“ನಿಶ್ಯಬ್ಧ-2′ ಚಿತ್ರತಂಡ ಚಿತ್ರ ಬಿಡುಗಡೆ ಮಾಡಬೇಕೆಂದು ರೆಡಿಮಾಡಿಕೊಂಡು ತುಂಬಾ ದಿನಗಳಿಂದ ಕಾಯುತ್ತಲೇ ಇತ್ತಂತೆ. ಆದರೆ, ವಾರ ವಾರ ಸಿನಿಮಾ ಸಾಲುಗಟ್ಟಿ ಸಿನಿಮಾಗಳು ಬಿಡುಗಡೆಯಾಗುತ್ತಿದ್ದುದನ್ನು ನೋಡಿ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೆ ಹಾಕುತ್ತಲೇ ಬಂತಂತೆ. ಆದರೆ, ಚಿತ್ರತಂಡಕ್ಕೆ ಈ ವಾರ (ನವೆಂಬರ್ 3) ಸೂಕ್ತ ಎಂದೆನಿಸಿ ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ.
ಅದರ ಪರಿಣಾಮವಾಗಿ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ನಿರ್ದೇಶಕ ದೇವರಾಜ್ ಕುಮಾರ್ ಅವರಿಗೆ “ನಿಶ್ಯಬ್ಧ-2′ ಚಿತ್ರ ಜನರಿಗೆ ಇಷ್ಟವಾಗುವ ವಿಶ್ವಾಸವಿದೆ. “ಚಿತ್ರ ಸಸ್ಪೆನ್ಸ್-ಥ್ರಿಲ್ಲರ್ ಜಾನರ್‌ನಲ್ಲಿ ಸಾಗುತ್ತದೆ. ಇಲ್ಲಿ ಹೈವೋಲ್ಟೆಜ್ ಆ್ಯಕ್ಷನ್ ಕೂಡಾ ಇದೆ. ನಮ್ಮ ನಾಯಕ ಅವೆಲ್ಲವನ್ನು ನೀಟಾಗಿ ನಿಭಾಯಿಸಿದ್ದಾರೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ದೇವರಾಜ್.
“ನಿಶ್ಯಬ್ಧ-2’ನಲ್ಲೂ ಎರಡು ನಾಯಿಗಳನ್ನು ಬಳಸಿದ್ದಾರಂತೆ. ಅವುಗಳ ಪಾತ್ರ ಕೂಡಾ ಪ್ರಮುಖವಾಗಿದೆಯಂತೆ. ಜರ್ಮನ್ ಶೆಪರ್ಡ್ ಹಾಗೂ ರಾಕ್ ಪಿಲ್ಲರ್ ತಳಿಯ ಎರಡು ನಾಯಿಗಳನ್ನು ಬಳಸಿದ್ದಾರಂತೆ. ಇವು ತರಬೇತಿ ಪಡೆದ ನಾಯಿಗಳು. “ನಾಯಿಗಳನ್ನಿಟ್ಟುಕೊಂಡು ಚಿತ್ರೀಕರಣ ಮಾಡೋದು ತುಂಬಾ ಕಷ್ಟ. ಅವುಗಳ ಮೂಡ್ ನೋಡಿಕೊಂಡು ಚಿತ್ರೀಕರಣ ಮಾಡಬೇಕು.
ತುಂಬಾ ಸೂಕ್ಷ್ಮ ಜಾತಿಯಾದ್ದರಿಂದ ಅವುಗಳಿಗೆ ಕ್ಯಾರ್‌ವಾನ್ ಕೊಡಬೇಕಾಗಿತ್ತು. ಆದರೆ, ತುಂಬಾ ಚೆನ್ನಾಗಿ ನಟಿಸಿವೆ’ ಎಂದು ತಮ್ಮ ಚಿತ್ರದಲ್ಲಿ ನಾಯಿಗಳಿಗೂ ಪ್ರಮುಖ ಪಾತ್ರವಿದೆ ಎಂದರು ದೇವರಾಜ್. ಚಿತ್ರದಲ್ಲಿ ಅವಿನಾಶ್ ಕೂಡಾ ಪ್ರಮುಖ ಪಾತ್ರ ಮಾಡಿದ್ದು, ಅವರ ಪಾತ್ರವನ್ನು ಇಂಗ್ಲೀಷ್ ಸಿನಿಮಾವೊಂದರ ಸ್ಫೂರ್ತಿಯೊಂದಿಗೆ ಸೃಷ್ಟಿಸಿದ್ದಾಗಿ ಒಪ್ಪಿಕೊಂಡರು.
ಚಿತ್ರದಲ್ಲಿ ರೂಪೇಶ್ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ. ಅವರಿಗೆ ಸಿನಿಮಾ ಬಿಡುಗಡೆಯ ಖುಷಿಯ ಜೊತೆಗೆ ಭಯ ಕೂಡಾ ಆಗುತ್ತಿದೆಯಂತೆ. ಜನ ಸಿನಿಮಾವನ್ನು ಹೇಗೆ ಸ್ವೀಕರಿಸುತ್ತಾರೆಂಬ ಕುತೂಹಲದೊಂದಿಗೆ ಎದುರು ನೋಡುತ್ತಿದ್ದಾರಂತೆ. ನಾಯಕಿ ಆರಾಧ್ಯ ಶೆಟ್ಟಿಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ ವಿಶ್ವಾಸವಿದೆಯಂತೆ. ಚಿತ್ರವನ್ನು ತಾರಾನಾಥ ಶೆಟ್ಟಿ ಬೋಳಾರು ನಿರ್ಮಿಸಿದ್ದು, ಮಂಗಳೂರಿನಿಂದ ಬಂದು ಕನ್ನಡ ಸಿನಿಮಾ ಮಾಡಿದ ಖುಷಿ ಇದೆಯಂತೆ.