ಮಂಗಳೂರು : ಕೇರಳದ ಕೋಝಿಕೋಡ್‌ನಲ್ಲಿ ನಿಫಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಹೆಚ್ಚು ನಿಗಾ ವಹಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ನಿಫಾ ವೈರಸ್ ಸೋಂಕು ಪ್ರಕರಣ ವರದಿಯಾಗಿಲ್ಲ. ಆದರೂ ಜಿಲ್ಲೆಯಲ್ಲಿ ತೀವ್ರ ನಿಗಾ ವಹಿಸಲಾಗಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಖಾಸಗಿ ಆಸ್ಪತ್ರೆಗಳಿಗೆ ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಹಾಗೂ ಆಸ್ಪತ್ರೆಗಳಲ್ಲಿ ವಿವಿಧ ಚಿಕಿತ್ಸೆಗಳಿಗಾಗಿ ದಾಖಲಾಗಿರುವ ಅಥವಾ ಚಿಕಿತ್ಸೆಗಾಗಿ ಬರುವ ಯಾವುದೇ ರೋಗಿಗಳಲ್ಲಿ ನಿಫಾ ಲಕ್ಷಣಗಳು ಕಂಡು ಬಂದರೆ ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಕೊಡುವಂತೆ ಸೂಚನೆ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಕಿಶೋರ್ ಕುಮಾರ್ ತಿಳಿಸಿದ್ದಾರೆ.
ನಿಫಾ ವೈರಸ್ ಪ್ರಮುಖವಾಗಿ ಬಾವಲಿ, ಹಂದಿಗಳಿಂದ ಹರಡುತ್ತಿದ್ದು, ಹಾಗಾಗಿ ಬಾವಲಿ ಮತ್ತು ಹಂದಿಗಳಿಂದ ದೂರವಿರ ಬೇಕು. ಬಾವಲಿಗಳು ಕಚ್ಚಿ ಬಿದ್ದ ಹಣ್ಣುಗಳನ್ನು ಮನುಷ್ಯರು ತಿಂದಲ್ಲಿ ರೋಗ ಹರಡುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಬಿದ್ದ ನೇರಳೆ, ಹಲಸು, ಪೇರಳೆ ಇತ್ಯಾದಿ ಹಣ್ಣುಗಳನ್ನು ತಿನ್ನುವುದರಿಂದ ದೂರವಿರಬೇಕು. ಹಣ್ಣುಗಳನ್ನು ಸ್ವತ್ಛವಾಗಿ ತೊಳೆದು ತಿನ್ನಬೇಕು. ಅಲ್ಲದೆ ಆಹಾರ ಸೇವಿಸುವ ಮುನ್ನ ಕೈಗಳನ್ನೂ ಸ್ವತ್ಛವಾಗಿ ತೊಳೆಯುವುದು ಮತ್ತಿತರ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸ ಬೇಕೆಂದು ತಿಳಿಸಿದ್ದಾರೆ.
ಇದನ್ನೂ ಓದಿ :ಇಲಾಖೆಯಲ್ಲಿನ ಅನಗತ್ಯ ಖರ್ಚಿಗೆ ಕಡಿವಾಣ ಹಾಕುವುದು ಮೊದಲ ಗುರಿ ; ಸಚಿವ ಕೋಟ
ಕೇರಳದಲ್ಲಿ ನಿಫಾ ಸೋಂಕು ವೈರಸ್‌ನಿಂದ 12 ವರ್ಷದ ಬಾಲಕ ಸಾವನ್ನಪ್ಪಿದ್ದಲ್ಲದೆ ಆ ಬಾಲಕನ ಪ್ರಾಥಮಿಕ ಸಂಪರ್ಕ ಹೊಂದಿದ 251 ಮಂದಿ ಇದ್ದಾರೆ. ಅವರಲ್ಲಿ 38 ಮಂದಿಯನ್ನು ಆಸ್ಪತ್ರೆಯಲ್ಲಿ ಐಸೊಲೇಶನ್‌ನಲ್ಲಿ ಇರಿಸಲಾಗಿದ್ದು, ಈ ಪೈಕಿ 11 ಮಂದಿಗೆ ನಿಫಾ ಲಕ್ಷಣಗಳು ಕಾಣಿಸಿಕೊಂಡಿವೆ. ಕೇರಳದ ಮಂದಿ ವೈದ್ಯಕೀಯ, ಶಿಕ್ಷಣ ಇತ್ಯಾದಿ ಉದ್ದೇಶಗಳಿಗಾಗಿ ಕರ್ನಾಟಕದ ಜತೆ ಹೆಚ್ಚು ಸಂಬಂಧ ಹೊಂದಿರುವುದರಿಂದ ದ.ಕ. ಜಿಲ್ಲೆಯಲ್ಲಿ ಹೆಚ್ಚು ಮುಂಜಾಗ್ರತೆ ವಹಿಸಲಾಗುತ್ತಿದೆ.