Advertisement

ಅತ್ಯಾಚಾರ ಪ್ರಕರಣಗಳ ಅಪರಾಧಿಗಳಿಗೆ ಆರು ತಿಂಗಳೊಳಗೆ ಗಲ್ಲಾಗಬೇಕು: ಕೇಜ್ರಿವಾಲ್ ಆಗ್ರಹ

09:42 AM Feb 01, 2020 | Hari Prasad |

ನವದೆಹಲಿ: ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ದಿನಾಂಕ ಮತ್ತೆ ಮುಂದಕ್ಕೆ ಹೋಗಿರುವುದಕ್ಕೆ ದೆಹಲಿ ಮುಖ್ಯಮಂತ್ತಿ ಅರವಿಂದ ಕೇಜ್ರಿವಾಲ್ ಬೇಸರ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಈ ಪಾತಕಿಗಳು ಕಾನೂನಿನಲ್ಲಿರಬಹುದಾದ ಹುಳುಕಗಳ ಲಾಭವನ್ನು ಪಡೆದು ತಮ್ಮ ಪಾಲಿನ ಶಿಕ್ಷೆಯನ್ನು ಮುಂದೂಡುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಕಿಡಿಕಾರಿದ್ದಾರೆ.

Advertisement

ಇದಕ್ಕಾಗಿ ಅತ್ಯಾಚಾರ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಗೊಳಗಾದ ಅಪರಾಧಿಯೊಬ್ಬನಿಗೆ ಆರು ತಿಂಗಳೊಳಗಾಗಿ ಗಲ್ಲಾಗುವಂತೆ ಕಾನೂನಿಗೆ ತಿದ್ದುಪಡಿ ತರುವ ತುರ್ತು ಅನಿವಾರ್ಯತೆ ಇದೆ ಎಂದು ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.

2012ರಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಅಮಾನುಷವಾಗಿ ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯನ್ನು ಬರ್ಭರವಾಗಿ ಕೊಲೆ ಮಾಡಿರುವ ಆರೋಪದಲ್ಲಿ ನಾಲ್ಕು ಜನರನ್ನು ದೋಷಿಗಳೆಂದು ಪರಿಗಣಿಸಿದ ವಿಚಾರಣಾ ನ್ಯಾಯಾಲವು ಈ ನಾಲ್ಕೂ ಜನರಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿತ್ತು.

ನ್ಯಾಯಾಲಯದ ಈ ಆದೇಶಕ್ಕೆ ಪೂರಕವಾಗಿ ಅಪರಾದಿಗಳನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲು ಜನವರಿ 22ರಂದು ಡೆತ್ ವಾರಂಟ್ ಹೊರಡಿಸಲಾಗಿತ್ತು. ಆದರೆ ಇದನ್ನು ಮುಂದಕ್ಕೆ ಹಾಕಿಸುವಲ್ಲಿ ನಾಲ್ವರು ಯಶಸ್ವಿಯಾಗಿದ್ದರು. ಬಳಿಕ ಹೊಸ ಡೆತ್ ವಾರಂಟ್ ಹೊರಡಿಸಿದ್ದ ಸುಪ್ರೀಂ ಕೋರ್ಟ್ ಫೆಬ್ರವರಿ 01ರಂದು ಇವರನ್ನು ಗಲ್ಲಿಗೇರಿಸಲು ಆದೇಶ ಹೊರಡಿಸಿತ್ತು. ಅದರೆ ಇದನ್ನು ಅನಿರ್ಧಾಷ್ಚಾವಧಿಗೆ ಮುಂದೂಡುವಂತೆ ಮಾಡುವಲ್ಲಿ ನಾಲ್ವರು ಪಾತಕಿಗಳ ವಕೀಲರು ಯಶಸ್ವಿಯಾಗಿದ್ದಾರೆ.

ನ್ಯಾಯಾಲಯದ ಇಂದಿನ ಈ ಆದೇಶದ ಬಳಿಕ ಸಂತ್ರಸ್ತೆಯ ತಂದೆ ಬದ್ರಿನಾಥ್ ತನ್ನ ಮಗಳನ್ನು ಕೊಂದ ಪಾತಕಿಗಳಿಗೆ ಗಲ್ಲು ಶಿಕ್ಷೆ ವಿಳಂಬವಾಗುತ್ತಿರುವುದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ದೂಷಿಸಿದ್ದಾರೆ. ಇನ್ನೊಂದೆಡೆ ಡೆತ್ ವಾರೆಂಟ್ ರದ್ದುಗೊಳಿಸಿದ ನ್ಯಾಯಾಲಯದ ತೀರ್ಪಿನ ಬಳಿಕ ನಿರ್ಭಯಾ ತಾಯಿ ನ್ಯಾಯಾಲಯದ ಹೊರಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ ಮತ್ತು ದೆಹಲಿ ಸರಕಾರ ಹಾಗೂ ಕೇಂದ್ರ ಸರಕಾಗಳಿಗೆ ತನ್ನ ಮಗಳಿಗೆ ನ್ಯಾಯ ಸಿಗುವುದು ಬೇಕಾಗಿಲ್ಲ ಎಂದು ಅವರು ಆಕ್ರೋಶಭರಿತರಾಗಿ ನುಡಿದ್ದಾರೆ.

Advertisement

‘ವ್ಯವಸ್ಥೆಯ ಕುರಿತಾಗಿ ನಮಗೆ ನಿರಾಶೆ ಮೂಡಿದೆ. ಆದರೆ ನಾವು ನಮ್ಮ ಪಾಲಿನ ನ್ಯಾಯಕ್ಕಾಗಿ ಹೋರಾಡುವುದನ್ನು ಮುಂದುವರಿಸಲಿದ್ದೇವೆ. ಈ ಪಾತಕಿಗಳು ನೇಣುಗಂಬಕ್ಕೆ ಏರುವಲ್ಲಿವರೆಗೆ ನನ್ನ ಹೋರಾಟ ಮುಂದುವರಿಯಲಿದೆ’ ಎಂದು ನಿರ್ಭಯಾ ತಾಯಿ ನುಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next