Advertisement

ಮತ್ತೆ ಗದ್ದುಗೆ ಏರಿದ ನಿತೀಶ್‌ ಕುಮಾರ್‌

07:25 AM Jul 28, 2017 | Team Udayavani |

– ಬಿಜೆಪಿ ಬೆಂಬಲದೊಂದಿಗೆ ಹೊಸ ಸರಕಾರ ರಚನೆ

Advertisement

– ವಿಪಕ್ಷಗಳಿಗೆ ತೀವ್ರ ಆಘಾತ; ಟೀಕೆಯ ಸುರಿಮಳೆ

ಪಟ್ನಾ/ಹೊಸದಿಲ್ಲಿ: ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡುವಂತೆ, ಮಹಾಮೈತ್ರಿಕೂಟ ಮುರಿದು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ಬುಧವಾರ ರಾತ್ರಿ ರಾಜೀನಾಮೆ ನೀಡಿದ್ದ ನಿತೀಶ್‌ ಕುಮಾರ್‌, ಗುರುವಾರ ಬೆಳಗ್ಗೆ ಬಿಜೆಪಿ ಬೆಂಬಲದೊಂದಿಗೆ ಮತ್ತೆ ಮುಖ್ಯಮಂತ್ರಿಯಾಗಿ ಗದ್ದುಗೆ ಏರಿದ್ದಾರೆ. ಕೇವಲ 12 ಗಂಟೆಗಳ ಕ್ಷಿಪ್ರ ಬೆಳವಣಿಗೆಯಲ್ಲಿ ಕಾಂಗ್ರೆಸ್‌ – ಆರ್‌ಜೆಡಿ ಮೈತ್ರಿಕೂಟದಿಂದ ಹೊರನಡೆದ ನಿತೀಶ್‌, ಅಷ್ಟೇ ಕ್ಷಿಪ್ರವಾಗಿ ಬೆಳಗ್ಗೆ 10 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದರು. ಅದಕ್ಕೆ ಪೂರಕವಾಗಿ ಯುಪಿಎ ಅವಧಿಯಲ್ಲಿ ನಡೆದಿದೆ ಎನ್ನಲಾಗಿರುವ ರೈಲ್ವೇ ಹೊಟೇಲ್‌ ಹಗರಣ ಸಂಬಂಧ ಲಾಲು ಪ್ರಸಾದ್‌ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಜಾರಿ ನಿರ್ದೇಶನಾಲಯ ಕೇಸು ದಾಖಲಿಸಿದೆ. ಈ ನಡುವೆ ರಾಜ್ಯಪಾಲರ ತೀರ್ಮಾನ ಪ್ರಶ್ನಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗುವುದಾಗಿ ಲಾಲು ಹೇಳಿದ್ದಾರೆ.

ಪ್ರಮಾಣ ಸ್ವೀಕಾರ: ಪಟ್ನಾದ ರಾಜಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬಿಹಾರ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರು ಪ್ರಮಾಣ ವಚನ ಬೋಧಿಸಿದರು. ನಿತೀಶ್‌ ಜತೆ ಬಿಜೆಪಿಯ ಬಿಹಾರ ಅಧ್ಯಕ್ಷ ಸುಶೀಲ್‌ ಕುಮಾರ್‌ ಮೋದಿ ಅವರೂ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆರ್‌ಜೆಡಿ, ಕಾಂಗ್ರೆಸ್‌ನಿಂದ ಯಾರೊಬ್ಬರೂ ಹಾಜರಾಗಲಿಲ್ಲ. ಬಿಜೆಪಿ ವತಿಯಿಂದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ, ಬಿಜೆಪಿ ನಾಯಕ ಅನಿಲ್‌ ಜೈನ್‌ ಅವರು ಹಾಜರಿದ್ದರು.

ರಾತೋರಾತ್ರಿ ನಡೆದ ಬೆಳವಣಿಗೆಗಳಲ್ಲಿ ಬಿಜೆಪಿ ನಿತೀಶ್‌ ಅವರಿಗೆ ಬೆಂಬಲ ನೀಡಿದ್ದು, ಎನ್‌ಡಿಎ ಬೆಂಬಲಿಗರ ಪಟ್ಟಿಯನ್ನು ರಾಜ್ಯ ಪಾಲರಿಗೆ ನೀಡಿದೆ. ಇದರಲ್ಲಿ ನಿತೀಶ್‌ ನೇತೃತ್ವದ ಜೆಡಿಯುನ 71, ಬಿಜೆಪಿಯ 53, ಆರ್‌ಎಲ್‌ಎಸ್ಪಿ ಮತ್ತು ಎಲ್‌ಜೆಪಿಯ ತಲಾ ಎರಡು ಮತ್ತು ಎಚ್‌ಎಎಂನ ಒಬ್ಬರು ಮತ್ತು ಇತರ ಮೂವರು ಶಾಸಕರ ಬೆಂಬಲ ಸರಕಾರಕ್ಕೆ ಇದೆ ಎಂದು ಹೇಳಲಾಗಿದೆ. ಇದರೊಂದಿಗೆ 17 ವರ್ಷ ಅಧಿಕಾರದಲ್ಲಿದ್ದ, ಹಿಂದಿನ ಜೆಡಿಯು – ಬಿಜೆಪಿ ಮೈತ್ರಿಕೂಟ ಮತ್ತೆ ಅಸ್ತಿತ್ವಕ್ಕೆ ಬಂದಂತಾಗಿದೆ.

Advertisement

ಇಂದು ವಿಶ್ವಾಸಮತ: ಶುಕ್ರವಾರ ಸಿಎಂ ನಿತೀಶ್‌ ತನ್ನ ಸರಕಾರಕ್ಕಿರುವ ಬಹುಮತವನ್ನು ಸಾಬೀತುಪಡಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. 

ಕೇಂದ್ರಕ್ಕೆ ಬೆಂಬಲ: ನೂತನ ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಬೆಂಬಲಿಸುವುದಾಗಿ ಜೆಡಿಯು ಘೋಷಿಸಿದೆ.

ಪ್ರಧಾನಿ ಮೋದಿ ಪ್ರಶಂಸೆ: ಬಿಜೆಪಿ ಜತೆ ಸೇರಿ ಸರಕಾರ ರಚಿಸಿದ ನಿತೀಶ್‌ ಕುಮಾರ್‌ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಬಿಹಾರದ ಅಭಿವೃದ್ಧಿಗೆ ಜತೆಯಾಗಿ ಕೆಲಸ ಮಾಡುವುದನ್ನು ಎದುರು ನೋಡುವುದಾಗಿ ಅವರು ಹೇಳಿದರು. ಬುಧವಾರವಷ್ಟೇ  ನಿತೀಶ್‌ ರಾಜೀನಾಮೆ ನೀಡಿದ್ದಕ್ಕಾಗಿ ‘ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಜತೆ ಸೇರಿದ್ದಕ್ಕೆ ಅಭಿನಂದನೆಗಳು’ ಎಂದು ಮೋದಿ ಟ್ವೀಟ್‌ ಮಾಡಿದ್ದರು.

ವಿಪಕ್ಷಗಳಲ್ಲಿ ಅಚ್ಚರಿ, ಆಘಾತ
ಬಿಜೆಪಿಗೆ ಪರ್ಯಾಯ ಶಕ್ತಿಯೊಂದನ್ನು ರೂಪಿಸ ಹೊರಟಿದ್ದ ಕಾಂಗ್ರೆಸ್‌, ಎಡಪಕ್ಷಗಳು, ಇತರ ಪ್ರಾದೇಶಿಕ ಪಕ್ಷಗಳಿಗೆ ನಿತೀಶ್‌ ಕುಮಾರ್‌ ಅವರ ನಡೆ ತೀವ್ರ ಅಚ್ಚರಿ, ಆಘಾತ ಉಂಟುಮಾಡಿದೆ. 2019ರಲ್ಲಿ ಮೋದಿ ನೇತೃತ್ವದ ಬಿಜೆಪಿಯ ಗೆಲುವಿನ ಕುದುರೆಯನ್ನು ಕಟ್ಟಿಹಾಕಲು ಈಗಾಗಲೇ ವಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದವು. ಆದರೆ ಏಕಾಏಕಿ ನಿತೀಶ್‌ ತಮ್ಮ ಪಾಳಯದಿಂದ ಕಡುವಿರೋಧಿ ಬಣಕ್ಕೆ ನೆಗೆದಿರುವುದು ವಿಪಕ್ಷಗಳನ್ನು ಆಘಾತಕ್ಕೆ ನೂಕಿದೆ. ಪರಿಣಾಮ ನಿತೀಶ್‌ ವಿರುದ್ಧ ವಿಪಕ್ಷಗಳ ನಾಯಕತ್ವ ಟೀಕೆಗಳ ಸುರಿಮಳೆಗೈದಿದೆ. ಇದರೊಂದಿಗೆ ಎನ್‌ಡಿಎ ಮೈತ್ರಿಕೂಟದ ಆಡಳಿತ ಈಗ ದೇಶದಲ್ಲಿ ಶೇ. 70ರಷ್ಟು ವ್ಯಾಪಿಸಿಕೊಂಡಿದ್ದು, ವಿಪಕ್ಷಗಳ ದನಿಯನ್ನು ಮತ್ತಷ್ಟು ಕ್ಷೀಣಿಸುವಂತೆ ಮಾಡಿದೆ. ಮೋದಿ ವಿರುದ್ಧ ನಿತೀಶ್‌ ಉತ್ತಮ ಅಭ್ಯರ್ಥಿ ಎಂದು ಬಿಂಬಿಸಲಾಗಿದ್ದು, ಅವರೇ ಆ ಪಾಳಯಕ್ಕೆ ನೆಗೆದಿರುವುದು ತಲ್ಲಣ ಸೃಷ್ಟಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next