ನಟ ನಿರಂಜನ್ ಒಡೆಯರ್ “ಜಲ್ಸಾ’ ಬಳಿಕ ನಟಿಸಿರುವ “ಓಳ್ ಮುನ್ಸಾಮಿ’ ಚಿತ್ರ ಇದೀಗ ಬಿಡುಗಡೆಗೆ ರೆಡಿಯಾಗಿದೆ. ಆ ಚಿತ್ರ ತೆರೆಗೆ ಬರುವ ಮುನ್ನವೇ ಅವರು ಸದ್ದಿಲ್ಲದೆಯೇ ಇನ್ನೊಂದು ಚಿತ್ರದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಆ ಚಿತ್ರದ ಚಿತ್ರೀಕರಣವೂ ಮುಗಿದಿದೆ. ಆ ಚಿತ್ರದ ಹೆಸರು “ರಣಭೂಮಿ’. ಈ ಚಿತ್ರವನ್ನು ದೀಪಕ್ ಎಂಬುವವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಮೂವರು ಗೆಳೆಯರ ಜೊತೆ ಸೇರಿ, ದೀಪಕ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ನಿರಂಜನ್ ಒಡೆಯರ್ ಅವರಿಗೆ ನಾಯಕಿಯರಾಗಿ ಕಾರುಣ್ಯ ರಾಮ್ ಹಾಗೂ ಶೀತಲ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಇಬ್ಬರು ನಾಯಕಿಯರು ಅಂದಾಕ್ಷಣ, ಇದೊಂದು ತ್ರಿಕೋನ ಪ್ರೇಮಕಥೆ ಇರಬಹುದು ಎಂಬ ಲೆಕ್ಕಾಚಾರ ಹಾಕಿದರೆ, ಆ ಊಹೆ ತಪ್ಪು. ಯಾಕೆಂದರೆ, ಇದು ಸಸ್ಪೆನ್ಸ್ ಮತ್ತು ಹಾರರ್ ಚಿತ್ರ. ಇಬ್ಬರು ನಾಯಕಿಯರೂ ನಾಯಕನನ್ನು ಪ್ರೀತಿಸೋದು ನಿಜ. ಆದರೆ, ನಾಯಕ ಒಬ್ಬರನ್ನು ಮಾತ್ರ ಪ್ರೀತಿಸುತ್ತಾನೆ. ಆ ಇಬ್ಬರ ಪೈಕಿ ಯಾರನ್ನು ಇಷ್ಟಪಡ್ತಾನೆ ಎಂಬ ಉತ್ತರಕ್ಕೆ ಚಿತ್ರ ಬರುವವರೆಗೆ ಕಾಯಬೇಕು.
ಇನ್ನು, ಶೀರ್ಷಿಕೆಗೂ ಚಿತ್ರದ ಕಥೆಗೂ ಸಂಬಂಧವಿದೆಯಾ ಎಂಬ ಸಣ್ಣದ್ದೊಂದು ಪ್ರಶ್ನೆ ಎದುರಾಗಬಹುದು. ಆದರೆ, ಚಿತ್ರ ನೋಡಿದಾಗ ಮಾತ್ರ, “ರಣಭೂಮಿ’ ಶೀರ್ಷಿಕೆ ಯಾಕೆ ಇಡಲಾಗಿದೆ ಎಂಬುದು ಗೊತ್ತಾಗಲಿದೆ ಎಂಬುದು ಚಿತ್ರತಂಡದ ಮಾತು. ಈ ಚಿತ್ರದಲ್ಲಿ ನಿರಂಜನ್ ಒಡೆಯರ್ ಅವರು ಒಬ್ಬ ಟೆಕ್ಕಿಯಾಗಿ ಕಾಣಿಸಿಕೊಂಡಿದ್ದಾರೆ. ಹಾರರ್ ಚಿತ್ರ ಅಂದಮೇಲೆ ಇಲ್ಲಿ ಬೆಚ್ಚಿಬೀಳಿಸುವ ಅಂಶಗಳು ಇರದಿದ್ದರೆ ಹೇಗೆ? ಅದೇ ಚಿತ್ರದ ಹೈಲೆಟ್.
ಇಲ್ಲಿ ದುಷ್ಟಶಕ್ತಿಯೊಂದು ತೆರೆಯ ಮೇಲೆ ಕಾಣುವ ಕೆಲವರನ್ನು ಸಿಕ್ಕಾಪಟ್ಟೆ ಕಾಡುತ್ತೆ, ಹೆದರಿಸುತ್ತೆ, ಯಾಮಾರಿಸುತ್ತೆ. ಆದರೆ, ಆ ದುಷ್ಟಶಕ್ತಿಯಿಂದ ಹೇಗೆ ಆ ಕೆಲ ಪಾತ್ರಗಳು ಹೊರಬರುತ್ತವೆ ಎಂಬುದು ಚಿತ್ರದ ಕಥಾಹಂದರ. ಸಾಮಾನ್ಯವಾಗಿ ಸಸ್ಪೆನ್ಸ್, ಹಾರರ್ ಚಿತ್ರಗಳಿಗೆ ಸಂಗೀತ ಮತ್ತು ಎಫೆಕ್ಟ್ಗೆ ಪ್ರಾಮುಖ್ಯತೆ ಇದ್ದೇ ಇರುತ್ತೆ. ಇಲ್ಲೂ ಕೂಡ ಅದು ಹೈಲೆಟ್. ಹೊಸ ಪ್ರತಿಭೆಯ ಸಂಗೀತವಿದೆ. ನಾಗಾರ್ಜುನ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಬಹುತೇಕ ಬೆಂಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು,
ಸದ್ಯಕ್ಕೆ ಚಿತ್ರದ ಬಿಡುಗಡೆ ತಯಾರಿ ಕೆಲಸ ನಡೆಯುತ್ತಿದೆ. ಚಿತ್ರದಲ್ಲಿ ಒಂದು ಹಾಡಿದೆ. ಉಳಿದಂತೆ “ಕೆಜಿಎಫ್’ ಸೇರಿದಂತೆ ಹಲವು ಚಿತ್ರಗಳಿಗೆ ಸಾಹಸ ನಿರ್ದೇಶಿಸಿರುವ ವಿಕ್ರಮ್, ಈ ಚಿತ್ರದಲ್ಲೊಂದು ಭರ್ಜರಿ ಫೈಟ್ ಮಾಡಿದ್ದಾರೆ. ನಾಯಕ ನಿರಂಜನ್ ಒಡೆಯರ್‌ಗೆ ಇದು ಮೂರನೇ ಸಿನಿಮಾ. ಸದ್ಯಕ್ಕೆ ಅವರು ಹೊಸ ನಿರ್ದೇಸಕ ಕಿರಣ್ ಎಂಬುವವರ ಇನ್ನೊಂದು ಸಸ್ಪೆನ್ಸ್, ಥ್ರಿಲ್ಲರ್ ಕಥೆ ಅಂತಿಮಗೊಳಿಸಿದ್ದು, ಜುಲೈನಲ್ಲಿ ಹೊಸ ಚಿತ್ರಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ.