Advertisement

ಹೆದ್ದಾರಿ ಅಪಘಾತದಲ್ಲಿ ‘ನೀರಮ್ಮ’ನ ಸಾವು ! 

11:25 AM Jun 12, 2017 | Harsha Rao |

“ಅಮ್ಮ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಬಡವರಾದ ನಮಗೆ ಚಿಕಿತ್ಸೆಗೆ ಹಣವಿಲ್ಲ. ಆಸ್ಪತ್ರೆಯ ಖರ್ಚು ಭರಿಸಲು ಹಣಬೇಕು’ ಹೀಗೆ ಗೋಳಿಡುತ್ತಾ…ಜನ ನಮ್ಮೆದುರು ಕಣ್ಣೀರಿಡುತ್ತ ನಿಂತಾಗ ಸಾಧ್ಯವಾದ ನೆರವು ನೀಡುತ್ತೇವೆ. ನಮ್ಮ ಕೆರೆದೇವಿ ನಾಡಿನ ಎಲ್ಲರಿಗೂ ಅಮ್ಮ, ಇವಳಿಗೆ ತೊಂದರೆಯಾದರೆ ಸಮಾಜ ನೆರವಾಗಿ ಬದುಕಿಸಲು ಸಾಧ್ಯವಿಲ್ಲವೇ?

Advertisement

ಮೈಸೂರು ಸೀಮೆಯಲ್ಲಿ ಚಕ್ಕಡಿ ಗಾಡಿಗಳ ಓಡಾಟ ಕ್ರಿ.ಶ 1801ಕ್ಕಿಂತ ಪೂರ್ವದಲ್ಲಿಯೇ ಇತ್ತೆಂದು ಡಾ.ಪ್ರಾನ್ಸಿಸ್‌ ಬುಕಾನನ್‌ ಹೇಳುತ್ತಾರೆ. ಮಲೆನಾಡು- ಕರಾವಳಿ ಘಟ್ಟದ ನಡುವೆ ಹಳ್ಳ ಕೊಳ್ಳಗಳು ತಗ್ಗು ದಿನ್ನೆಗಳಿರುವ ಕಾರಣಕ್ಕೆ ಗಾಡಿಗಳ ಸಂಚಾರ ಕ್ರಿ.ಶ 1826ರ ನಂತರದಲ್ಲಿ ಆರಂಭವಾದವೆಂದು ದಾಖಲೆಗಳು ಹೇಳುತ್ತವೆ. ವಿಶೇಷವಾಗಿ ಘಟ್ಟ ಕರಾವಳಿಯ ನಡುವೆ ಗಾಡಿಗಳ ಸಂಚಾರ ವಿಸ್ತರಿಸಿದ್ದು 1856-74ರಲ್ಲಿ ಇರಬಹುದು. 

ಎತ್ತಿನ ಗಾಡಿ ಕತೆ ಎತ್ತಿಕೊಂಡಿದ್ದು ಸಾರಿಗೆ ಕತೆ ಹೇಳುವುದಕ್ಕಲ್ಲ. ಹೇರೆತ್ತಿನ ಮಾರ್ಗ, ಕುದುರೆ ಮಾರ್ಗದ ಬಳಿಕ ಅಂಕುಡೊಂಕಾದ  ಚಕ್ಕಡಿ ಮಾರ್ಗ ಕಾಡು ಕಡಿದು ರಚನೆಯಾಯ್ತು. ಈಗ ನಮ್ಮ ವಾಹನಗಳಿಗೆ ಅನುಕೂಲವಾಗಲೆಂದು ಹೇಗೆ ರಸ್ತೆಯ ಉದ್ದಕ್ಕೂ ಪೆಟ್ರೋಲ್‌ ಬಂಕುಗಳಿದ್ದಾವೋ ಹಾಗೆಯೇ, ಆ ಕಾಲಕ್ಕೆ  ಗಾಡಿ ಮಾರ್ಗಗಳು ಕೆರೆದಂಡೆಯ ಅಂಚಿನಲ್ಲಿಯೇ ಸಾಗಿವೆ. ಓಡಾಟದಲ್ಲಿ ಸುಸ್ತಾದಾಗ ಎತ್ತು, ಮನುಷ್ಯರಿಗೆ ನೀರು ಕುಡಿಯಲು ಕೆರೆ ನೆರವಾಗಿದೆ. ಅಲ್ಲಿನ ಗುಂಡು ತೋಪು ದಣಿವಾರಿಸಲು ನೆರಳಾಗಿದೆ. ಎತ್ತಿನ ಗಾಡಿ ಬಳಿಕ ಒಡ್ಡರ ಬಂಡಿ (ಕಲ್ಲಿದ್ದಲು ಲಾರಿ) ಓಡಾಟಕ್ಕೂ ಇದೇ ರಸ್ತೆ ಬಳಕೆಯಾಯಿತು. ಒಂದು ಮಾರ್ಗ ಕಂಡ ಬಳಿಕ ಅದನ್ನು ವಿಸ್ತರಿಸುವಲ್ಲಿ ನಾವು ಪಳಗಿದವರು. ಗಾಡಿ ಮಾರ್ಗವನ್ನು ಲಾರಿ, ಬಸ್‌ ಸಂಚಾರದ ಅನುಕೂಲಕ್ಕೆ ಹಿಗ್ಗಿಸುತ್ತ ಒಂದು ಶತಮಾನದಲ್ಲಿ ಸಾಕಷ್ಟು ಪರಿವರ್ತನೆ ಮಾಡಿದ್ದೇವೆ. ರಸ್ತೆಯ ಡೊಂಕು ತಿದ್ದುವ ಅಗಲೀಕರಣಕ್ಕೆ ಕೆರೆಗಳನ್ನು ಕಬಳಿಸಿದ್ದೇವೆ. 

ದಿನಕ್ಕೆ 40ಕಿ.ಲೋ ಮೀಟರ್‌ ಸಂಚರಿಸಿದ ಎತ್ತಿನ ಗಾಡಿ ಕಾಲದಿಂದ ಈಗ ಗಂಟೆಗೆ ನೂರಾರು ಕಿಲೋ ಮೀಟರ್‌ ಕ್ರಮಿಸುವ ವೇಗ ಬಂದಿದೆ. ಅತಿಯಾದ ಅವಸರ ಅಪಾಯಕ್ಕೆ ಕಾರಣವೆಂದು ಗೊತ್ತಿದೆ. ರಸ್ತೆ ಅಪಘಾತದಲ್ಲಿ ಸರಣಿ ಸಾವುಗಳು ನಿತ್ಯ ವರದಿಯಾಗುತ್ತಿವೆ. ಇವುಗಳ ಜೊತೆಗೆ ನಮ್ಮ ಹೆದ್ದಾರಿಯ ಆಸುಪಾಸಿನಲ್ಲಿ ಶತಮಾನದ ಕೆರೆಗಳು  ವೇಗದ ಅನುಕೂಲಕ್ಕೆ ಸತ್ತು ಬಿದ್ದಿವೆ. ಹೊಲ, ಊರು, ಕಾಡನ್ನು ಸೀಳಿದ ರಸ್ತೆಗಳು ಕಣಿವೆಯ ನೀರಿನ ನೈಸರ್ಗಿಕ ದಿಕ್ಕನ್ನು ಬದಲಿಸಿವೆ. ರಸ್ತೆ ಕಾಲುವೆಯ ನೀರನ್ನು  ದೂರ ಕಳಿಸುವ ಅವಸರದಲ್ಲಿ  ಮೋರಿಯ ಜಾಗಗಳು ಬದಲಾಗಿ ಕೆರೆಗೆ ನೀರು ಹರಿಯುವ ಮಾರ್ಗ ತಪ್ಪಿಹೋಗಿದೆ. ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಹಾಸನ ಹೀಗೆ ಯಾವ ಪ್ರದೇಶಕ್ಕೆ ಹೋದರೂ ಕೆರೆಗೆ ನೀರುಣಿಸುವ ಕಾಲುವೆಗಳು ಮುಚ್ಚಿ ಹೋದದ್ದು ಕಾಣಿಸುತ್ತದೆ. ಪರಿಣಾಮ, ಎಷ್ಟು ಮಳೆ ಸುರಿದರೂ ಕೆರೆಗೆ ನೀರು ಬರುತ್ತಿಲ್ಲ. ಸುರಿಯುವ ಮಳೆ ನೀರು ಯಾವುದೋ ದಿಕ್ಕು ಹಿಡಿದು ಹಳ್ಳ, ನದಿಯ ಪಾಲಾಗುತ್ತಿದೆ. ನಮ್ಮ ರಸ್ತೆ ಅಭಿವೃದ್ಧಿ ವಾಹನಕ್ಕೆ ವೇಗ ನೀಡುವುದಷ್ಟನ್ನೇ ಯೋಚಿಸುತ್ತದೆ. ಅದೇ ರಸ್ತೆ ಪಕ್ಕದ ಹೊಲದ ಕೆರೆ, ನೀರಿನ ಹರಿನ ಬಗ್ಗೆ ಸ್ವಲ್ಪವೂ ಗಮನಹರಿಸದ ಪರಿಣಾಮ ದಾರಿ ಗುಂಟ ಕೆರೆಗಳು ಮಹಾ ಅಪಘಾತಕ್ಕೆ ಈಡಾಗಿವೆ. ಆದರೆ ಇದು ಸುದ್ದಿಯಾಗಿಲ್ಲ ಅಷ್ಟೇ !

ನಮ್ಮ ಜಲಮಾತೆಯಾದ “ಕೆರೆ ದೇವಿ’ ನಿರ್ಲಕ್ಷ್ಯದ ಕಾರಣ ಸಂಕಷ್ಟಕ್ಕೆ ಸಿಲುಕಿದ್ದಾಳೆ. ರಸ್ತೆ ಅಪಘಾತದಲ್ಲಿ ಯಾರಿಗಾದರೂ ತುಸು ಗಾಯವಾದರೆ ಚಿಕಿತ್ಸೆಗೆ ಓಡುವ ನಾವು ಇವಳ ನೋವು ಆಲಿಸುತ್ತಿಲ್ಲ. ಚಿತ್ರ ನೋಡಿ, ಕೆರೆಗಳು ಸಾವನ್ನಪ್ಪಿದ ರಸ್ತೆಯಲ್ಲೇ ಮಂತ್ರಿ, ಶಾಸಕ, ಅಧಿಕಾರಿ, ಸಾಹಿತಿ, ಉದ್ಯಮಿ, ನಟ, ಕೃಷಿಕ, ಸ್ವಾಮಿ, ಮೇಷ್ಟ್ರುಗಳು ಸೇರಿದಂತೆ ಯಾರೆಲ್ಲ ಕಣ್ಣು ಮುಚ್ಚಿ ಓಡುತ್ತಿದ್ದಾರೆ. ಸಮಾಜದ ಈ ಗಣ್ಯರಿಗೆಲ್ಲ ರಸ್ತೆಯ ಗುರಿ ತಲುಪುವ ತವಕವಿದೆ. ಆದರೆ ಒಂದು ಕ್ಷಣ ಇವರಲ್ಲಿ ಯಾರಾದರೂ ಕೆರೆ ದಂಡೆಯಲ್ಲಿ ನಿಂತು ಸಾವಿನ ಕಾರಣಗಳ ಪಂಚನಾಮೆ ಶುರುಮಾಡಬೇಕು. ಆಗ  ಎಲ್ಲ ಅಪರಾಧಿಗಳೂ ಸಿಗುತ್ತಾರೆ. ಅಭಿವೃದ್ಧಿ ನೀರಿನ ವಿಚಾರ ಗಮನಿಸಿ, ಬೆಳೆದಿದ್ದರೆ ರಸ್ತೆ ಕಾಲುವೆಯಲ್ಲಿ ಹರಿಯುವ ನೀರು ಆಯಾ ಊರಿನ ಜಲಾಶಯವಾಗಿರುತ್ತಿತ್ತು, ರಸ್ತೆ ನಿರ್ಮಾಣಕ್ಕೆ ಮಣ್ಣು ಅಗೆದ ಜಾಗ ನೀರು ನಿಲ್ಲಲು ನೆರವಾಗುತ್ತಿತ್ತು. ರಸ್ತೆ ಮಾಡುವವರಿಗೂ ಕೆರೆ ಸಂಬಂಧವಿಲ್ಲ, ಕೆರೆ ಮಾಡುವವರಿಗೆ ಕೃಷಿ ಗೊತ್ತಿಲ್ಲ.

Advertisement

ಓಡುವ ನಮಗೆ ಕೆರೆ ಕಾಣಿಸುತ್ತಿಲ್ಲ. ಪರಿಣಾಮ ನಮ್ಮ “ಆಕಾಶಗಂಗೆ’ಯೆಂಬ ಮಳೆ ನೀರು ಕುಡಿದು ಆರೋಗ್ಯದಿಂದ ಇರಬೇಕಾದ ನಮ್ಮ ನೀರಮ್ಮ ಗುಟುಕು ನೀರಿಲ್ಲದೇ ಬರಿದಾಗಿದ್ದಾಳೆ. ಜಲಪಕ್ಷಿ$, ಎತ್ತು, ವನ್ಯಜೀವಿ, ಮನುಷ್ಯರು, ಕೃಷಿ ಬೆಳೆ, ಮೀನು, ಕಪ್ಪೆ, ಮಿಂಚುಳ್ಳಿಗಳ ಜೊತೆ ಸದಾ ಮಾತಾಡುತ್ತ, ನಗುತ್ತಿದ್ದವಳ ಒಡಲಲ್ಲಿ ಜೀವಸಮೂಹದ ಸಾವಿನ ಸೂತಕ ಕಾಣಿಸುತ್ತಿದೆ. ತುರ್ತುನಿಗಾ ಘಟಕದಲ್ಲಿ ನರ್ಸಮ್ಮ ಸೂಜಿ ಚುಚ್ಚುವಂತೆ ಸಾವಿರಾರು ಅಡಿ ಆಳದ ಕೊಳವೆ ಬಾವಿ ಕೊರೆದು ನೀರೆತ್ತುವ ಹುಚ್ಚು ಕಾಣಿಸುತ್ತಿದೆ. 

ಒಂದು ಕೆರೆಯ ಆಯುಷ್ಯ ಲೋಕೋಪಯೋಗಿ ಇಲಾಖೆಯ ಪ್ರಕಾರ ಹತ್ತು ವರ್ಷಗಳಂತೆ.  ಆದರೆ ನಮ್ಮ ಹೆದ್ದಾರಿಯ ಕೆರೆಯಮ್ಮಂದಿರ ವಯಸ್ಸು ಕೇಳಿದರೆ ಹೌಹಾರಬೇಕು. 1,500-1,600 ವರ್ಷಗಳ ಹಿಂದೆ ಜನಿಸಿದ ಕೆರೆಗಳು ಕೆಲವಿದೆ. ನಿಸರ್ಗದ ನೀರುಣಿಸಿ ಕೆರೆಗಳ ಆರೋಗ್ಯ ಕಾಪಾಡುವ ನಾವು ಒಡಲಿಗೆ ಹೂಳು ಕಳಿಸಿದ್ದೇವೆ. ಕೊಳಚೆ ಚೆಲ್ಲಿದ್ದೇವೆ. ರಾಸಾಯನಿಕ ಪ್ರವಾಹ ಹರಿಸಿ ಬೆಂಕಿ ಬೀಳುವಂತೆ ಹಾರೈಸಿದ್ದೇವೆ. ಪಂಚನಾಮೆಯ ವರದಿ ಹಿಡಿದು ಪ್ರಕರಣದ ವಿಚಾರಣೆ ನಡೆಸಿದರೆ ರಸ್ತೆಯಲ್ಲಿ ಓಡಾಡುವ ನಾವುಗಳೆಲ್ಲ ತಪ್ಪಿತಸ್ಥರಾಗಿದ್ದೇವೆ. ಒಂದು ಕೆರೆ ಸಾವನ್ನಪ್ಪಿದರೆ ಆ ಜಾಗದಲ್ಲಿ ಏನೆಲ್ಲ ಮಾಡಬಹುದೆಂದು ಗೊತ್ತಿರುವ ಕಳ್ಳರು ನಾಡಿಗೆ ಚಿರಪರಿಚಿತರು. ಆದರೆ ಕೆರೆ ಬದುಕಿಸಲು ಹೆಜ್ಜೆ ಇಡುವವರು ಕಡಿಮೆ. ಈಗ ರಸ್ತೆ ಪ್ರಯಾಣದಲ್ಲಿ ಎಲ್ಲ ವಿಚಾರ ಬದಿಗಿಟ್ಟು ಒಂದೊಂದಾಗಿ ಕೆರೆ ಉಳಿಸಲು ಏನು ಮಾಡಬಹುದೆಂದು ಯೋಚಿಸಬೇಕು. ಕೆರೆಯ ಹೂಳೆತ್ತಲು ಹಣ ಕೂಡಿಸುವ ದಾರಿ ಹುಡುಕಬೇಕು. 

ಉತ್ತರ ಕನ್ನಡದ ಶಿರಸಿ-ಹುಬ್ಬಳ್ಳಿ ರಸ್ತೆಯಲ್ಲಿ ಎಕ್ಕಂಬಿ ಊರಿದೆ. ಅಲ್ಲಿನ ರಸ್ತೆಯ ಪಕ್ಕದಲ್ಲಿ ವಿಶಾಲ ಕೆರೆ ಇದೆ. ಖುಷಿ ಖುಷಿಯಲ್ಲಿ ಪಯಣಿಸುವ ಯಾರಾದರೂ ಕೆರೆ ನೋಡಿದರೆ ಸಂಕಟವಾಗುತ್ತದೆ. ಕಾರಣ ಅಪರೂಪದ ಜಲಪಾತ್ರೆಯಲ್ಲಿ ಹೂಳು ತುಂಬಿದೆ. ಇದರ ಹೂಳೆತ್ತಲು ಸ್ಥಳೀಯರು ಪ್ರಯತ್ನಿಸಿದ್ದಾರೆ.  ಆದರೆ ಹತ್ತಾರು ಲಕ್ಷ ಕೂಡಿಸುವುದು ಕಷ್ಟವಾಗಿದೆ.

ರಸ್ತೆ ಪಕ್ಕದ ಕೆರೆಗಳಲ್ಲಿ ನೀರು ತುಂಬಿದ್ದರೆ ಎಲ್ಲರಿಗೂ ಖುಷಿ, ಒಮ್ಮೆ  ಹೂಳು ತುಂಬಿ ಹಾಳಾದರೆ? ಇಡೀ ಪರಿಸರ ಕೆಟ್ಟದಾಗುತ್ತದೆ; ಮನಸ್ಸು ಮಲೀನವಾಗುತ್ತದೆ. ಸರಕಾರದ ಹೊರತಾಗಿ ನಾವುಗಳೇ ಈ ರಸ್ತೆ ಪಕ್ಕದ ಕೆರೆಗಳಿಗೆ ಮರುಜೀವ ನೀಡುವ ಪ್ರಯತ್ನ ಮಾಡಬಹುದು. ಹೆದ್ದಾರಿಯಲ್ಲಿ ಸಂಚರಿಸುವಾಗ ಟೋಲ್‌ನಾಕಾದಲ್ಲಿ ಹಣ ನೀಡುತ್ತೇವೆ. ನಮ್ಮ ಹಳ್ಳಿಗಳಲ್ಲಿ ಕಲ್ಲಿನ ಲಾರಿಯವರು ರಸ್ತೆಯಂಚಿನ ಗುಡಿಯೆದುರು ಒಂದು ಕಲ್ಲು ಇಟ್ಟು ಕೈಮುಗಿದು ಹೋಗುತ್ತಾರೆ.

ದೇಗುಲ ನಿರ್ಮಾಣಕ್ಕೆ ಲಾರಿಯವರ ಕಲ್ಲು ಕಾಣಿಕೆ ಬಳಕೆಯಾಗುತ್ತದೆ. ಸಕಲ ಜೀವಜಗತ್ತಿಗೂ ಅತ್ಯಮೂಲ್ಯವಾದ ನೀರು ಹಿಡಿಯುವ ಕೆರೆ ಉಳಿಸಲು ನಮ್ಮ ಹಳ್ಳಿಗರು ಪ್ರಾಮಾಣಿಕ ಹೆಜ್ಜೆ ಇಟ್ಟರೆ ನೆರವು ನೀಡುವವರು ಹಲವರು ಸಿಗಬಹುದು. ರಸ್ತೆಗಳಲ್ಲಿ ವಿದ್ಯುತ್‌ ಪಂಪು, ಪೈಪು, ರಾಸಾಯನಿಕ ಗೊಬ್ಬರ, ಆಭರಣ, ವಾಹನ, ಸಿನಿಮಾ, ಆಸ್ಪತ್ರೆಗಳ ಜಾಹೀರಾತು ಫ‌ಲಕ ಹಾಕಲಾಗುತ್ತದೆ. ಸಾಮಾನ್ಯವಾಗಿ ಕೆರೆದಂಡೆಯಲ್ಲಿಯೇ ಇಂಥ ಫ‌ಲಕಗಳಿರುತ್ತವೆ. ಒಂದೊಂದು ಉದ್ಯಮಗಳು ಕೆರೆ ಪುನಶ್ಚೇತನಕ್ಕೆ ಒಂದೊಂದು ಕೆರೆಗೆ ಹಣ ನೀಡಿ ಸಮಗ್ರ ಕಾಯಕಲ್ಪ ನೀಡಿದರೆ ಇಡೀ ರಾಜ್ಯ ಮೆಚ್ಚುತ್ತದೆ. ಕೆರೆ ಸುಂದರಗೊಳಿಸಿದ ಬಳಿಕ ಒಂದಲ್ಲ ಹತ್ತು ಫ‌ಲಕಗಳನ್ನೂ ದಂಡೆಯಲ್ಲಿ ಜಾಹೀರು ಮಾಡಬಹುದು. ರೈತರು ನೀರಿಗೆ ನೆರವಾದ ಕಂಪನಿಗಳನ್ನು ನಿತ್ಯ ನೆನಪಿಸಿಕೊಳ್ಳುತ್ತಾರೆ. 

ದೇಗುಲಗಳಿಗೆ ಉತ್ಸವಗಳಲ್ಲಿ “ಹೊರೆ ಕಾಣಿಕೆ’ ಅರ್ಪಿಸಿದಂತೆ ಕಳವೆಯಿಂದ ಇದೇನು ಹೊಸ “ಕೆರೆ ಕಾಣಿಕೆ’ ಕಾಲ ಶುರುವಾಯೆ¤ಂದು ಟೀಕಿಸಬಹುದು. ನಮ್ಮನ್ನು ಬದುಕಿಸಿದ ಅಮ್ಮ  ಸಾವನ್ನಪ್ಪುವ ಘಳಿಗೆಯಲ್ಲಿ  ಕೈಕಟ್ಟಿ ಕೂಡ್ರಲಾಗುವುದಿಲ್ಲ. ಮುಂಗಾರು ಮಳೆಗೆ ಎಂಥ ಅಬ್ಬರದೆಯೆಂದು ಈಗ ನೋಡುತ್ತಿದ್ದೇವೆ. ಭವಿಷ್ಯ ಯೋಚಿಸಿದರೆ ಭಯವಾಗುತ್ತಿದೆ.  ಸುರಿಯುವ ಮಳೆ ನೀರು ಹಿಡಿಯುವ ಜಲಪಾತ್ರೆಗಳನ್ನು ಸರಿಪಡಿಸಲು ಸಮುದಾಯದ ಹಣ ಕೇಳುವುದು ತಪ್ಪಲ್ಲ, ಎಲ್ಲವನ್ನೂ ಸರಕಾರವೇ ಮಾಡಬೇಕೆಂದರೆ ಇನ್ನೆರಡು ಶತಮಾನಬೇಕಾದೀತು. ಕೆರೆಗಳನ್ನು ಶತಮಾನಗಳ ಹಿಂದೆ ಸಮುದಾಯವೇ ನಿರ್ಮಿಸಿದೆ. ಈಗ ನೀರು ಹಿಡಿದು ಊರು ಕಟ್ಟಲು ಕೆರೆ ಕಾಣಿಕೆ ಪಡೆಯುವುದು ಒಂದು ಮಾರ್ಗ ಮಾತ್ರ. “ಅಮ್ಮ ತೀವ್ರ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಬಡವರಾದ ನಮಗೆ ಚಿಕಿತ್ಸೆಗೆ ಹಣವಿಲ್ಲ. ಆಸ್ಪತ್ರೆಯ ಖರ್ಚು ಭರಿಸಲು ಹಣಬೇಕು’ ಜನ ನಮ್ಮೆದುರು ಕಣ್ಣೀರಿಡುತ್ತ ನಿಂತಾಗ ಸಾಧ್ಯವಾದ ನೆರವು ನೀಡುತ್ತೇವೆ. ಕೆರೆಯೇ ಎಲ್ಲರಿಗೂ ಅಮ್ಮ, ಇವಳಿಗೆ ತೊಂದರೆಯಾದರೆ ಸಮಾಜ ನೆರವಾಗಿ ಬದುಕಿಸಲು ಸಾಧ್ಯವಿಲ್ಲವೇ?  ಅಮ್ಮ ಸಾಯುವಾಗ ಬದುಕಿಸುವ ಶಕ್ತಿ ಮಕ್ಕಳಿಗಿಲ್ಲವೇ?

– ಶಿವಾನಂದ ಕಳವೆ

Advertisement

Udayavani is now on Telegram. Click here to join our channel and stay updated with the latest news.

Next