ನವದೆಹಲಿ: ಸಾರ್ವತ್ರಿಕ ಚುನಾವಣೆಯ ಮೊದಲ ಹಂತದಲ್ಲಿ 17 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶ ಸೇರಿದಂತೆ 102 ಕ್ಷೇತ್ರಗಳಲ್ಲಿ ಗುರುವಾರ (ಏಪ್ರಿಲ್ 19) ಮತದಾನ ನಡೆಯುತ್ತಿದ್ದು, ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಮೊದಲ ಹಂತದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೆಲವು ಘಟಾನುಘಟಿಗಳ ಕಿರು ಪರಿಚಯ ಇಲ್ಲಿದೆ…
ನಿತಿನ್ ಗಡ್ಕರಿ (ಬಿಜೆಪಿ): ನಾಗ್ಪುರ್
ರಸ್ತೆಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರು 3ನೇ ಬಾರಿಯೂ ನಾಗ್ಪುರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಹ್ಯಾಟ್ರಿಕ್ ಸಾಧಿಸುವ ಗುರಿ ಹೊಂದಿದ್ದು, 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಗಡ್ಕರಿ ನಾಗ್ಪುರ್ ನಿಂದ ಜಯಗಳಿಸಿದ್ದರು. ಈ ಬಾರಿಯೂ ಗಡ್ಕರಿ ಸ್ಪರ್ಧಿಸಿದ್ದು, ಕಾಂಗ್ರೆಸ್ ನ ವಿಕಾಸ್ ಠಾಕ್ರೆ ಪ್ರತಿಸ್ಪರ್ಧಿಯಾಗಿದ್ದಾರೆ.
ಕಿರಣ್ ರಿಜಿಜು(ಬಿಜೆಪಿ): ಅರುಣಾಚಲಪ್ರದೇಶ
ಕೇಂದ್ರ ಸಚಿವ ಕಿರಣ್ ರಿಜಿಜು ಬಿಜೆಪಿಯ ಪಶ್ಚಿಮ ಅರುಣಾಚಲ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ರಿಜಿಜು ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಇದೀಗ ಮೂರನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಪಶ್ಚಿಮ ಅರುಣಾಚಲ ಕ್ಷೇತ್ರದಲ್ಲಿ ಮಾಜಿ ಸಿಎಂ, ಕಾಂಗ್ರೆಸ್ ಅಭ್ಯರ್ಥಿ ನಬಂ ಟುಕಿ ಪ್ರತಿಸ್ಪರ್ಧಿಯಾಗಿದ್ದಾರೆ.
ಕೆ.ಅಣ್ಣಾಮಲೈ(ಬಿಜೆಪಿ), ಕೊಯಂಬತ್ತೂರು:
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಗಮನಸೆಳೆದಿರುವ ಕೆ.ಅಣ್ಣಾಮಲೈ, ತಮಿಳುನಾಡಿನ ಕೊಯಂಬತ್ತೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 39 ವರ್ಷದ ಮಾಜಿ ಐಪಿಎಸ್ ಅಧಿಕಾರಿ 2019ರಲ್ಲಿ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಸೇರ್ಪಡೆಗೊಂಡಿದ್ದರು. ಲಕ್ನೋ ಐಐಎಂನ ಎಂಬಿಎ ಹಾಗೂ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಕೊಯಂಬತ್ತೂರು ಕ್ಷೇತ್ರದಲ್ಲಿ ಡಿಎಂಕೆಯಿಂದ ಗಣಪತಿ ಪಿ ರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ. ಕಾನೂನು ಪದವೀಧರರಾಗಿರುವ ರಾಜ್ ಕುಮಾರ್ ಜರ್ನಲಿಸಂ ಅಂಡ್ ಮಾಸ್ ಕಮ್ಯೂನಿಕೇಷನ್ ನಲ್ಲಿ ಡಾಕ್ಟರೇಟ್ ಪಡೆದಿದ್ದಾರೆ.
ಗೌರವ್ ಗೋಗೊಯಿ (ಕಾಂಗ್ರೆಸ್) ಜೋಹ್ರಾತ್:
ಕಾಂಗ್ರೆಸ್ ನ ಪ್ರಮುಖ ಯುವ ಮುಖಗಳ ಪೈಕಿ ಗೌರವ್ ಗೋಗೊಯಿ ಅಸ್ಸಾಂನ ಕಲಿಯಾಬೋರ್ ನಿಂದ ಎರಡು ಬಾರಿ ಸಂಸದರಾಗಿದ್ದು, 2014 ಮತ್ತು 2019ರ ಚುನಾವಣೆಯಲ್ಲಿ ಬಿಜೆಪಿ ಅಲೆಯ ಹೊರತಾಗಿಯೂ ಗೆಲುವು ಸಾಧಿಸಿದ್ದರು. ಈ ಬಾರಿ ಜೋಹ್ರಾತ್ ಲೋಕಸಭಾ ಕ್ಷೇತ್ರದಿಂದ ಗೋಗೊಯ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ ಹಿಡಿತದಲ್ಲಿದ್ದ ಈ ಕ್ಷೇತ್ರದಲ್ಲಿ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಜೋಹ್ರಾತ್ ನಲ್ಲಿ ಬಿಜೆಪಿಯ ಹಾಲಿ ಸಂಸದ ತಪನ್ ಕುಮಾರ್ ಗೋಗೊಯ್ ಪ್ರತಿಸ್ಪರ್ಧಿಯಾಗಿದ್ದಾರೆ.
ತಮಿಳಿಸೈ ಸೌಂದರಾಜನ್ (ಬಿಜೆಪಿ) ದಕ್ಷಿಣ ಚೆನ್ನೈ:
ಬಿಜೆಪಿ ಹಿರಿಯ ನಾಯಕಿಯಾಗಿರುವ ತಮಿಳಿಸೈ 2019ರಲ್ಲಿ ತೆಲಂಗಾಣ ರಾಜ್ಯಪಾಲರಾಗಿ, ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಕರ್ತವ್ಯ ಸಲ್ಲಿಸಿದ್ದರು. ಇತ್ತೀಚೆಗೆ ರಾಜೀನಾಮೆ ನೀಡಿದ್ದ ತಮಿಳಿಸೈ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ದಕ್ಷಿಣ ಚೆನ್ನೈ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ, ಡಿಎಂಕೆ ಅಭ್ಯರ್ಥಿ ತಮಿಳಚಿ ತಂಗಪಾಂಡಿಯನ್ ಕಣಕ್ಕಿಳಿದಿದ್ದಾರೆ.
ನಕುಲ್ ನಾಥ್ (ಕಾಂಗ್ರೆಸ್), ಛಿಂದ್ವಾರ:
ಮಧ್ಯಪ್ರದೇಶದ ಛಿಂದ್ವಾರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ನಕುಲ್ ನಾಥ್, ಎರಡನೇ ಬಾರಿ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಕಾಂಗ್ರೆಸ್ ಹಿರಿಯ ಮುಖಂಡ ಕಮಲ್ ನಾಥ್ ಪುತ್ರರಾಗಿರುವ ನಕುಲ್ ನಾಥ್ ದೇಶದ ಶ್ರೀಮಂತ ಸಂಸದರಲ್ಲಿ ಒಬ್ಬರಾಗಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾದ ಛಿಂದ್ವಾರದಲ್ಲಿ ಬಿಜೆಪಿ ವಿವೇಕ್ ಸಾಹು ಅವರನ್ನು ಕಣಕ್ಕಿಳಿಸಿದೆ.
ಕೆ.ಕನಿಮೋಳಿ(ಡಿಎಂಕೆ), ತೂತುಕುಡಿ:
ಎರಡು ಬಾರಿ ರಾಜ್ಯಸಭಾ ಸದಸ್ಯರಾಗಿರುವ ಕನಿಮೋಳಿ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ರಾಷ್ಟ್ರರಾಜಧಾನಿಯಲ್ಲಿ ಡಿಎಂಕೆಯ ಪ್ರಮುಖ ಚುಕ್ಕಾಣಿಯಾಗಿದ್ದಾರೆ. 2019ರಲ್ಲಿ ಬಿಜೆಪಿಯ ತಮಿಳಿಸೈಗಿಂತ ಮೂರು ಲಕ್ಷ ಅಧಿಕ ಮತದ ಅಂತರದಲ್ಲಿ ಜಯ ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಎಐಎಡಿಎಂಕೆ ಸಿವಸಾಮಿ ವೇಲುಮಣಿಯನ್ನು ಹಾಗೂ ತಮಿಳ್ ಮಾನಿಲ ಕಾಂಗ್ರೆಸ್ ವಿಜಯ್ ಶೀಲನ್ ಅವರನ್ನು ಕಣಕ್ಕಿಳಿಸಿದೆ.
ಸರ್ಬಾನಂದ್ ಸೋನೋವಾಲ್(ಬಿಜೆಪಿ), ದಿಬ್ರುಗಢ್:
ಅಸೋಮ್ ಗಣ ಪರಿಷತ್ ನಿಂದ ಸ್ಪರ್ಧಿಸಿ ಶಾಸಕರಾಗಿದ್ದ ಸರ್ಬಾನಂದ್ ಸೋನೋವಾಲ್, 2011ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಕೇಂದ್ರ ಸಚಿವ, ಅಸ್ಸಾಂ ಮಾಜಿ ಮುಖ್ಯಮಂತ್ರಿ ಸೋನೋವಾಲ್ ಅವರನ್ನು ಬಿಜೆಪಿ ಈ ಬಾರಿ ಲೋಕಸಭಾ ಅಖಾಡಕ್ಕಿಳಿಸಿದೆ. ದಿಬ್ರುಗಢ್ ಕ್ಷೇತ್ರದಲ್ಲಿ ಇಂಡಿಯಾ ಮೈತ್ರಿಕೂಟದ ಎಜೆಪಿಯಿಂದ ಲ್ಯೂರಿನ್ ಜ್ಯೋತಿ ಗೋಗೊಯ್ ಅವರನ್ನು ಕಣಕ್ಕಿಳಿಸಿದೆ.
ಜಿತಿನ್ ಪ್ರಸಾದ್ (ಬಿಜೆಪಿ), ಪಿಲಿಭಿಟ್:
2022ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಜಿತಿನ್ ಪ್ರಸಾದ್, ಈ ಬಾರಿ ಪಿಲಿಭಿಟ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ. ಹಾಲಿ ಸಂಸದ ವರುಣ್ ಗಾಂಧಿ ಅವರಿಗೆ ಟಿಕೆಟ್ ಕೈತಪ್ಪಿದ್ದು, ಜಿತಿನ್ ಪ್ರಸಾದ್ ಗೆ ಟಿಕೆಟ್ ನೀಡಲಾಗಿತ್ತು. ರಾಹುಲ್ ಗಾಂಧಿಯ ಆಪ್ತ ವಲಯದಲ್ಲಿದ್ದ ಜಿತಿನ್ ಪ್ರಸಾದ್, 2004, 2009ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ 2014, 2019ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಈ ಕ್ಷೇತ್ರದಲ್ಲಿ ಮಾಜಿ ಸಚಿವ, ಐದು ಬಾರಿ ಶಾಸಕರಾಗಿರುವ ಸಮಾಜವಾದಿ ಪಕ್ಷದ ಭಗ್ವರ್ ಸರನ್ ಗಂಗ್ವಾರ್ ಅಖಾಡದಲ್ಲಿದ್ದಾರೆ.
ಕಾರ್ತಿ ಚಿದಂಬರಂ(ಕಾಂಗ್ರೆಸ್), ಶಿವಗಂಗಾ:
ತಮಿಳುನಾಡಿನ ಶಿವಗಂಗಾ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನ ಕಾರ್ತಿ ಚಿದಂಬರಂ ಸ್ಪರ್ಧಿಸುತ್ತಿದ್ದು, 2019ರ ಚುನಾವಣೆಯಲ್ಲಿ ಜಯ ಸಾಧಿಸಿದ್ದರು. ಕಾರ್ತಿ ತಂದೆ, ಮಾಜಿ ಗೃಹ ಸಚಿವ ಪಿ.ಚಿದಂಬರಂ ಲೋಕಸಭಾ ಚುನಾವಣೆಯಲ್ಲಿ ಏಳು ಬಾರಿ ಗೆಲುವು ಸಾಧಿಸಿದ್ದರು. 2014ರಲ್ಲಿ ಕಾರ್ತಿ ಚಿದಂಬರಂ ಪರಾಜಯಗೊಂಡಿದ್ದು, 2019ರಲ್ಲಿ ಜಯ ಸಾಧಿಸಿದ್ದರು. ಈ ಕ್ಷೇತ್ರದಲ್ಲಿ ಎಐಎಡಿಎಂಕೆಯಿಂದ ಎ ಕ್ಸೇವಿಯರ್ ದಾಸ್, ಬಿಜೆಪಿಯಿಂದ ದೇವನಾಥನ್ ಯಾದವ್ ಟಿ ಕಣದಲ್ಲಿದ್ದಾರೆ.