Advertisement
ನಗರದ ಚರಂತಿಮಠ ಸಮುದಾಯ ಭವನದಲ್ಲಿ ಮಧ್ಯಾಹ್ನ 12ಕ್ಕೆ ಸಭೆ ಆರಂಭಗೊಳ್ಳುತ್ತಿದ್ದಂತೆ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಕುರಿತು ಪ್ರಸ್ತಾಪಿಸಿದರು. ಸೋತು ಆಗಿದೆ. ಮುಂದೇನು ಮಾಡಬೇಕು ಎಂಬುದರ ಚರ್ಚೆ ಮಾಡೋಣ ಎಂದು ಹೇಳಿ, ಮಾತು ಮುಗಿಸಿದರು.
ಈ ವೇಳೆ ಸಭಿಕರ ಮಧ್ಯೆ ಕುಳಿತಿದ್ದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ರೇವಣಕರ, ಕಳೆದ ಚುನಾವಣೆಯಲ್ಲಿ ನಮ್ಮ ವಿರುದ್ಧ ಸೋಲಿಗೆ ಕಾರಣರಾದ ಹಾಗೂ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರು, ಈ ಸಭೆಯಲ್ಲಿ ಕುಳಿತಿದ್ದಾರೆ. ವೈದ್ಯಕೀಯ ಪ್ರಕೋಷ್ಟದ ಜಿಲ್ಲಾ ಸಂಚಾಲಕರಾಗಿ, ಪಕ್ಷ ವಿರೋಧಿ ಕೆಲಸ ಮಾಡಿವರನ್ನು ಈ ಸಭೆಯಿಂದ ಹೊರ ಹಾಕಬೇಕು. ಇಲ್ಲದಿದ್ದರೆ ನಾವೇ ಹೊರ ಹೋಗುತ್ತೇವೆ ಎಂದರು. ಆಗ ಉಂಟಾದ ಗದ್ದಲ ವಿಕೋಪಕ್ಕೆ ತೆರಳಿತು. ಮೈಕ್‌ನತ್ತ ಬಂದ ಮಾಜಿ ಶಾಸಕ ವೀರಣ್ಣ ಚರಂತಿಮಠ, ನಾವು ಅಽಕಾರದಲ್ಲಿದ್ದಾಗ ತಲಾ 24 ಲಕ್ಷ ವೆಚ್ಚದಲ್ಲಿ ಶಿವಾಜಿ ಮತ್ತು ಬಸವೇಶ್ವರ ಮೂರ್ತಿ ಸ್ಥಾಪಿಸಲು ಅನುಮತಿ ನೀಡಿದ್ದೇವು. ನಿನ್ನೆ ಆ ಮೂರ್ತಿಗಳು ನಗರಕ್ಕೆ ಬಂದಿದ್ದು, ಪ್ರತಿಷ್ಠಾಪನೆಗೆ ವಿರೋಧ ಮಾಡಿದವರು, ಇಂದು ಸಭೆಗೆ ಬಂದಿದ್ದಾರೆ. ಮೊದಲು ಅವರನ್ನು ಹೊರ ಹಾಕಬೇಕು. ಅದಕ್ಕಾಗಿಯೇ ನಮ್ಮ ಕಾರ್ಯಕರ್ತರು ಸಿಟ್ಟಿಗೆ ಬಂದಿದ್ದಾರೆ ಎಂದರು.
Related Articles
Advertisement
ಅಷ್ಟೊತ್ತಿಗೆ ವೇದಿಕೆಗೆ ಬಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಯತ್ನಾಳ, ಮಾಜಿ ಸಚಿವರಾದ ನಿರಾಣಿ, ಕಾರಜೋಳರು, ಈ ಗಲಾಟೆ ಕಂಡು ಕೊಂಚ ಗಾಬರಿಯೇ ಆದರು. ಬಳಿಕ ಘಟನೆಯ ಕುರಿತು ಮಾಹಿತಿ ಪಡೆದರು.
ಗಲಾಟೆ ತೀವ್ರಗೊಂಡಾಗ ಜಿಲ್ಲಾಧ್ಯಕ್ಷ ಶಾಂತಗೌಡ, ಮಾಜಿ ಸಚಿವ ಗೋವಿಂದ ಕಾರಜೋಳರು, ಸಮಾಧಾನಪಡಿಸುವ ಪ್ರಯತ್ನ ಮಾಡಿದರು. ಆದರೆ, ಕೇಳುವ ಸಂಯಮದಲ್ಲಿ ಕಾರ್ಯಕರ್ತರು ಇರಲಿಲ್ಲ.
ಸಭೆಯಿಂದ ಹೊರ ಹಾಕಿದರುಈ ವೇಳೆ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಟದ ಸಂಚಾಲಕ ಡಾ|ಶೇಖರ ಮಾನೆ ಅವರನ್ನು ಸಭೆಯಿಂದ ಹೊರ ಹಾಕುವಂತೆ ಸ್ವತಃ ಮಾಜಿ ಶಾಸಕ ಚರಂತಿಮಠ ಅವರೇ ಮೈಕ್‌ನಲ್ಲಿ ಸೂಚನೆ ಕೊಟ್ಟರು. ಇದರಿಂದ ಅಸಮಾಧಾನಗೊಂಡ ಸಭೆಯ ಆಪೇಕ್ಷಿತ ಡಾ|ಮಾನೆ, ವೇದಿಕೆಯ ಮೇಲಿದ್ದ ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವ ಕಾರಜೋಳರತ್ತ ಬಂದು, ಸ್ಪಷ್ಟನೆ ನೀಡಲು ಹೊರಟರು. ಆಗ ವೇದಿಕೆ ಮುಂಭಾಗ ಗದ್ದಲ ತೀವ್ರಗೊಂಡಿತು. ಪೊಲೀಸರು, ಕೆಲ ಕಾರ್ಯಕರ್ತರು ಮಧ್ಯ ಪ್ರವೇಶಿಸಿ, ಡಾ|ಮಾನೆ ಅವರನ್ನು ಸಭೆಯಿಂದ ಹೊರ ಕರೆದುಕೊಂಡು ಹೋಗದರು. ನಿರಾಣಿ ಭಾಷಣಕ್ಕೆ ಅಡ್ಡಿ ; ಮತ್ತೆ ಆಕ್ರೋಶ
ಈ ಗಲಾಟೆ ಮುಗಿದು ಹಲವು ನಾಯಕರು ಭಾಷಣ ಮಾಡಿದರು. ಬಳಿಕ ಮಾಜಿ ಸಚಿವ ಮುರುಗೇಶ ನಿರಾಣಿ, ಭಾಷಣಕ್ಕೆ ನಿಂತಾಗ, ಬಾಗಲಕೋಟೆಯ ಕಾರ್ಯಕರ್ತರೊಬ್ಬರು, ನಮಗೂ ಮಾತಾಡಲು ಅವಕಾಶ ಕೊಡಿ ಎಂದು ವೇದಿಕೆಯತ್ತ ಬಂದರು. ಈ ವೇಳೆಯೂ ಬಾಗಲಕೋಟೆ ಕ್ಷೇತ್ರದ ಹಾಗೂ ನಿರಾಣಿ ಬೆಂಬಲಿಗರ ಮಧ್ಯೆ ಮತ್ತೆ ವಾಗ್ವಾದ ನಡೆಯಿತು. ಯತ್ನಾಳ-ನಿರಾಣಿ ವಾಕ್ಸಮರ
ಮಾಜಿ ಸಚಿವ ಮುರುಗೇಶ ನಿರಾಣಿ, ತಮ್ಮ ಭಾಷಣದುದ್ದಕ್ಕೂ ವಿಜಯಪುರ ನಗರ ಶಾಸಕ ಯತ್ನಾಳ ಅವರ ಹೆಸರು ಹೇಳದೇ ಆಕ್ರೋಶ ವ್ಯಕ್ತಪಡಿಸಿದರು. ಯಾರನ್ನೋ ಟೀಕಿಸಿದರೆ, ಹೀಯಾಳಿಸಿದರೆ ನಾವು ದೊಡ್ಡವರಾಗುತ್ತೇವೆ ಎಂಬುದು ಬಿಡಬೇಕು. ವಿಜಯಪುರದ ಸಚಿವರೊಬ್ಬರ ಚೇಲಾ ಆಗಿ ಕೆಲಸ ಮಾಡುವ ವ್ಯಕ್ತಿ, ಎಷ್ಟು ಬಾರಿ ಗೆದ್ದಿದ್ದಾರೆ. ಎಷ್ಟು ಬಾರಿ ಸೋತಿದ್ದಾರೆ ಎಂಬುದೂ ಗೊತ್ತಿದೆ. ನಾನು ಮೌನವಾಗಿದ್ದೇನೆ ಎಂದರೆ ಅಸಮರ್ಥನಲ್ಲ. ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡಂತೆಯೂ ಅಲ್ಲ. ನಾನೂ ವಿಜಯಪುರ-ಬಾಗಲಕೋಟೆ ಜಿಲ್ಲೆಯ ನೀರು-ಗಾಳಿಯಲ್ಲೇ ಬೆಳೆದಿದ್ದೇನೆ. 35 ವರ್ಷದಿಂದ ಬಿಜೆಪಿಯಲ್ಲಿದ್ದೇನೆ. ಇಲ್ಲಿಯೇ ಇರುತ್ತೇನೆ. ಯಾರದೋ ರೀತಿ ಟೋಪಿ ಹಾಕಿಕೊಂಡು, ಡ್ಯಾನ್ಸ್ ಮಾಡುತ್ತ, ಬೇರೊಬ್ಬರ ಕಾಲೆಳೆಯುವ ಕೆಲಸ ಮಾಡಿಲ್ಲ. ಕಳೆದ ಚುನಾವಣೆಯ ಕುರಿತು ಕೆದಕಿ ತಗೆದರೆ ಎಲ್ಲರೂ ಸೆಗಣಿ ತಿನ್ನುವವರೇ ಇದ್ದಾರೆ. ಅದೆಲ್ಲವನ್ನು ಬಿಟ್ಟು, ಎಲ್ಲರೂ ತಪ್ಪು ತಿದ್ದಿಕೊಂಡು, ಮುಂದೆ ಪಕ್ಷ ಸಂಘಟಿಸಬೇಕು. ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಿದರೆ ನಾನು ಸುಮ್ಮನಿರಲ್ಲ ಎಂದು ಗುಡುಗಿದರು. ನಾನು ಏಜಂಟ್‌ಗಿರಿ ಮಾಡಿಲ್ಲ
ಬಳಿಕ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ್ , ನಾನು ಯಾವ ಸಚಿವರ ಚೇಲಾಗಿರಿಯೂ ಮಾಡಿಲ್ಲ. ಹಾಗೆ ಮಾಡಿದರೆ ವಿಜಯಪುರದಲ್ಲಿ ನನ್ನನ್ನು ಜನ ಸೋಲಿಸುತ್ತಿದ್ದರು. ನನ್ನನ್ನು ಸೋಲಿಸಲು ಯಾರು ಏನು ಮಾಡಿದರು ಎಂಬುದು ಕಾರ್ಯಕರ್ತರಿಗೆ ಗೊತ್ತಿದೆ. ಕಾರ್ಯಕರ್ತರ ಭಾವನೆ ಕೇಳುವ ಕೆಸಲ ಆಗಬೇಕು. ಕೇವಲ ನಾಯಕರೇ ಮಾತನಾಡಿದರೆ, ಕಾರ್ಯಕರ್ತರ ಭಾವನೆಗೆ ಯಾರು ಬೆಲೆ ಕೊಡಬೇಕು. ಇಷ್ಟು ದಿನ ಇದ್ದ ಬಿಜೆಪಿಯೇ ಬೇರೆ. ಇನ್ನು ಮುಂದಿನ ಬಿಜೆಪಿಯೇ ಬೇರೆ. ಚುನಾವಣೆಯ ವೇಳೆ ಯಾರು ಏನು ಮಾಡಿದ್ದಾರೆ ಎಂಬುದು ಕೇಂದ್ರದ ನಾಯಕರಿಗೂ ಗೊತ್ತಿದೆ. ನಾನು ರಾಜ್ಯದಲ್ಲಿ 4ನೇ ಹಿರಿಯ ನಾಯಕ. ನನ್ನ ತಂಟೆಗೆ ಬಂದರೆ ನಾನೂ ಸುಮ್ಮನಿರಲ್ಲ ಎಂದು ಪ್ರತ್ಯುತ್ತರ ನೀಡಿದರು. ಒಟ್ಟಾರೆ, ಸೋಮವಾರ ನಡೆದ ಬಿಜೆಪಿ ಸಭೆ, ರಣಾಂಗಣ ಹಾಗೂ ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಯಿತು. ಆತ್ಮಾವಲೋಕನ ಬದಲು, ಪ್ರತಿಷ್ಠೆ, ನೋಡ್ಕೋತಿನಿ ಎಂಬ ಮಾತಿಗೆ ತಿರುಗಿತು. ಇದೆಲ್ಲನ್ನು ನೋಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜಕೀಯದಲ್ಲಿ ಇದು ಸಾಮಾನ್ಯ. ಫಲಿತಾಂಶ ಬಳಿಕ, ಕಾರ್ಯಕರ್ತರ ಅಂತರಾಳದ ಮಾತು ಹೊರ ಬಂದಿವೆ. ಈ ರೀತಿಯ ವಾತಾವರಣ ಕಾಂಗ್ರೆಸ್‌ನಲ್ಲಿ ಇಲ್ಲ. ಕಾರ್ಯಕರ್ತರೊಂದಿಗೆ ನಾವಿದ್ದೇವೆ ಎಂದು ತಿಳಿಸಿದರು.