ಪಾಟ್ನಾ: ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯು) ಮತ್ತು ಬಿಹಾರದ ಮಿತ್ರಪಕ್ಷ ಬಿಜೆಪಿಯ ನಡುವೆ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ. ರವಿವಾರ ನಡೆದ ನೀತಿ ಆಯೋಗದ ಸಭೆಯನ್ನು ತಪ್ಪಿಸಿಕೊಂಡ ಬಿಹಾರ ಸಿಎಂ ನಿತೀಶ್, ಇದೀಗ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ದೂರವಾಣಿ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷರಾಗಿದ್ದ ನೀತಿ ಆಯೋಗದ ಸಭೆಗೆ ಬಿಹಾರ ಸಿಎಂ ನಿತೀಶ್ ಗೈರಾಗಿದ್ದರು. ಇದು ಹಲವು ಸಂಶಯಗಳಿಗೆ ಕಾರಣವಾಗಿತ್ತು.
ಕಳೆದ ಕೆಲವು ತಿಂಗಳಿನಿಂದ ನಿತೀಶ್ ಕುಮಾರ್ ಮತ್ತು ಬಿಜೆಪಿ ನಡುವೆ ಶೀತಲ ಸಮರ ನಡೆಯುತ್ತಿದೆ. ಕಳೆದ ತಿಂಗಳು ಅಂದರೆ ಜುಲೈ 17ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದಿದ್ದ ಎಲ್ಲ ಮುಖ್ಯಮಂತ್ರಿಗಳ ಸಭೆಯಲ್ಲಿ ನಿತೀಶ್ ಕುಮಾರ್ ಭಾಗವಹಿಸಿರಲಿಲ್ಲ. ಅದರ ನಂತರ, ಜುಲೈ 22 ರಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪಿಎಂ ಮೋದಿ ಆಯೋಜಿಸಿದ್ದ ಬೀಳ್ಕೊಡುಗೆ ಔತಣಕೂಟಕ್ಕೂ ನಿತೀಶ್ ಗೈರಾಗಿದ್ದರು.
ಇದನ್ನೂ ಓದಿ:ಮೀನುಗಾರಿಕೆಗೆ ಈ ವರ್ಷವೂ ಆರಂಭದಲ್ಲೇ ಅಡ್ಡಿ : ಕಡಲಿಗಿಳಿಯದೆ ದಡದಲ್ಲೇ ಉಳಿದ ಬೋಟುಗಳು
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ನಿತೀಶ್ ಕುಮಾರ್ ಬೆಂಬಲಿಸಿದರೂ, ಜುಲೈ 22 ರಂದು ನಡೆದ ರಾಷ್ಟ್ರಪತಿಗಳ ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ.
ಕೇಂದ್ರ ಸಂಪುಟಕ್ಕೆ ಸೇರುವುದಿಲ್ಲ : ಮುಂದಿನ ದಿನಗಳಲ್ಲಿ ಕೇಂದ್ರ ಸಂಪುಟ ವಿಸ್ತರಣೆ ನಡೆದರೆ ಜೆಡಿಯು ಸೇರುವುದಿಲ್ಲ. ಹಾಗೆಂದು ಬಿಜೆಪಿ ಜತೆಗೆ ಯಾವ ಭಿನ್ನಾಭಿಪ್ರಾಯಗಳೂ ಇಲ್ಲವೆಂದು ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಹೇಳಿದ್ದಾರೆ.
ಪಾಟ್ನಾದಲ್ಲಿ ಮಾತನಾಡಿದ ಅವರು, ಪಾಟ್ನಾದಲ್ಲಿ ಮಾತನಾಡಿದ ಅವರು, 2019ರ ನಿಲುವಿಗೆ ನಾವು ಬದ್ಧರಾಗಿಯೇ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದರು. ಈ ಬಗ್ಗೆ ಬಿಹಾರ ಸಿಎಂ ನಿತೀಶ್ ಅವರ ತೀರ್ಮಾನವೇ ಅಂತಿಮ ಎಂದರು.