ ಅಧ್ಯಕ್ಷ ಖರ್ಗೆ ಅವರೇ ಸಭೆಯನ್ನು ಆಯೋಜಿಸಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.