ನವದೆಹಲಿ:ಕಾಂಗ್ರೆಸ್ ಪಕ್ಷ ನಾಯಕತ್ವ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಹೇಳಿರುವ ಪ್ರಸಿದ್ಧ ಇತಿಹಾಸಕಾರ ರಾಮಚಂದ್ರ ಗುಹಾ ಅವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಗಾದಿಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕತ್ವದಲ್ಲಿ ಮಹತ್ತರವಾದ ಬದಲಾವಣೆಯಾಗಬೇಕಾದ ಕಾಲ ಸನ್ನಿಹಿತವಾಗಿದೆ. ಆ ನೆಲೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಯುಪಿಎ ಅಧ್ಯಕ್ಷರನ್ನಾಗಿ ಮಾಡಿದರೆ ಮಾತ್ರವೇ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕಾಂಗ್ರೆಸ್ ನಾಯಕನಿಲ್ಲದ ಪಕ್ಷವಾಗಿದೆ. ನಿತೀಶ್ ಕುಮಾರ್ ಅವರು ಪಕ್ಷ ಇಲ್ಲದ ನಾಯಕನಾಗಿದ್ದಾರೆ ಎಂದು ಗುಹಾ ವಿಶ್ಲೇಷಿಸಿದರು.
ಅವರು ತಮ್ಮ ಗಾಂಧಿ ನಂತರದ ಭಾರತ ಪುಸ್ತಕದ ಹತ್ತನೇ ವರ್ಷದ ಆವೃತ್ತಿ ಬಿಡುಗಡೆಯ ಸಮಾರಂಭದಲ್ಲಿ ಮಾತನಾಡಿದರು. ನಿತೀಶ್ ಕುಮಾರ್ ಅಪ್ಪಟ ಪ್ರಾಮಾಣಿಕ ನಾಯಕ ಎಂದು ಶ್ಲಾಘಿಸಿದರು.
ಮೋದಿ ಇಷ್ಟವಾಗೋದು ಯಾಕೆಂದರೆ ಅವರಿಗೆ ಕುಟುಂಬದ ಹೊಣೆಗಾರಿಕೆ ಇಲ್ಲ. ಆದರೆ ಅವರು ಮಹತ್ವಾಕಾಂಕ್ಷೆಯ ವ್ಯಕ್ತಿಯಲ್ಲ. ಕುರುಡು ನಂಬಿಕೆಯನ್ನೂ ಹೊಂದಿಲ್ಲ. ಇದು ಭಾರತೀಯ ರಾಜಕಾರಣಿಗಳಲ್ಲಿ ಬಲು ವಿರಳ. ಹಾಗಾಗಿ ಇದು ನಿತೀಶ್ ಕುಮಾರ್ ಅವರಲ್ಲಿಯೂ ಕೆಲವೊಂದು ಅಂಶಗಳನ್ನು ಕಾಣಬಹುದು. ಆ ನೆಲೆಯಲ್ಲಿ ನಾನು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.
ಆದರೆ ಕಾಂಗ್ರೆಸ್ ಪಕ್ಷ ನಿತೀಶ್ ಕುಮಾರ್ ಅವರಿಗೆ ಯುಪಿಎ ಅಧ್ಯಕ್ಷಗಾದಿಯನ್ನು ದಯಪಾಲಿಸದೇ ಇದ್ದಲ್ಲಿ, ನಿತೀಶ್ ಕುಮಾರ್ ಅವರಿಗೂ ಭವಿಷ್ಯ ಇಲ್ಲದಂತಾಗಲಿದೆ ಅದೇ ರೀತಿ ಭಾರತೀಯ ರಾಜಕಾರಣದಲ್ಲಿ ಸೋನಿಯಾ ಗಾಂಧಿಗೂ ಭವಿಷ್ಯ ಇಲ್ಲದಂತಾಗಲಿದೆ ಎಂದು ಗುಹಾ ಭವಿಷ್ಯ ನುಡಿದರು.