Advertisement
ಬುಧವಾರವಷ್ಟೇ ಮುಖೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಇದರ ಬೆನ್ನಲ್ಲೇ ಪ್ರಕರಣದ ಇನ್ನೋರ್ವ ಅಪರಾಧಿ ವಿನಯ್ ಶರ್ಮಾ ಮತ್ತೆ ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ ಇಂದು ಅರ್ಜಿಯನ್ನು ಸಲ್ಲಿಸಿದ್ದಾನೆ.
Related Articles
Advertisement
ಇವರನ್ನು ಹೊರತುಪಡಿಸಿ ಇನ್ನೊಬ್ಬ ಅಪ್ರಾಪ್ತನಾಗಿದ್ದ ಕಾರಣ ಅವನನ್ನು ಬಾಲಾಪರಾಧಿ ಕೇಂದ್ರದಲ್ಲಿರಿಸಲಾಗಿತ್ತು ಮತ್ತು ಆ ಬಳಿಕ ಆತ ಬಿಡುಗಡೆಗೊಂಡಿದ್ದ. ಪ್ರಕರಣದ ಆರನೇ ಆರೋಪಿ ಪ್ರಕರಣದ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಜೈಲಿನಲ್ಲೇ ನೇಣಿಗೆ ಶರಣಾಗಿದ್ದ.
ಇದೀಗ ಈ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಮೂವರಿಗೆ ಮಾತ್ರವೇ ನೇಣು ಕುಣಿಕೆಯಿಂದ ಪಾರಾಗಲು ಕಾನೂನು ಮಾರ್ಗಗಳು ಉಳಿದುಕೊಂಡಿವೆ. ಆ ಕುರಿತಾದ ವಿವರ ಈ ರೀತಿಯಾಗಿದೆ.
ವಿನಯ್ ಕುಮಾರ್ ಶರ್ಮಾ: ಈತ ಬುಧವಾರದಂದು ಮತ್ತೆ ರಾಷ್ಟ್ರಪತಿಯವರಿಗೆ ತನ್ನ ಕ್ಷಮಾದಾನದ ಅರ್ಜಿಯನ್ನು ಸಲ್ಲಿಸಿದ್ದಾನೆ. ದೆಹಲಿ ಸರಕಾರ ಮತ್ತು ಗೃಹ ಸಚಿವಾಲಯ ತಮ್ಮ ತಮ್ಮ ಶಿಫಾರಸುಗಳನ್ನು ಸಲ್ಲಿಸಿದ ಬಳಿಕ ರಾಷ್ಟ್ರಪತಿಯವರು ಈ ಅರ್ಜಿಯ ಕುರಿತಾಗಿ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಒಂದು ವೇಳೆ ರಾಷ್ಟ್ರಪತಿಯವರು ಈತನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರೆ, ಇದನ್ನು ಪ್ರಶ್ನಿಸಿ ಆತ ಮತ್ತೆ ಸುಪ್ರೀಂ ಕೋರ್ಟ್ ಮುಂದೆ ಮನವಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ. ಈತನ ಕ್ಯುರೇಟಿವ್ ಮನವಿ ಅರ್ಜಿಯನ್ನು ಉಚ್ಛನ್ಯಾಯಾಲವು ಈಗಾಗಲೇ ತಿರಸ್ಕರಿಸಿದೆ.
ಪವನ್ ಗುಪ್ತಾ: 25 ವರ್ಷದ ಈತನ ಪಾಲಿಗೆ ಕಾನೂನು ಮಾರ್ಗಗಳು ಇನ್ನೂ ಉಳಿದುಕೊಂಡಿದೆ. ಈತ ತನ್ನ ಕ್ಯುರೇಟಿವ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದೆ ಇನ್ನೂ ಸಲ್ಲಿಸಿಲ್ಲ. ಒಂದುವೇಳೆ ಈತ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿ ಅದು ನ್ಯಾಯಾಲಯದಲ್ಲಿ ತಿರಸ್ಕೃತಗೊಂಡರೆ ಆತ ಕ್ಷಮಾದಾನಕ್ಕಾಗಿ ರಾಷ್ಟ್ರಪತಿಯವರ ಮೊರೆ ಹೋಗಬಹುದಾಗಿದೆ. ಮತ್ತು ಅದೂ ತಿರಸ್ಕೃತಗೊಂಡರೆ ಇದನ್ನು ಪ್ರಶ್ನಿಸಿ ಆತ ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ಅವಕಾಶವಿದೆ.
ಅಕ್ಷಯ್ ಕುಮಾರ್ ಸಿಂಗ್: ಈತ ತನ್ನ ಕ್ಯುರೇಟಿವ್ ಅರ್ಜಿಯನ್ನು ಇಂದು ಸಲ್ಲಿಸಿದ್ದಾನೆ. ‘ಮಹಿಳೆಯರ ಮೇಲಿನ ಹಿಂಸೆಯ ವಿಚಾರದಲ್ಲಿ ಸಾರ್ವಜನಿಕ ಒತ್ತಡ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪರಿಗಣಿಸಿ ಕಠಿಣ ಶಿಕ್ಷೆಯನ್ನು ನೀಡಬೇಕೆಂಬ ನೆಲೆಯಲ್ಲಿ ನ್ಯಾಯಾಲಯವು ತನಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿದೆ’ ಎಂಬ ಅಂಶವನ್ನು ಆತ ತನ್ನ ಅರ್ಜಿಯಲ್ಲಿ ವಾದಿಸಿದ್ದಾನೆ. ಇದರ ಹೊರತಾಗಿ ಈತನಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸುವ ಇನ್ನೊಂದು ಅವಕಾಶ ಬಾಕಿ ಇದೆ. ಮತ್ತು ರಾಷ್ಟ್ರಪತಿಯವರು ಈತನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದರೆ ಅದನ್ನು ಪ್ರಶ್ನಿಸಿ ಆತ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೇರಲು ಅವಕಾಶವಿದೆ.
ಮುಖೇಶ್ ಕುಮಾರ್ ಸಿಂಗ್: ಈತನ ಪಾಲಿಗೆ ಎಲ್ಲಾ ಕಾನೂನು ಮಾರ್ಗಗಳು ಮುಚ್ಚಲ್ಪಟ್ಟಿವೆ. ಈತನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಯವರು ಈಗಾಗಲೇ ತಿರಸ್ಕರಿಸಿದ್ದಾರೆ ಮತ್ತು ಇದನ್ನು ಪ್ರಶ್ನಿಸಿ ಆತ ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯೂ ಸಹ ತಿರಸ್ಕೃತಗೊಂಡಿದೆ.
ಆದರೆ ಈತನೊಬ್ಬನನ್ನೇ ನೇಣಿಗೇರಿಸಲು ಈ ಪ್ರಕರಣದ ತೀರ್ಪಿನಲ್ಲಿ ಅವಕಾಶವಿಲ್ಲ. ಯಾಕೆಂದರೆ, ಒಂದೇ ಪ್ರಕರಣದಲ್ಲಿ ಒಂದಕ್ಕಿಂತ ಹೆಚ್ಚಿನ ಅಪರಾಧಿಗಳಿಗೆ ನ್ಯಾಯಾಲಯವು ಮರಣದಂಡನೆ ವಿಧಿಸಿದ್ದರೆ ಅವರಲ್ಲಿ ಒಬ್ಬ ಅಪರಾಧಿಯನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ ತನ್ನ ಮೂವರು ಸಹಚರರ ಕಾನೂನು ಪ್ರಕ್ರಿಯೆಗಳೆಲ್ಲಾ ಮುಗಿಯುವಲ್ಲಿವರೆಗೆ ಈತ ಸೇಫ್!