ನವದೆಹಲಿ: ನಿರ್ಭಯಾ ಅತ್ಯಾಚಾರ, ಹತ್ಯೆ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲು ಡೆತ್ ವಾರಂಟ್ ಹೊರಡಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದಿಲ್ಲಿ ಕೋರ್ಟ್ ಜನವರಿ 7ಕ್ಕೆ ಮುಂದೂಡಿದ ಬೆನ್ನಲ್ಲೇ ಪ್ರಕರಣದ ಮತ್ತೊಬ್ಬ ಆರೋಪಿ ತಾನು ಘಟನೆ ನಡೆದ ವೇಳೆ ಬಾಲಾಪರಾಧಿಯಾಗಿದ್ದೆ ಎಂದು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಹೈಕೋರ್ಟ್ 2020ರ ಜನವರಿ 24ಕ್ಕೆ ಮುಂದೂಡಿದೆ.
ಈ ಹಿನ್ನೆಲೆಯಲ್ಲಿ ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಕೂಡಲೇ ಗಲ್ಲು ಶಿಕ್ಷೆ ಜಾರಿಗೊಳಿಸುವ ಪ್ರಕ್ರಿಯೆ ಇನ್ನಷ್ಟು ವಿಳಂಬವಾಗಲಿದೆ. ನಿರ್ಭಯಾ ಪ್ರಕರಣದಲ್ಲಿ ಅಪರಾಧಿಯಾಗಿರುವ ಪವನ್ ಗುಪ್ತಾ, ತಾನು 2012ರಲ್ಲಿ ಅಪ್ರಾಪ್ತನಾಗಿದ್ದೇನೆ. ಈ ಹಿನ್ನೆಲೆಯಲ್ಲಿ ತನಗೆ ಬಾಲಾಪರಾಧಿ ಎಂದು ಪರಿಗಣಿಸಿ ಬಿಡುಗಡೆ ಮಾಡಬೇಕೆಂದು ಕೋರಿ ದೆಹಲಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ.
ಗುರುವಾರ ದೆಹಲಿ ಹೈಕೋರ್ಟ್ ಈ ಅರ್ಜಿ ವಿಚಾರಣೆ ಜನವರಿಗೆ ಮುಂದೂಡಿದ್ದು, ಪವನ್ ಗುಪ್ತಾ ಅಪ್ರಾಪ್ತ ಎಂಬುದನ್ನು ಸಾಬೀತುಪಡಿಸುವ ಹೊಸ ದಾಖಲೆಯನ್ನು ಸಲ್ಲಿಸಲು ಗುಪ್ತಾ ಪರ ವಕೀಲರಿಗೆ ಒಂದು ತಿಂಗಳ ಕಾಲಾವಕಾಶ ನೀಡಿದೆ.
2012ರ ಡಿಸೆಂಬರ್ 16ರಂದು ನಿರ್ಭಯಾ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹತ್ಯೆಗೈದಿರುವ ಪ್ರಕರಣದಲ್ಲಿ ಪವನ್ ಗುಪ್ತಾ ಅಪರಾಧಿಯಾಗಿದ್ದು, ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾನೆ. ದೆಹಲಿ ಹೈಕೋರ್ಟ್ ಗೆ ಸಲ್ಲಿಸಿರುವ ಹೊಸ ಅರ್ಜಿಯಲ್ಲಿ, 2012ರಲ್ಲಿ ತಾನು ಅಪ್ರಾಪ್ತನಾಗಿದ್ದು, ತನಗೆ ಬಾಲಾಪರಾಧಿ ಕಾಯ್ದೆಯಡಿ ನ್ಯಾಯ ಕೊಡಿಸಬೇಕು ಎಂದು ವಾದಿಸಿದ್ದಾನೆ.
ಪ್ರಕರಣದ ಮತ್ತೊಬ್ಬ ಆರೋಪಿ ಅಕ್ಷಯ್ ಕುಮಾರ್ ಸಿಂಗ್ ತನಗೆ ವಿಧಿಸಿದ್ದ ಮರಣದಂಡನೆ ಶಿಕ್ಷೆಯ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿದೆ. ನಿರ್ಭಯಾ ಪ್ರಕರಣದಲ್ಲಿ ಪವನ್ ಗುಪ್ತಾ, ವಿನಯ್ ಕುಮಾರ್, ಮುಕೇಶ್ ಸಿಂಗ್, ಅಕ್ಷಯ್ ಕುಮಾರ್ ಸಿಂಗ್ ಮತ್ತು ರಾಮ್ ಸಿಂಗ್ ಸೇರಿ ಐವರು ದೋಷಿಯಾಗಿದ್ದರು. ಆರನೇ ವ್ಯಕ್ತಿ ಬಾಲಾಪರಾಧಿ ಕಾಯ್ದೆ ಅಡಿ ದೋಷಿ ಎಂದು ತೀರ್ಪು ನೀಡಿ ಬಿಡುಗಡೆಗೊಳಿಸಲಾಗಿತ್ತು. ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದ.