ಮುಂಬೈ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ವಿರೋಧ ಪಕ್ಷಗಳು ಒಂದುಗೂಡಿದರೆ ಬಿಜೆಪಿಯನ್ನು ಮಣಿಸಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಗುರುವಾರ ಹೇಳಿದರು. ಬಿಹಾರ ಡಿಸಿಎಂ ತೇಜಸ್ವಿ ಯಾದವ್ ಅವರೊಂದಿಗೆ ಮುಂಬೈಗೆ ಆಗಮಿಸಿರುವ ಅವರು, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, “ಎಲ್ಲಾ ಪ್ರತಿಪಕ್ಷಗಳು ಒಗ್ಗೂಡಿ ಹೋರಾಟ ನಡೆಸಿದಾಗ ಬಿಜೆಪಿಗೆ ತಕ್ಕ ಪ್ರತಿಸ್ಪರ್ಧೆ ನೀಡಬಹುದು. ಅಲ್ಲದೇ ಪ್ರತಿಪಕ್ಷಗಳಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಇದರಿಂದ ದೇಶವು ಸರಿಯಾದ ದಿಕ್ಕಿನತ್ತ ಸಾಗುತ್ತದೆ” ಎಂದರು.
“ಎಲ್ಲಾ ಪ್ರತಿಪಕ್ಷಗಳ ಆಶಯವು ಒಂದೇ ಆಗಿದೆ. ದೇಶದ ಹಿತಾಸಕ್ತಿಗಾಗಿ ದುಡಿಯುವುದು. ಪ್ರತಿಪಕ್ಷಗಳಲ್ಲಿ ಯಾವುದೇ ವಿವಾದ ಇರಬಾರದು. ಎಲ್ಲರೂ ಒಗ್ಗಟ್ಟಾಗಿ ಇರಬೇಕು. ಮುಂದಿನ ಸಭೆಯ ಕುರಿತು ಇತರೆ ಪಕ್ಷಗಳು ಸೇರಿ ತೀರ್ಮಾನ ಕೈಗೊಳ್ಳಲಿವೆ” ಎಂದು ತಿಳಿಸಿದರು.
ಇದೇ ವೇಳೆ ಜೆಡಿಯು ನಾಯಕ ನಿತೀಶ್ ಕುಮಾರ್ ಮುಂಬೈನಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಇವರೊಂದಿಗೆ ಜೆಡಿಯು ರಾಷ್ಟ್ರೀಯ ನಾಯಕ ಲಾಲನ್ ಸಿಂಗ್ ಮತ್ತು ಜೆಡಿಯು ನಾಯಕ ಸಂಜಯ್ ಝಾ ಜತೆಗಿದ್ದರು.
ನಿತೀಶ್ ಕುಮಾರ್ ಅವರು ಮಂಗಳವಾರ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಬಿಜೆಪಿ ವಿರುದ್ಧ ಎಲ್ಲಾ ಪ್ರತಿಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಜೆಡಿಯು ನಾಯಕ ಕಾರ್ಯಪ್ರವೃತ್ತರಾಗಿದ್ದಾರೆ.