Advertisement

NITI Aayog ಸಭೆ; ಎಲ್ಲಾ ರಾಜ್ಯಗಳ ಪ್ರಯತ್ನದಿಂದ ವಿಕಸಿತ ಭಾರತ್ ಗುರಿ: ಪ್ರಧಾನಿ

11:38 PM Jul 27, 2024 | Team Udayavani |

ಹೊಸದಿಲ್ಲಿ:‘ ಎಲ್ಲಾ ರಾಜ್ಯಗಳ ಸಂಯೋಜಿತ ಪ್ರಯತ್ನಗಳ ಮೂಲಕ ‘ವಿಕಸಿತ ಭಾರತ್ 2047′ ನ ಕನಸನ್ನು ಸಾಧಿಸಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಡೆದ ನೀತಿ ಆಯೋಗದ ಒಂಬತ್ತನೇ ಆಡಳಿತ ಮಂಡಳಿಯ ಸಭೆಯಲ್ಲಿ ಹೇಳಿದರು.

Advertisement

ವಿವಿಧ ಅಭಿವೃದ್ಧಿ ವಿಷಯಗಳು ಮತ್ತು ನೀತಿ ವಿಷಯಗಳ ಕುರಿತು ಚರ್ಚಿಸಲು ಶನಿವಾರ ನಡೆದ ನೀತಿ ಆಯೋಗದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಧಾನಿ “ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ನಾವು ಸಾಂಕ್ರಾಮಿಕ ರೋಗವನ್ನು ಸೋಲಿಸಿದ್ದೇವೆ. ನಮ್ಮ ಜನರು ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ತುಂಬಿದ್ದಾರೆ. ನಾವು ಎಲ್ಲರ ಸಂಯೋಜಿತ ಪ್ರಯತ್ನದಿಂದ ವಿಕಸಿತ ಭಾರತ್ 2047 ರ ನಮ್ಮ ಕನಸುಗಳನ್ನು ನನಸಾಗಿಸಬಹುದು. ವಿಕಸಿತ ರಾಜ್ಯಗಳು ವಿಕಸಿತ ಭಾರತ್ ಮಾಡುತ್ತವೆ’ ಎಂದರು.

“ವಿಕಸಿತ ಭಾರತ್ 2047 ಪ್ರತಿಯೊಬ್ಬ ಭಾರತೀಯನ ಮಹತ್ವಾಕಾಂಕ್ಷೆಯಾಗಿದೆ. ರಾಜ್ಯಗಳು ನೇರವಾಗಿ ಜನರೊಂದಿಗೆ ಸಂಪರ್ಕ ಹೊಂದಿರುವುದರಿಂದ ಈ ಗುರಿಯನ್ನು ಸಾಧಿಸುವಲ್ಲಿ ಸಕ್ರಿಯ ಪಾತ್ರ ವಹಿಸಬಹುದು” ಎಂದರು.

“ಇದು ಬದಲಾವಣೆಗಳ, ತಾಂತ್ರಿಕ ಮತ್ತು ಭೌಗೋಳಿಕ-ರಾಜಕೀಯ ಮತ್ತು ಅವಕಾಶಗಳ ದಶಕ. ಭಾರತವು ಈ ಅವಕಾಶಗಳನ್ನು ಪಡೆದುಕೊಳ್ಳಬೇಕು ಮತ್ತು ನಮ್ಮ ನೀತಿಗಳನ್ನು ಅಂತಾರಾಷ್ಟ್ರೀಯ ಹೂಡಿಕೆಗಳಿಗೆ ಅನುಕೂಲವಾಗುವಂತೆ ಮಾಡಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಇದು ಪ್ರಗತಿಯ ಮೆಟ್ಟಿಲು” ಎಂದರು.

ಕೆಲವು ರಾಜ್ಯಗಳು ಪ್ರಸ್ತಾವಿಸಿದ “ಶೂನ್ಯ ಬಡತನ’ ಕಲ್ಪನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ, ಹಳ್ಳಿಗಳನ್ನು “ಶೂನ್ಯ ಬಡತನ ಹಳ್ಳಿ’ ಗ ಳೆಂದು ಗುರುತಿಸಬಹುದೆಂಬ ಸಲಹೆ ನೀಡಿದರು.

Advertisement

ಗುಜರಾತ್‌ನಿಂದ ಸಂಸ್ಥೆ
ನೀತಿ ಆಯೋಗದ ಮಾದರಿಯಲ್ಲೇ ಗುಜರಾತ್‌ ಸ್ಟೇಟ್‌ ಆಫ್ ಟ್ರಾನ್ಸ್‌ ಫಾರ್ಮೇಶನ್‌(ಜಿಆರ್‌ಐಟಿ) ಆರಂಭಿಸಲಿದೆ ಎಂದು ಸಿಎಂ ಭೂಪೇಂದ್ರ ಪಟೇಲ್‌ ಹೇಳಿದ್ದಾರೆ. ವಿಕಸಿತ ಭಾರತಕ್ಕಾಗಿ ವಿಕಸಿತ ಗುಜರಾತ್‌ನ ನೀಲ ನಕ್ಷೆಯನ್ನು ಅವರೂ ಪ್ರಸ್ತುತಿಪಡಿಸಿದರು.

ಮೈಕ್ ಮ್ಯೂಟ್ ಮಾಡಲಾಗಿತ್ತು: ಮಮತಾ ಆಕ್ರೋಶ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಭೆಯಲ್ಲಿ ಭಾಗವಹಿಸಿದ್ದರೂ, ಪಶ್ಚಿಮ ಬಂಗಾಳಕ್ಕೆ ಕೇಂದ್ರದ ಹಣಕಾಸು ನೆರವನ್ನು ನಿರಾಕರಿಸಿದ ವಿಷಯವನ್ನು ಪ್ರಸ್ತಾಪಿಸಿದಾಗ ತಮ್ಮ ಮೈಕ್ ಅನ್ನು ಮ್ಯೂಟ್ ಮಾಡಲಾಗಿತ್ತು ಎಂದು ಆರೋಪಿಸಿ ಸಭೆಯಿಂದ ಹೊರನಡೆದು ಆಕ್ರೋಶ ಹೊರ ಹಾಕಿದ್ದಾರೆ.

“ನನ್ನನ್ನು ತಡೆದು ಏಕೆ ತಾರತಮ್ಯ ಮಾಡುತ್ತಿದ್ದೀರಿ? ವಿರೋಧ ಪಕ್ಷದಿಂದ ನಾನು ಮಾತ್ರ ಇಲ್ಲಿ ಪ್ರತಿನಿಧಿಸಿದ್ದೇನೆ ಮತ್ತು ಸಹಕಾರಿ ಒಕ್ಕೂಟವನ್ನು ಬಲಪಡಿಸಬೇಕು ಎಂಬ ಹೆಚ್ಚಿನ ಆಸಕ್ತಿಯಿಂದ ಈ ಸಭೆಗೆ ಹಾಜರಾಗುತ್ತಿದ್ದೇನೆ” ಎಂದು ಗುಡುಗಿ, ನೀತಿ ಆಯೋಗವನ್ನು ರದ್ದುಪಡಿಸಿ ಯೋಜನಾ ಆಯೋಗವನ್ನು ಪುನಃಸ್ಥಾಪಿಸಲು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.

ಸರ್ಕಾರದ ಮೂಲಗಳು ಮಮತಾ ಹೇಳಿಕೆಯನ್ನು ಹೇಳಿಕೆಯನ್ನು ತಳ್ಳಿಹಾಕಿದ್ದು, ಅವರು ಮಾತನಾಡುವ ಸಮಯ ಮುಗಿದಿತ್ತು, ಊಟದ ವಿರಾಮದ ನಂತರ ಅವರ ಸರದಿ ಬರುತ್ತಿತ್ತು ಎಂದು ಹೇಳಿದೆ.

ಎನ್‌ಡಿಎ ಮಿತ್ರ ಪಕ್ಷ ಜೆಡಿಯು ನಾಯಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆಗೆ ಗೈರಾಗಿದ್ದರು ಆದರೆ ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಬಿಹಾರದ ಪ್ರತಿನಿಧಿಗಳಾಗಿ ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next