ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಸಮುದ್ರ ಕಿನಾರೆಯಲ್ಲಿ ನೀರವ್ ಮೋದಿಯ ಬಂಗಲೆಯನ್ನು ಡೈನಮೈಟ್ ಇಟ್ಟು ಪುಡಿ ಮಾಡಲಾಗಿದೆ. ದೇಶಕ್ಕೆ ಮೋಸ ಮಾಡಿ ಹೋದ ಉದ್ಯಮಿಗಳನ್ನು ಸುಮ್ಮನೇ ಬಿಡುವುದಿಲ್ಲ ಎಂಬ ಸಂದೇಶ ಕಳುಹಿಸುವ ಪ್ರಯತ್ನ ಇದಾಗಿದೆ.
100 ಕೋಟಿ ರೂ ಮೌಲ್ಯದ ಈ ಬಂಗಲೆಯನ್ನು ಸರ್ಕಾರಿ ಜಾಗದ ಮೇಲೆ ಅನಧಿಕೃತವಾಗಿ ಕಟ್ಟಿದ ಕಾರಣಕ್ಕಾಗಿ ಕೆಡವಲಾಗಿದೆ. ನೀರವ್ ಮೋದಿ ಭಾರತದಿಂದ ಪಲಾಯನಗೈದ ನಂತರದಿಂದ ಈ ಬಂಗಲೆ ಜಾರಿ ನಿರ್ದೇಶ ನಾಲಯದ ಹಿಡಿತದಲ್ಲಿತ್ತು. ನೀರವ್ ಮೋದಿಯೇನೋ ಅನಧಿಕೃತವಾಗಿ ಬಂಗಲೆ ನಿರ್ಮಿಸಿ ದೋಷಿಯೆನಿಸಿಕೊಂಡಿರ ಬಹುದು, ಆದರೆ ಆ ಬಂಗಲೆ ಕಟ್ಟಲು ಅನುವು ಮಾಡಿಕೊಟ್ಟ ಸರ್ಕಾರಿ ಯಂತ್ರವೂ ಅಷ್ಟೇ ದೋಷಿ. ಆದರೆ ಬಂಗಲೆ ನಿರ್ಮಾಣದ ಸಮಯ ದಲ್ಲಿ ನೀರವ್ ಮೋದಿ “ದೇಶದ್ರೋಹಿ’ ಅಥವಾ “ಮೋಸಗಾರ’ ಎಂದು ಕರೆಸಿಕೊಳ್ಳುತ್ತಿರಲಿಲ್ಲ, ಆತನಿಗೆ ಆಗ ದೇಶದ ಬ್ಯಾಂಕಿಂಗ್ ಮತ್ತು ಸರ್ಕಾರಿ ಯಂತ್ರದಿಂದ ವಿಶೇಷ ಗೌರವಾದರ ಗಳು ಪ್ರಾಪ್ತವಾಗುತ್ತಿದ್ದವು. ಇಲ್ಲದಿದ್ದರೆ ಮಹಾರಾಷ್ಟ್ರ ಸರ್ಕಾರ ಮತ್ತು ರಾಯ ಗಢದ ಸ್ಥಳೀಯ ಆಡಳಿತ ಈ ವ್ಯಕ್ತಿಗೆ ಅನಧಿಕೃತವಾಗಿ ಬಂಗಲೆ ನಿರ್ಮಿಸಲು ಅವಕಾಶವೇಕೆ ಕೊಡುತ್ತಿತ್ತು?
ಇಲ್ಲಿ ಇನ್ನೊಂದು ಪ್ರಶ್ನೆಯೂ ಇದೆ. ಈ ಕಾರ್ಯಾಚರಣೆಗಳಿಂದ ನೀರವ್ ಮೋದಿ ಮೇಲೆ ಏನು ನೇರ ಪರಿಣಾಮ ಉಂಟಾಗುತ್ತದೆ ಎನ್ನುವುದು. ಈ ಮಧ್ಯೆ ಈ ವ್ಯಕ್ತಿ ಬ್ರಿಟನ್‌ನಲ್ಲಿ ತನ್ನ ವ್ಯವಹಾರ ಆರಂಭಿಸಿ ದ್ದಾನೆ, ಅಲ್ಲದೇ ಅಲ್ಲಿನ ಸರ್ಕಾರಿ ನ್ಯಾಷನಲ್ ಇನ್ಶೂರೆನ್ಸ್ ನಂಬರ್ ಪಡೆಯಲೂ ಸಫಲನಾಗಿದ್ದಾನೆ. ಆದಾಗ್ಯೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಂಥ ಬೃಹತ್ ತನಿಖಾ ಸಂಸ್ಥೆಗಳು ಆತನ ಹಿಂದೆ ಬಿದ್ದಿವೆ, ಆತನ ಬ್ಯಾಂಕ್ ಖಾತೆಯನ್ನು ಜಪ್ತಿ ಮಾಡಿವೆ, ಭಾರತದಲ್ಲಿನ ಆತನ ಸಂಪತ್ತನ್ನೆಲ್ಲ ವಶ ಮಾಡಿವೆಯಾದರೂ ಸತ್ಯವೇನೆಂದರೆ, ಆತ ಲಂಡನ್‌ನಲ್ಲಿ ಪೂರ್ಣರೂಪದಲ್ಲಿ ಸುರಕ್ಷಿತವಾಗಿದ್ದಾನೆ ಮತ್ತು ಸ್ವತ್ಛಂದವಾಗಿ ಅಡ್ಡಾಡುತ್ತಾ, ಭಾರತ ಸರ್ಕಾರ, ಭಾರತೀಯ ಕಾನೂನು, ಭಾರತೀಯರ ಭಾವನೆಗಳನ್ನು ಪರೋಕ್ಷವಾಗಿ ಅಣಕಿಸುತ್ತಿದ್ದಾನೆ.
ಇತ್ತೀಚೆಗಷ್ಟೇ ನೀರವ್ ಮೋದಿಯ ಒಂದು ವಿಡಿಯೋ ವೈರಲ್ ಆಗಿದೆ. ಆ ವೀಡಿಯೋದಲ್ಲಿ ಪತ್ರಕರ್ತ ಕೇಳುವ ಪ್ರತಿಯೊಂದು ಪ್ರಶ್ನೆಗೂ ನೀರವ್ ನಗುತ್ತಾ “ನೋ ಕಮೆಂಟ್’ ಎನ್ನುತ್ತಾನೆ. ಅತ್ಯಂತ ನಿಶ್ಚಿಂತ ಭಾವ ಆತನ ಮುಖದಲ್ಲಿ! ಭಾರತದ ಕಾನೂನಿನ ಬಗ್ಗೆ ನೀರವ್ ಮೋದಿಗೆ ಒಂದಿಷ್ಟೂ ಚಿಂತೆಯಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. ಇದಷ್ಟೇ ಅಲ್ಲ, ಆತನ ವಿರುದ್ಧ ಇಂಟರ್‌ಪೋಲ್ ಕೂಡ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದರೂ, ಆತ ಆರಾಮವಾಗಿ ಹೇಗೆ ಅಡ್ಡಾಡಿಕೊಂಡಿದ್ದಾನೆ ಎನ್ನುವ ಸ್ವಾಭಾವಿಕವಾಗಿ ಭಾರತೀಯರಲ್ಲಿ ಏಳುತ್ತದೆ.
ನೀರವ್ ಮೋದಿ ಮತ್ತು ಆತನ ಮಾವ ಮೆಹುಲ್ ಚೋಕ್ಸಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿದ್ದಾರೆ. ಮೆಹುಲ್ ಚೋಕ್ಸಿ ಆ್ಯಂಟಿಗುವಾದ ಪೌರತ್ವ ಪಡೆದುಕೊಂಡು ಆರಾಮಾಗಿದ್ದಾನೆ. ನೀರವ್‌ನನ್ನು ಭಾರತಕ್ಕೆ ಕರೆತರಲು ಸಕಲ ಪ್ರಯತ್ನ ನಡೆಸಿದ್ದೇವೆ ಎಂದು ಸರ್ಕಾರಿ ಸಂಸ್ಥೆಗಳು ಹೇಳುತ್ತವೆ. ಆದರೆ ಇತ್ತೀಚಿನ ವರದಿಯೊಂದು ಈ ದಾವೆಯನ್ನೇ ಪ್ರಶ್ನಿಸು ವಂತಿದೆ. ನೀರವ್ ಮೋದಿಯನ್ನು ಬಂಧಿಸುವ ನಿಟ್ಟಿನಲ್ಲಿ ಸಂಬಂಧಿಸಿದ ದಸ್ತಾವೇಜುಗಳನ್ನು ಕೇಳಿದರೂ, ಅನೇಕ ಬಾರಿ ಮಾಹಿತಿಯನ್ನು ಕಳಿಸಿದರೂ ಭಾರತ ಉತ್ತರಿಸುತ್ತಿಲ್ಲ ಎಂದು ಬ್ರಿಟನ್ ಅಧಿಕಾರ ವರ್ಗ ಹೇಳುತ್ತಿರುವುದಾಗಿ ಕೆಲ ಮಾಧ್ಯಮ ವರದಿಗಳು ಹೇಳುತ್ತಿವೆ. ನಿಜಕ್ಕೂ ಏನು ನಡೆಯುತ್ತಿದೆ ಎನ್ನುವುದೇ ಅರ್ಥವಾಗದಂಥ ಸ್ಥಿತಿ ನಿರ್ಮಾಣವಾಗಿದೆ.
ಒಂದು ವೇಳೆ ಭಾರತ ತ್ವರಿತವಾಗಿ ಸ್ಪಂದಿಸಿ, ಖುದ್ದು ಬ್ರಿಟನ್ ಕೂಡ ಆತನ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಿದರೂ, ಅದು ಇತ್ಯರ್ಥವಾಗುವುದಕ್ಕೆ ಇನ್ನೆಷ್ಟು ದಿನ ಹಿಡಿಯಲಿದೆಯೋ? ಮದ್ಯದ ದೊರೆ ವಿಜಯ್ ಮಲ್ಯ ಕಥೆಯಲ್ಲಿ ಏನಾಯಿತು ಎನ್ನುವುದನ್ನು ಭಾರತೀಯರು ನೋಡಿದ್ದಾರೆ. ಇಂಥ ವಂಚಕ ಉದ್ಯಮಿಗಳು ಕಾನೂನು ಪ್ರಕ್ರಿಯೆಗಳಲ್ಲಿನ ಜಟಿಲತೆಗಳು, ವಿಳಂಬಗಳು ಮತ್ತು ತಮ್ಮ ಹಣದ ಪ್ರಭಾವವನ್ನು ಬಳಸಿಕೊಂಡು ಸುರಕ್ಷಿತವಾಗಿ ಇರುತ್ತಾರೆ. ನೀರವ್ ಮೋದಿ, ಮಲ್ಯನನ್ನು ಭಾರತಕ್ಕೆ ಹಿಡಿದು ತರಲು ಇನ್ನೆಷ್ಟು ಸಮಯ ಹಿಡಿಯಲಿದೆಯೋ? ಅಷ್ಟರಲ್ಲೇ ಅವರ ವಿರುದ್ಧದ ಆಕ್ರೋಶದ ತೀವ್ರತೆಯೂ ದೇಶದಲ್ಲಿ ತಣ್ಣಗಾಗಿರುತ್ತದೆ.
ಭಾರತ ಈಗಲಾದರೂ ಅಂತಾರಾಷ್ಟ್ರೀಯವಾಗಿ ತನ್ನ ಪ್ರಭಾವವನ್ನು ಪ್ರಬಲವಾಗಿ ಬಳಸಿಕೊಳ್ಳಲೇಬೇಕಿದೆ. ಇಡೀ ದೇಶಕ್ಕೆ ವಂಚಿಸಿದವರು ಇನ್ನೊಂದು ದೇಶದಲ್ಲಿ, ಅದು ಬ್ರಿಟನ್‌ನಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹಾಯಾಗಿ ಇರುತ್ತಾರೆ ಎಂದರೆ, ಇದು ಆ ವ್ಯಕ್ತಿಗಳಷ್ಟೇ ಅಲ್ಲದೇ, ಆ ದೇಶವೂ ಭಾರತಕ್ಕೆ ಮಾಡುವ ಅವಮಾನವಾಗುತ್ತದೆ.