ನವದೆಹಲಿ: ಏಳು ವರ್ಷಗಳ ಹಿಂದೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಎಸಗಿದ ನಾಲ್ವರು ಅಪರಾಧಿಗಳಿಗೆ ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಮರಣದಂಡನೆ ವಿಧಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ನಿರ್ಭಯಾ ತಾಯಿ ಆಶಾದೇವಿ, ತಡವಾಗಿಯಾದರೂ ನ್ಯಾಯ ಸಿಕ್ಕಿದೆ, ಆದರೂ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದಿದ್ದಾರೆಂದು ಮಾಧ್ಯಮದ ವರದಿ ತಿಳಿಸಿದೆ.
ನಿರ್ಭಯಾ ಪ್ರಕರಣದಲ್ಲಿ ಕಾನೂನು ಹೋರಾಟ ಮುಂದುವರೆಸುತ್ತೇನೆ. ಭವಿಷ್ಯದಲ್ಲಿ ಇಂತಹ ಪ್ರಕರಣಗಳಲ್ಲಿ ಅಪರಾಧಿಗಳು ಯಾವುದೇ ತಂತ್ರಗಳನ್ನು ಹೂಡಿ ಶಿಕ್ಷೆಯನ್ನು ವಿಳಂಬ ಮಾಡದಂತೆ ಮಾರ್ಗಸೂಚಿ ಹೊರಡಿಸುವಂತೆ ಸುಪ್ರಿಂಕೋರ್ಟ್ ನಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಮಾರ್ಚ್ 21 ರಂದು ಈ ಬಗ್ಗೆ ವಿಚಾರಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಾತ್ರವಲ್ಲದೆ ಒಂದಕ್ಕಿಂತ ಹೆಚ್ಚಿನ ಅಪರಾಧಿಗಳಿದ್ದರೆ ಪ್ರತ್ಯೇಕವಾಗಿ ಕ್ಯುರೇಟಿವ್ ಅರ್ಜಿ ಸಲ್ಲಿಸಲು ಅವಕಾಶ ನೀಡಬಾರದು ಎಂದು ಕೋರ್ಟ್ ನಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
8 ವರ್ಷಗಳಿಂದ ನ್ಯಾಯಕ್ಕಾಗಿ ಅಲೆದಾಡಿದ್ದೇನೆ. ಈ ದಿನ ದೇಶದ ಹೆಣ್ಣು ಮಕ್ಕಳಿಗೆ ನ್ಯಾಯಾ ಸಿಕ್ಕಿದೆ. ನ್ಯಾಯಾಂಗ, ಸರ್ಕಾರ, ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸುತ್ತೇನೆ. ಅಪರಾಧಿಗಳಿಗೆ ಮರಣ ದಂಡಣೆ ಜಾರಿಯಾದ ವಿಚಾರ ತಿಳಿದಾಕ್ಷಣ ಮಗಳ ಫೋಟೋ ತಬ್ಬಿಕೊಂಡೆ ಎಂದು ಭಾವುಕರಾದರು.
23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿಯನ್ನು ಡಿಸೆಂಬರ್ 16, 2012ರಂದು ಬಾಲಾಪರಾಧಿ ಸೇರಿದಂತೆ ಒಟ್ಟು ಆರು ಮಂದಿ ಪೈಶಾಚಿಕವಾಗಿ ಅತ್ಯಾಚಾರ ವಸಗಿ ಕೊಲೆಗೈದು ವಿಕೃತಿ ಮೆರೆದಿದ್ದರು. ಒಟ್ಟು ಆರು ಅಪರಾದಿಗಳಲ್ಲಿ ರಾಮ್ ಸಿಂಗ್ ಎಂಬಾತ ತಿಹಾರ್ ಜೈಲಿನಲ್ಲೇ 2013ರ ಮಾರ್ಚ್ ನಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಮತ್ತೊಬ್ಬ ಬಾಲಾಪರಾಧಿಯನ್ನು ಅಪರಾಧ ನಡೆದ ಮೂರು ವರ್ಷಗಳ ಬಳಿಕ ಬಿಡುಗಡೆ ಮಾಡಲಾಗಿತ್ತು. ಉಳಿದ ನಾಲ್ವರು ಅಪರಾಧಿಗಳಾದ ಪವನ್ ಕುಮಾರ್ ಗುಪ್ತಾ, ವಿನಯ್ ಕುಮಾರ್ ಶರ್ಮಾ, ಮುಕೇಶ್ ಕುಮಾರ್ ಸಿಂಗ್ , ಅಕ್ಷಯ್ ಕುಮಾರ್ ಸಿಂಗ್ ರನ್ನು ಇಂದು ಬೆಳಗ್ಗೆ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.