ಜನಿವಾ: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ನಿರ್ಮಿಸಿಕೊಂಡಿರುವ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ರಾಷ್ಟ್ರದ ಪ್ರತಿನಿಧಿ ಸ್ವಿಜರ್‌ಲ್ಯಾಂಡ್‌ನ ಜಿನಿವಾದಲ್ಲಿ ಕಳೆದ ವಾರ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ್ದಾರೆ.
ಈ ವೇಳೆ ಭಾರತದಿಂದ ನಿತ್ಯಾನಂದನಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪ್ರತಿನಿಧಿ ಆರೋಪಿದ್ದಾರೆ. ಜತೆಗೆ ಹಿಂದೂಗಳಿಗಾಗಿ ಸ್ಥಾಪಿಸಲಾಗಿರುವ ಮೊದಲ ಸಾರ್ವಭೌಮ ರಾಷ್ಟ್ರ ಎಂದಿದ್ದಾರೆ.
ವಿಶ್ವಸಂಸ್ಥೆಯಲ್ಲಿ ನಡೆದ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿಯ 19ನೇ ಸಭೆಯಲ್ಲಿ ವಿಶ್ವಸಂಸ್ಥೆಗೆ ಕೈಲಾಸ ರಾಷ್ಟ್ರದ ಶಾಶ್ವತ ರಾಯಭಾರಿ ವಿಜಯಪ್ರಿಯ ನಿತ್ಯಾನಂದ ಭಾಗವಹಿಸಿದ್ದರು. ಇದಾದ ನಂತರ ಕೈಲಾಸ ರಾಷ್ಟ್ರದ ಮತ್ತೂಬ್ಬ ಪ್ರತಿನಿಧಿ ಇ.ಎನ್.ಕುಮಾರ್ ಮಾತನಾಡಿ, ರೈತರ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು. ವಿಶ್ವಸಂಸ್ಥೆಯು “ಕೈಲಾಸ’ ರಾಷ್ಟ್ರವನ್ನು ಗುರುತಿಸಿದೆಯೇ ಎಂಬುದು ಇನ್ನು ಖಚಿತವಾಗಿಲ್ಲ.
ಈಕ್ವೆಡಾರ್ ಕರಾವಳಿ ಬಳಿಯ ದ್ವೀಪವನ್ನು ಖರೀದಿಸಿರುವ ನಿತ್ಯಾನಂದ, 2020ರಲ್ಲಿ “ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಎಂದು ನಾಮಕರಣ ಮಾಡಿದ್ದಾನೆ. ಈ ರಾಷ್ಟ್ರಕ್ಕೆ ಪ್ರತ್ಯೇಕ ಪಾಸ್‌ಪೋರ್ಟ್, ರಾಷ್ಟ್ರಧ್ವಜ, “ರಿಸರ್ವ್ ಬ್ಯಾಂಕ್ ಆಫ್ ಕೈಲಾಸ’ ಇದೆ. ನಿತ್ಯಾನಂದ ವಿರುದ್ಧ ಅತ್ಯಾಚಾರ ಸೇರಿದಂತೆ ಅನೇಕ ಆರೋಪಗಳಿದ್ದು, ಸದ್ಯ ತಲೆಮರೆಸಿಕೊಂಡಿದ್ದಾನೆ.