ಧಾರವಾಡ: ಒಂದೇ ಭಾರತ, ಒಂದೇ ತುರ್ತು ಕರೆ ಅಡಿಯಲ್ಲಿ ಉಚಿತ ದೂರವಾಣಿ ಸಂಖ್ಯೆ112 ಸಹಾಯವಾಣಿಗೆ ಹಾಗೂ ನಿರ್ಭಯವಾಹನಗಳಿಗೆ ನಗರದ ಎಸ್‌ಪಿ ಕಚೇರಿ ಆವರಣದಲ್ಲಿ ಚಾಲನೆ ನೀಡಲಾಯಿತು.
ಚಾಲನೆ ನೀಡಿದ ಎಸ್‌ಪಿ ಪಿ.ಕೃಷ್ಣಕಾಂತ ಮಾತನಾಡಿ, ಮಹಿಳೆಯರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಅನುಕೂಲವಾಗುವಂತೆ ನಿರ್ಭಯ ಯೋಜನೆಯಡಿ ಜಿಲ್ಲೆಯ ಪ್ರತಿ ಪೊಲೀಸ್ ಠಾಣೆಗೆ ಒಂದರಂತೆ ಒಂಬತ್ತು ನಿರ್ಭಯ ದ್ವಿ-ಚಕ್ರ ವಾಹನಗಳನ್ನು ಸರಕಾರದಿಂದ ನೀಡಲಾಗಿದೆ. ತುರ್ತು ಸಹಾಯವಾಣಿ 112 ಸಂಖ್ಯೆಗೆ ಕರೆ ಮಾಡಿದರೆ ಸಮೀಪದಲ್ಲಿರುವ ತುರ್ತು ಸ್ಪಂದನವಾಹನದಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿ ಅಗತ್ಯ ನೆರವು ನೀಡಲಿದ್ದಾರೆ ಎಂದರು.
ಜಿಲ್ಲೆಯ ಎಲ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತುರ್ತು ಸಂದರ್ಭಗಳಲ್ಲಿ ಹಾಗೂ ವಿಶೇಷವಾಗಿ ಮಹಿಳೆಯರ ರಕ್ಷಣೆ ಮತ್ತು ಅವರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ನೀಡಲು ಜಿಲ್ಲಾ ಪೊಲೀಸ್‌ಘಟಕದಿಂದ ಪೊಲೀಸ್ ಠಾಣೆಗಳಿಗೆ ನಿರ್ಭಯ ವಾಹನಗಳನ್ನು ಪೂರೈಸಲಾಗಿದೆ. ಅಪಘಾತ,ಗಲಭೆ ಸೇರಿದಂತೆ ಯಾವುದೇ ದುರ್ಘಟನೆ ಜರುಗಿದಾಗ 112 ಸಹಾಯವಾಣಿಗೆ ಕರೆ ಮಾಡಿದರೆ ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ಅಗತ್ಯ ನೆರವು, ಪ್ರಾಥಮಿಕ ಚಿಕಿತ್ಸೆ, ರಕ್ಷಣೆ ನೀಡಲುಅನುಕೂಲವಾಗುವ ಆಧುನಿಕ ಸೌಲಭ್ಯ ಹೊಂದಿರುವ ನಾಲ್ಕು ಚಕ್ರದ (ಇನ್ನೋವಾ ಕ್ರಿಸ್ಟಾ) ತುರ್ತು ಸ್ಪಂದನ ವಾಹನಗಳನ್ನು ಸಾರ್ವಜನಿಕ ಸೇವೆಗೆ ಸಿದ್ಧಗೊಳಿಸಲಾಗಿದೆ. ಸಹಾಯವಾಣಿಮೂಲಕ ಇದರಲ್ಲಿ ದಾಖಲಾಗುವ ಕರೆಗಳಿಗ ಅನುಗುಣವಾಗಿ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಒಂದೇ ಭಾರತ ಒಂದೇ ತುರ್ತು ಕರೆ ಅಡಿಯಲ್ಲಿ 112 ಸಹಾಯವಾಣಿ ರೂಪಿಸಿದ್ದು,ಇದಕ್ಕೆ ಜಿಲ್ಲೆಯಲ್ಲೂ ಚಾಲನೆ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಸಾರ್ವಜನಿಕರು ಪೊಲೀಸ್, ಅಗ್ನಿ, ವಿಪತ್ತು, ಮಹಿಳಾ ಸಹಾಯ ಇನ್ನಿತರೆ ಯಾವುದೇ ತುರ್ತು ಪರಿಸ್ಥಿತಿಯಲ್ಲಿ 24*7 ತುರ್ತು ಸಹಾಯವಾಣಿ 100 ಸಂಖ್ಯೆಯ ಬದಲಾಗಿ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ತ್ವರಿತಪರಿಹಾರ ಪಡೆಯಬೇಕು. ಸಮಸ್ಯೆಗಳನ್ನಾಧರಿಸಿಅದನ್ನು ಸಂಬಂಧಿ ಸಿದ ಇಲಾಖೆಗೆ ವರ್ಗಾಯಿಸಿ ಅಲ್ಲಿಂದ ಅಗತ್ಯವಿರುವ ಸಹಾಯ, ಸಮಸ್ಯೆಗೆ ಪರಿಹಾರ ನೀಡಲಾಗುತ್ತದೆ ಎಂದರು.
ಧಾರವಾಡ ಗ್ರಾಮೀಣ ಡಿವೈಎಸ್‌ಪಿ ಎಂ.ಬಿ. ಸಂಕದ, ಡಿಸಿಆರ್‌ಬಿಯ ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಶಿವಾನಂದ ಸೇರಿದಂತೆ ವಿವಿಧ ಪೊಲೀಸ್ ಅಧಿಕಾರಿಗಳು ಇದ್ದರು.