Advertisement

ನಿರ್ಭಯಾ ಅತ್ಯಾಚಾರಿಗಳಿಗೆ ಡೆತ್‌ ವಾರೆಂಟ್‌ ಸ್ವಾಗತಾರ್ಹ ನಡೆ

10:17 PM Jan 07, 2020 | mahesh |

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಪಟಿಯಾಲಾ ನ್ಯಾಯಾಲಯ ಡೆತ್‌ ವಾರೆಂಟ್‌ ನೀಡಿರುವುದು ಸ್ವಾಗತಾರ್ಹ. ಇದರಿಂದ ಅಪರಾಧ ಜಗತ್ತಿಗೆ ಸ್ಪಷ್ಟ ಸಂದೇಶ ಕಳುಹಿಸಿದಂತಾಗುತ್ತದೆ. 7 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ನಿರ್ಭಯಾ ಪೋಷಕರಿಗೆ ಈಗಲಾದರೂ ತುಸು ಸಾಂತ್ವನ ಸಿಗಬಹುದು.

Advertisement

ನಿರ್ಭಯಾ ಪ್ರಕರಣದಲ್ಲಿ ದೆಹಲಿಯ ಪಟಿಯಾಲಾ ನ್ಯಾಯಾಲಯ ನಾಲ್ಕೂ ದೋಷಿಗಳ ವಿರುದ್ಧ ಡೆತ್‌ವಾರಂಟ್‌ ಜಾರಿ ಮಾಡಿದೆ. ಜನವರಿ 22ರ ಮುಂಜಾವು 7 ಗಂಟೆಗೆ ತಿಹಾರ ಜೈಲಿನಲ್ಲಿ ಇವರನ್ನು ನೇಣಿಗೇರಿಸಬೇಕೆಂದು ನ್ಯಾಯಾಲಯ ತೀರ್ಪಿತ್ತಿದೆ. ಆದಾಗ್ಯೂ ಈ ಅಪರಾಧಿಗಳಿಗೆ ಅನ್ಯ ಕಾನೂನು ವಿಕಲ್ಪಗಳನ್ನು ಬಳಸಿಕೊಳ್ಳಲು 14 ದಿನಗಳ ಸಮಯವನ್ನೂ ನೀಡಿದೆ.

ಇದರ ನಡುವೆಯೇ ಈ ದೋಷಿಗಳು ಕ್ಯೂರೇಟಿವ್‌ ಪಿಟೀಷನ್‌, ಕ್ಷಮಾದಾನ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟಲ್ಲಿ 7 ವರ್ಷಗಳ ಹಿಂದೆ ದೇಶದ ಜನಮಾನಸವನ್ನು ಬಹುವಾಗಿ ಕದಡಿದ್ದ ಪ್ರಕರಣ ತಾರ್ಕಿಕ ಘಟ್ಟಕ್ಕೆ ಬಂದು ತಲುಪಿದಂತಾಗಿದೆ. ಆದಾಗ್ಯೂ 2013ರಲ್ಲೇ ಈ ಪಾಪಿಗಳಿಗೆ ಕೆಳ ಹಂತದ ನ್ಯಾಯಾಲಯ ನೇಣುಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್‌ನಲ್ಲಿ ನಡೆದ ಈ ಅತ್ಯಾಚಾರ ಪ್ರಕರಣದ ವಿವರಗಳು ಎಷ್ಟೊಂದು ಭೀಭತ್ಸವಾಗಿದ್ದವೆಂದರೆ, ಅತ್ಯಾಚಾರಿಗಳನ್ನು ಕೂಡಲೇ ಗಲ್ಲಿಗೇರಿಸಿ ಎಂದು 2012ರಲ್ಲಿ ಭಾರತೀಯರೆಲ್ಲ ಬೀದಿಗಿಳಿದು ಪ್ರತಿಭಟಿಸಿದ್ದರು. ಹೆಣ್ಣು ಮಕ್ಕಳ ಸುರಕ್ಷತೆಯ ವಿಚಾರ ದೇಶದ ಪ್ರಮುಖ ಚರ್ಚಾ ವಿಷಯವಾಯಿತು. ಈ ಪ್ರಕರಣದಲ್ಲಿ ಅತಿಹೆಚ್ಚು ಹಿಂಸೆ ಮಾಡಿದ ಬಾಲಾಪರಾಧಿಯು ಕುಣಿಕೆಯಿಂದ ಪಾರಾಗಿದ್ದೂ ಕೂಡ ಆಕ್ರೋಶಕ್ಕೆ ಕಾರಣವಾಯಿತು. ಜನಾಕ್ರೋಶ ಮುಗಿಲುಮುಟ್ಟಿದ ರೀತಿ ಹೇಗಿತ್ತೆಂದರೆ, ಸರ್ಕಾರ ಕೂಡಲೇ ಎಚ್ಚೆತ್ತು ಹಲವಾರು ಕಾನೂನುಗಳನ್ನು ಜಾರಿಗೆ ತಂದಿತು, ಅತ್ಯಾಚಾರ ಪ್ರಕರಣಗಳ ವಿಚಾರಣೆಗೆಂದೇ ಪ್ರತ್ಯೇಕ ತ್ವರಿತ ಗತಿ ನ್ಯಾಯಾಲಯಗಳನ್ನು ಸೃಷ್ಟಿಸಲಾಯಿತು. ಒಂದರ್ಥದಲ್ಲಿ ನಿರ್ಭಯಾ ಪ್ರಕರಣ ದೇಶದಲ್ಲಿ ಮಹಿಳೆಯರ ವಿರುದ್ಧದ ಅತ್ಯಾಚಾರ, ಹಿಂಸೆ, ಲೈಂಗಿಕ ದೌರ್ಜನ್ಯಗಳ ಬಗ್ಗೆ ವಿಸ್ತೃತ ಚರ್ಚೆಗೆ, ಚಿಂತನೆಗಳಿಗೆ ಕಾರಣವಾಯಿತು.

ಆದರೆ ಇದೆಲ್ಲದರ ಹೊರತಾಗಿಯೂ ದೇಶದಲ್ಲಿ ಅತ್ಯಾಚಾರ ಪ್ರಕರಣಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ ಎನ್ನುವುದು ದುರಂತ. ಇತ್ತೀಚೆಗೆ ಹೈದ್ರಾಬಾದ್‌ ಹಾಗೂ ಉನ್ನಾವೋಗಳಲ್ಲಿ ನಡೆದ ಅತ್ಯಾಚಾರ-ಕೊಲೆ ಪ್ರಕರಣಗಳಷ್ಟೇ ಅಲ್ಲದೆ, ಪ್ರತಿವರ್ಷ ದೇಶಾದ್ಯಂತ ದಾಖಲಾಗುತ್ತಿರುವ ಸಾವಿರಾರು ಪ್ರಕರಣಗಳು ಮಹಿಳಾ ಸುರಕ್ಷತೆಯ ಪ್ರಶ್ನೆಯನ್ನು ಎತ್ತುತ್ತಲೇ ಇವೆ.

Advertisement

ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆ ಎಷ್ಟು ವಿಳಂಬ ಗತಿ, ಜಟಿಲತೆ ಹೊಂದಿದೆಯೆಂದರೆ, ಅಪರಾಧಿಗಳೆಲ್ಲ ಅಪೀಲಿನ ಮೇಲೆ ಅಪೀಲು ಸಲ್ಲಿಸುತ್ತಾ, ಜಾಮೀನು ಪಡೆಯುತ್ತಾ ಆರಾಮಾಗಿ ಇದ್ದುಬಿಡುತ್ತಾರೆ. ಉನ್ನಾವೋ ಪ್ರಕರಣದಲ್ಲಂತೂ ಜಾಮೀನಿನ ಮೇಲೆ ಹೊರಬಂದ ದುರುಳರು, ಅತ್ಯಾಚಾರ ಸಂತ್ರಸ್ತೆಗೆ ಬೆಂಕಿ ಹಚ್ಚಿ ಕೊಂದುಹಾಕಿದರು. ಇದೆಲ್ಲದರ ಫ‌ಲವಾಗಿ ಸಂತ್ರಸ್ತ ಕುಟುಂಬಗಳು ವರ್ಷಗಟ್ಟಲೇ ನ್ಯಾಯಾಲಯಗಳ ಮೆಟ್ಟಿಲು ಹತ್ತುತ್ತಾ, ನ್ಯಾಯಕ್ಕಾಗಿ ಅಂಗಲಾಚುತ್ತಾ ಬದುಕು ಸವೆಸುವಂತಾಗಿದೆ. ನ್ಯಾಯಾಂಗ ವ್ಯವಸ್ಥೆಯ ವಿಳಂಬ ಕಾರ್ಯವೈಖರಿಯ ಮೇಲೆ ದೇಶವಾಸಿಗಳಿಗೆ ಎಷ್ಟೊಂದು ಅಸಮಾಧಾನವಿದೆ ಎನ್ನುವುದು ಹೈದ್ರಾಬಾದ್‌ ಪ್ರಕರಣದಲ್ಲಿ ಸಾಬೀತಾಯಿತು.

ಅಪರಾಧಿಗಳೆಲ್ಲ ಎನ್‌ಕೌಂಟರ್‌ನಲ್ಲಿ ಸತ್ತರು ಎನ್ನುವ ಸುದ್ದಿ ಕೇಳಿ ದೇಶವಾಸಿಗಳೆಲ್ಲ ಬೀದಿಗಿಳಿದು ಹರ್ಷೋದ್ಗಾರ ಮಾಡಿದರು. ಹೈದ್ರಾಬಾದ್‌ ಪೊಲೀಸರನ್ನು ಎತ್ತಿ ಕುಣಿದಾಡಿದರು.

ನಿರ್ಭಯಾ ಪ್ರಕರಣದ ಅಪರಾಧಿಗಳಿಗೆ ಪಟಿಯಾಲಾ ನ್ಯಾಯಾಲಯ ಡೆತ್‌ ವಾರೆಂಟ್‌ ನೀಡಿರುವುದು
ಸ್ವಾಗತಾರ್ಹ. ಇದರಿಂದ ಅಪರಾಧ ಜಗತ್ತಿಗೆ ಸ್ಪಷ್ಟ ಸಂದೇಶ ಕಳುಹಿಸಿದಂತಾಗುತ್ತದೆ. 7 ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ನಿರ್ಭಯಾ ಪೋಷಕರು ಈಗಲಾದರೂ ತುಸು ನೆಮ್ಮದಿಯ ನಿಟ್ಟುಸಿರುಬಿಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next