Advertisement
ನಿಂತಿಕಲ್ಲು ಪುತ್ತೂರು-ಸುಳ್ಯವನ್ನು ಸಂಪರ್ಕಿಸುವ ಗಡಿಭಾಗವಾಗಿದ್ದು, ಕಾಣಿಯೂರು- ಪುತ್ತೂರು, ಬೆಳ್ಳಾರೆ- ಪುತ್ತೂರನ್ನು ಸಂಪರ್ಕಿಸುವ ಮುಖ್ಯ ಜಂಕ್ಷನ್ ಇದಾಗಿದೆ. ಪುತ್ತೂರು ನಗರದಿಂದ ಕಾಣಿಯೂರು ಹಾಗೂ ಬೆಳ್ಳಾರೆ ಮಾರ್ಗದ ಮಧ್ಯೆ ಈ ಜಂಕ್ಷನ್ ಇದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವನ್ನೂ ಸಂಪರ್ಕಿಸುವ ರಸ್ತೆ ಇದಾಗಿದೆ. ಪಂಜ – ಕೊಡಿಂಬಳವಾಗಿ ಧರ್ಮಸ್ಥಳಕ್ಕೂ ಸಂಪರ್ಕ ಸಾಧಿಸಲು ಈ ರಸ್ತೆ ಸಹಾಯವಾಗಿದೆ. ಹೀಗೆ ಹಲವು ಪ್ರದೇಶಗಳಿಗೆ ಕೊಂಡಿಯಾಗಿರುವ ನಿಂತಿಕಲ್ಲಿನಲ್ಲಿ ಸಮರ್ಪಕವಾದ ಮೂಲ ಸೌಕರ್ಯಗಳೇ ಇಲ್ಲ.
ಬಹಳ ವರ್ಷಗಳಿಂದಲೂ ಇಲ್ಲಿಗೆ ಸುಸಜ್ಜಿತವಾದ ಬಸ್ ನಿಲ್ದಾಣಕ್ಕೆ ಸಾರ್ವಜನಿಕರ ಬೇಡಿಕೆ ಇತ್ತು. ಬೇಡಿಕೆಗೆ ಅನುಸಾರವಾಗಿ ಬಸ್ ನಿಲ್ದಾಣವನ್ನು ನಿರ್ಮಸಲಾಗಿದ್ದರೂ ಉಪಯೋಗಕ್ಕೆ ಬಾರದೇ ಬಿಕೋ ಎನ್ನುತ್ತಿದೆ. ಈ ನಿಲ್ದಾಣದಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ. ಶೌಚಾಲಯ ಇದ್ದರೂ ಉಪಯೋಗಕ್ಕಿಲ್ಲ!
ಇಲ್ಲಿನ ಸಾರ್ವಜನಿಕ ಶೌಚಾಲಯದ ಸ್ಥಿತಿ ಶೋಚನೀಯ. ಗ್ರಾ.ಪಂ. ವ್ಯಾಪ್ತಿಗೆ ಬರುವ ಈ ಶೌಚಾಲಯವು ನಾಮಕಾವಾಸ್ತೆಗೆ ಮಾತ್ರ. ಒಂದೇ ಕಟ್ಟಡದಲ್ಲಿ ಐದು ಶೌಚಾಲಯವಿದ್ದರೂ, ಅದರಲ್ಲಿ ನಾಲ್ಕು ಶೌಚಾಲಯವು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ. ಸದಾ ಬೀಗ ಜಡಿದಿರುತ್ತದೆ. ಉಳಿದಿರುವ ಒಂದು ಶೌಚಾಲಯವೂ ಬಹಳ ದುರ್ವಾಸನೆಯಿಂದ ಕೂಡಿದೆ. ಮೇಲ್ನೋಟಕ್ಕೆ ಶುಚಿತ್ವವಿದ್ದಂತೆ ಕಂಡರೂ, ಒಳಗಡೆ ಸರಿಯಾದ ನೀರಿನ ವ್ಯವಸ್ಥೆಯೂ ಇಲ್ಲ. ಈ ಅವ್ಯವಸ್ಥೆಗಳಿಂದಾಗಿ ಮುಖ್ಯವಾಗಿ ಮಹಿಳೆಯರಿಗೆ ಭಾರೀ ತೊಂದರೆಯಾಗುತ್ತಿದೆ.
Related Articles
Advertisement
ಶೀಘ್ರವಾಗಿ ಬಗೆಹರಿಸುತ್ತೇವೆಶೌಚಾಲಯದ ಕುರಿತು ದೂರುಗಳು ಬಂದಿದ್ದು,ಶೀಘ್ರವಾಗಿ ಬಗೆಹರಿಸಿಕೊಡುತ್ತೇವೆ. ನೂತನವಾದ ಬಸ್ ನಿಲ್ದಾಣವನ್ನು ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಸಾರ್ವಜನಿಕ ಕುಡಿಯುವ ನೀರೀನ ವ್ಯವಸ್ಥೆಯನ್ನು ಶೀಘ್ರವಾಗಿ ಮಾಡಲಾಗುತ್ತದೆ.
– ಜಾನಕಿ
ಎಣ್ಮೂರು ಗ್ರಾ.ಪಂ. ಅಧ್ಯಕ್ಷೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ
ಎಣ್ಮೂರಿನ ಗ್ರಾ.ಪಂ. ಕೇವಲ ಬಾಯಲ್ಲಿ ಮಾತ್ರ ಅಭಿವೃದ್ಧಿ ಎನ್ನುತ್ತಿದೆ. ಆದರೆ ಕೆಲಸಗಳು ಮಾತ್ರ ಎಲ್ಲಿಯೂ ಗೋಚರವಾಗುವುದಿಲ್ಲ. ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಅನೇಕ ವರ್ಷಗಳಿಂದ ಸುಸಜ್ಜಿತ ಬಸ್ ನಿಲ್ದಾಣಕ್ಕೆ ಬೇಡಿಕಯಿದ್ದು, ಜತೆಗೆ ಸಾರ್ವಜನಿಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲಿ ಇಲ್ಲ. ನಮಗೆ ಸರಿಯಾದ ರಿಕ್ಷಾ ನಿಲುಗಡೆಗೆ ವ್ಯವಸ್ಥೆಗೆ ಮನವಿ ಅನೇಕ ಬಾರಿ ಮಾಡಿಯಾಗಿದೆ. ಸಾರ್ವಜನಿಕ ಶೌಚಾಲಯವೂ ಸರಿಯಾಗಿಲ್ಲ.
– ಅಬ್ದುಲ್ ರಝಾಕ್, ರಿಕ್ಷಾ ಚಾಲಕ