ಪಾಟ್ನಾ: ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರು ರಾಜಕೀಯ ಸೇವೆಯಿಂದ ತುಂಬಾ ಬಳಲಿದ್ದಾರೆ. ಆದರೆ ಇನ್ಮುಂದೆ ಅವರಿ ಬಿಹಾರ ರಾಜ್ಯದಲ್ಲಿ ಆಡಳಿತ ನಡೆಸಲು ಕಷ್ಟವಾಗುತ್ತದೆ ಎಂದು ರಾಷ್ಟ್ರೀಯ ಜನತಾ ದಳ (ಆರ್ ಜೆಡಿ)ದ ಮುಖಂಡ ತೇಜಸ್ವಿ ಯಾದವ್ ವ್ಯಂಗ್ಯವಾಗಿ ಟಾಂಗ್ ನೀಡಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಅಭಿವೃದ್ಧಿ ಬಗ್ಗೆ, ನಿರುದ್ಯೋಗ, ಶಿಕ್ಷಣ ಮತ್ತು ಆರೋಗ್ಯ, ಮೂಲಭೂತ ಸೌಕರ್ಯ, ಬಡತನದ ಬಗ್ಗೆ ಮಾತನಾಡುವುದು ಬೇಕಾಗಿಲ್ಲ. ಅವರು ರಾಜಕೀಯ ಸೇವೆಯಿಂದ ತುಂಬಾ ಆಯಾಸಗೊಂಡಿದ್ದಾರೆ ಎಂದು ಟೀಕಿಸಿದರು.
ಬಿಹಾರದಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಉತ್ತೇಜನ ನೀಡದೆ ಇದ್ದರೆ, ಯಾವುದೇ ಉದ್ಯೋಗ ಸೃಷ್ಟಿಯಾಗುವುದಿಲ್ಲ ಎಂದು ತೇಜಸ್ವಿ ಹೇಳಿದರು. ಕೆಲವು ದಿನಗಳ ಹಿಂದಷ್ಟೇ ರಾಜ್ಯದ ಆರ್ಥಿಕತೆ ಬಗ್ಗೆ ನಿತೀಶ್ ಕುಮಾರ್ ಅವರು ನೀಡಿರುವ ಹೇಳಿಕೆ ಹಿನ್ನೆಲೆಯಲ್ಲಿ 31 ವರ್ಷದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಈ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ಹೇಳಿದೆ.
ರಾಜ್ಯದಲ್ಲಿ ಕೈಗಾರಿಕೆಗಳಿಗೆ, ಹೂಡಿಕೆದಾರರಿಗೆ ಬರುವ ಪ್ರವೇಶವನ್ನು ಬಂದ್ ಮಾಡಿ ಇಡಲಾಗಿದೆ. ಇದರಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಅಕ್ಟೋಬರ್ 28ರಿಂದ ಆರಂಭವಾಗಲಿರುವ ವಿಧಾನಸಭಾ ಚುನಾವಣೆಯ ವರ್ಚುವಲ್ ಪ್ರಚಾರದ ಮೂಲಕ ಭಾಷಣ ಮಾಡುತ್ತ ತಿಳಿಸಿದ್ದಾರೆ.
ರಾಗೋಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತೇಜಸ್ವಿ ಯಾದವ್ ನಾಮಪತ್ರ ಸಲ್ಲಿಸಿದ್ದು, ತನ್ನ ವಿರುದ್ಧದ ಆರ್ಥಿಕ ಸಂಪತ್ತಿನ ಕುರಿತ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಈಗಾಗಲೇ ನನ್ನ ಆಸ್ತಿ ಕುರಿತು ತನಿಖೆ ನಡೆಸಲಾಗಿದ್ದು, ಬೇರೆ ಯಾವುದೇ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬಹುದು ಎಂದು ಈ ಸಂದರ್ಭದಲ್ಲಿ ತೇಜಸ್ವಿ ಹೇಳಿದರು.