Advertisement
ರೈತರಿಗೆ ನಿವೃತ್ತಿ ಇದೆಯಾ?ಈ ಪ್ರಶ್ನೆ ಕೇಳಿದರೆ ಭಯವಾಗುತ್ತದೆ. ಏಕೆಂದರೆ, ಬದುಕ ಬೇಕಾದರೆ ರೈತಾಪಿ ಜನರು ಕೃಷಿ ಮಾಡುತ್ತಲೇ ಇರಬೇಕು. ಈತನಕ ನಡೆದು ಬಂದಿರುವುದೂ, ಈಗ ನಡೆಯುತ್ತಿರುವುದೂ ಹೀಗೆ. ಆದರೆ, ಗದಗ ಜಿಲ್ಲೆಯ ಲಕ್ಷೇ¾ಶ್ವರ ಪಟ್ಟಣದ ಹೊರವಲಯದಲ್ಲಿರುವ (ಲಕ್ಷೇ¾ಶ್ವರ-ಸವಣೂರು ರಸ್ತೆ) ನಿಂಗನಗೌಡರ ಬದುಕಲ್ಲಿ ಒಮ್ಮೆ ಇಣುಕಿದರೆ ಹೀಗೆ ಅನಿಸೊಲ್ಲ. ಸರ್ಕಾರಿ ನೌಕರರಿಗಾದರೆ, ನಿವೃತ್ತಿಯ ನಂತರ ಪಿಂಚಣಿ ಸಿಗುತ್ತದೆ. ದೊಡ್ಡ ಮೊತ್ತದ ಹಣ ಸಿಕ್ಕಿದೆಯೆಂದೇ ಅವರು ಖುಷಿಯಿಂದ ಇರಬಹುದು. ಅದೇ ರೀತಿ, ಕೃಷಿಯನ್ನು ಖಚಿತ ಲೆಕ್ಕಾಚಾರದೊಂದಿಗೆ ಮಾಡಿದರೆ, ವಯಸ್ಸಾದ ನಂತರವೂ ರೈತರು ಸಂತೋಷದಿಂದಲೇ ಜೀವನ ನಡೆಸಬಹುದು ಎಂಬುದು ನಿಂಗನಗೌಡರ ಸ್ಪಷ್ಟ ಮಾತು. ಈ ಹಿರಿಯರಿಗೆ ಈಗ 70 ವರ್ಷ. ಐದು ದಶಕದಿಂದ ವೀಳ್ಯದೆಲೆ ಬೆಳೆಯುತ್ತಾ, ತೋಟವನ್ನು ತಮ್ಮ ಮಕ್ಕಳೇ ಅನ್ನುವಂತೆ ಜೋಪಾನ ಮಾಡಿದ್ದಾರೆ. ಪ್ರತಿಫಲವಾಗಿ ಉತ್ತಮ ಬದುಕು ಕಟ್ಟಿಕೊಳ್ಳುವುದರ ಜೊತೆಗೆ ವೃದ್ಧಾಪ್ಯದಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.
ಸುಮಾರು 60 ವರ್ಷದ ಹಿಂದೆ, ನಿಂಗನಗೌಡರ ತಂದೆ ಈ ಜಮೀನಿನಲ್ಲಿ 25 ಅಡಿ ಆಳದ ಬಾವಿ ಕಟ್ಟಿಸಿದ್ದರು. ನಂತರ ಬತ್ತಿದ ಬಾವಿಯಲ್ಲಿ ಬೋರ್‌ವೆಲ್ ಕೊರೆಸಿ ತೋಟಗಾರಿಕೆ ಕೃಷಿ ಆರಂಭಿಸಿದರು. ನಾಲ್ಕೈದು ವರ್ಷದ ನಂತರ ಪಿತ್ರಾರ್ಜಿತ ಆಸ್ತಿ ರೂಪದಲ್ಲಿ ಬಂದ ಒಂದೂವರೆ ಎಕರೆಯಲ್ಲಿ ನಿಂಗನಗೌಡ 15 ಗುಂಟೆಯಲ್ಲಿ ಮಾತ್ರ ವೀಳ್ಯದೆಲೆ ಕೃಷಿ ಶುರು ಮಾಡಿದರು. 3*3 ಅಂತರದಲ್ಲಿ 1,700 ವೀಳ್ಯದೆಲೆ ಸಸಿಗಳನ್ನು ನಾಟಿ ಮಾಡಿ, ಹೊರಗಿನ ಗಾಳಿ ತಡೆಯಲು ತೋಟದ ಸುತ್ತ ಬಾಳೆಗಿಡ, 40 ತೆಂಗು ಹಾಕಿದರು. ಬೇಸಿಗೆಯಲ್ಲಿ ಐದು ದಿನಕ್ಕೊಮ್ಮೆ, ಉಳಿದ ದಿನಗಳಲ್ಲಿ 8-10 ದಿನಕ್ಕೆ ನೀರು ಹಾಯಿಸುತ್ತಾ, ಕೊಟ್ಟಿಗೆ ಗೊಬ್ಬರ ನೀಡುತ್ತಾ ಬಂದರು. ಅಂತರ ಬೆಳೆಗಳಾಗಿ ನುಗ್ಗೆಕಾಯಿ, ಚೊಗತ್ತಿ, ಗುರ್ಲ್ಗಿಡ ಬೆಳೆಸಿದರು. ಇವು ವೀಳ್ಯದೆಲೆ ಬಳ್ಳಿ ಹಬ್ಬಲು ಸಹಕಾರಿ. ಹೀಗೆ ಮೂರು ವರ್ಷ ವೀಳ್ಯದೆಲೆ ಸಸಿಗಳನ್ನು ಜೋಪಾನವಾಗಿ ಬೆಳೆಸಿದ ನಂತರ 20-25 ದಿನಕ್ಕೊಮ್ಮೆ ವೀಳ್ಯದೆಲೆ ಕಟಾವಿಗೆ ಬಂತು.
Related Articles
ತಿಂಗಳಿಗೊಮ್ಮೆ ವೀಳ್ಯದೆಲೆ ಕಟಾವು ಮಾಡಿದರೂ ವರ್ಷಕ್ಕೆ ಹೆಚ್ಚು-ಕಡಿಮೆ 12-14 ಬಾರಿ ಎಲೆ ಕಟಾವಿಗೆ ಬರುತ್ತದೆ. ಪ್ರತಿ ತಿಂಗಳಿಗೆ ಐದು ಅಂಡಗಿ (12 ಸಾವಿರ ಎಲೆ ಇರುವ ಮೂಟೆ) ಇಳುವರಿ ಬರುತ್ತದೆ. ಅದನ್ನು ಹತ್ತಿರದ ಲಕ್ಷೇ¾ಶ್ವರ ಮತ್ತು ಸವಣೂರು ಮಾರುಕಟ್ಟೆಗೆ ರವಾನಿಸುತ್ತಾರೆ. ಎಲೆ ಕಟಾವಿಗೆ ಮತ್ತು ತಿಂಗಳಿಗೊಮ್ಮೆ ಎಲೆ ಬಳ್ಳಿ ಕಟ್ಟಲು ಆಳುಗಳ ಕೂಲಿ ಸೇರಿದಂತೆ ತಿಂಗಳಿಗೆ ಆರು ಸಾವಿರ ರೂ. ಖರ್ಚು ತೆಗೆದರೂ 20-25 ಸಾವಿರ ರೂ. ಆದಾಯ ಗ್ಯಾರಂಟಿ. ಅಂತರ ಬೆಳೆಗಳಾದ ನುಗ್ಗೆ, ತೆಂಗು, ಬಾಳೆಯಿಂದಲೂ ತಿಂಗಳಿಗೆ 30 ಸಾವಿರ ರೂ.ಅನ್ನು ನಿಂಗನಗೌಡ ಪಾಟೀಲರು ಸಂಪಾದಿಸುತ್ತಿದ್ದಾರೆ. ತೋಟದ ತ್ಯಾಜ್ಯದಿಂದ ಗೊಬ್ಬರ ತಯಾರಿಸುತ್ತಾರೆ. ವರ್ಷಕೊಮ್ಮೆ (ಚಳಿಗಾಲದಲ್ಲಿ) ಬಳ್ಳಿ ಕೆಲಸ ಮಾಡಿಸುತ್ತಾರೆ. ನಾಲ್ಕು ಎಕರೆ ಭೂಮಿಯಲ್ಲಿ ಜೋಳ, ಕಂಟಿ ಶೇಂಗಾ, ವಿವಿಧ ತರಕಾರಿ, ಹತ್ತಿ ಬೆಳೆಯುತ್ತಾರೆ. ಈ 15 ಗುಂಟೆಯಲ್ಲಿ ಬರುವ ತೋಟದ ಆದಾಯದಿಂದಲೇ ತಮ್ಮ ಬದುಕನ್ನು ಕಟ್ಟಿಕೊಂಡು, ಮೂವರು ಹೆಣ್ಣು ಮಕ್ಕಳನ್ನು ಓದಿಸಿ, ಮದುವೆ ಮಾಡಿದ್ದಾರೆ. “ಇಷ್ಟು ವರ್ಷ ತೋಟವನ್ನು ಜೋಪಾನವಾಗಿ ಮಾಡಿದ್ದರಿಂದ ಇಳಿ ವಯಸ್ಸಿನಲ್ಲಿ ಸ್ವಾವಲಂಬಿ ಜೀವನಕ್ಕೆ ಊರುಗೋಲು ಆಗಿದೆ. ನಿತ್ಯ ತೋಟಕ್ಕೆ ಹೋಗದಿದ್ದರೆ ಏನೋ ಕಳೆದುಕೊಂಡ ಭಾವನೆ ಬರುತ್ತದೆ’ ಎನ್ನುತ್ತಾರೆ ನಿಂಗನಗೌಡ ಪಾಟೀಲ.
Advertisement
– ಶರಣು ಹುಬ್ಬಳ್ಳಿ