ಒಂದಲ್ಲ, ಎರಡಲ್ಲ, ಬರೋಬ್ಬರಿ ಒಂಬತ್ತು! – ಇದು ಈ ವಾರ (ಮಾ.04) ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆ. ಇದು ಇಲ್ಲಿವರೆಗೆ ಅಧಿಕೃತವಾಗಿ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿರುವ ಚಿತ್ರಗಳಾದರೆ, ಇನ್ನೊಂದಿಷ್ಟು ಚಿತ್ರಗಳು ಕೂಡಾ ಮಾರ್ಚ್ 04ರಂದು ಬಿಡುಗಡೆಯಾಗಲಿವೆ. ತೆರೆಮರೆಯಲ್ಲಿ ಬಿಡುಗಡೆಯ ಕಸರತ್ತು ನಡೆಯುತ್ತಿದೆ.
ಇದು ಈ ಎರಡು ತಿಂಗಳಲ್ಲಿ ಬಿಡುಗಡೆಯಾದ ಚಿತ್ರಗಳಲ್ಲೇ ಅತಿ ಹೆಚ್ಚಿನ ಸಂಖ್ಯೆ ಎನ್ನಬಹುದು. ಈ ಹಿಂದಿನ ವಾರಗಳಲ್ಲಿ ಆರೇಳು ಚಿತ್ರಗಳು ಬಿಡುಗಡೆಯಾಗಿದ್ದು ಗೊತ್ತೇ ಇದೆ. ಆದರೆ, ಈಗ ಈ ಸಂಖ್ಯೆ ಹೆಚ್ಚಾಗಿದೆ. “ಮೈಸೂರು’,” ಸ್ಮಶಾಂತಿ’, “ಸೋಲ್ಡ್’ “ಯೆಲ್ಲೋ ಬೋರ್ಡ್’, “ಅಘೋರ’, “ಬೆಟ್ಟದ ದಾರಿ’, “ಕನ್ನೇರಿ’, “ಲೀಸ’, “ಮೋಕ್ಷ’ ಚಿತ್ರಗಳು ತಮ್ಮ ಬಿಡುಗಡೆ ಯನ್ನು ಘೋಷಿಸಿಕೊಂಡಿವೆ. ಕಳೆದ ವಾರ (ಫೆ.24)ಆರು ಚಿತ್ರಗಳು ಬಿಡುಗಡೆಯಾಗಿವೆ. ಈಗ ಮತ್ತೆ ಒಂಬತ್ತು ಚಿತ್ರಗಳು… ಚಿತ್ರಮಂದಿರ ಸಿಗುತ್ತಾ ಎಂದು ನೀವು ಕೇಳಬಹುದು. ಇಲ್ಲಿನ ಬಹುತೇಕ ಚಿತ್ರಗಳು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನು ನಂಬಿಕೊಂಡಿಲ್ಲ. ಮಲ್ಟಿಪ್ಲೆಕ್ಸ್ ಗಳಲ್ಲಿ ಬಿಡುಗಡೆಯಾಗುತ್ತಿವೆ.
ಇದನ್ನೂ ಓದಿ:ಬಹುಭಾಷಾ ನಟಿ Kalyani Priyadarshan ಬ್ಯೂಟಿಫುಲ್ ಲುಕ್ಸ್
ಎಲ್ಲಾ ಓಕೆ, ಒಮ್ಮೆಲೇ ಸಿನಿಮಾ ಬಿಡುಗಡೆಯಲ್ಲಿ ಏರಿಕೆಯಾಗಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಅದಕ್ಕೆ ಬಿಡುಗಡೆಗೆ ಸಿದ್ಧವಾಗಿರುವ ಸ್ಟಾರ್ ಸಿನಿಮಾಗಳು. ಮುಂದಿನ ವಾರದಿಂದ ಅಂದರೆ ಮಾ.11ರಿಂದ ಮತ್ತೆ ಸ್ಟಾರ್ ಸಿನಿಮಾಗಳ ಬಿಡುಗಡೆ ಆರಂಭವಾಗಲಿದೆ. ಅದು ಕನ್ನಡದಿಂದ ಹಿಡಿದು ಪರಭಾಷೆವರೆಗೆ.
ಮಾ.11ಕ್ಕೆ ತೆಲುಗಿನ “ರಾಧೆ ಶ್ಯಾಮ್’ ರಿಲೀಸ್ ಆಗುತ್ತಿದೆ. ಇದರ ಬೆನ್ನಿಗೆ ಅಂದರೆ ಮಾ.17ಕ್ಕೆ ಪುನೀತ್‌ರಾಜ್‌ಕುಮಾರ್ ನಾಯಕರಾಗಿ ನಟಿಸಿರುವ ಕೊನೆಯ ಸಿನಿಮಾ “ಜೇಮ್ಸ್’ ಬಿಡುಗಡೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್‌ನಿಂದ ಬೇರೆ ಯಾವುದೇ ಸಿನಿಮಾಗಳು ಬಿಡುಗಡೆ ಯಾಗುತ್ತಿಲ್ಲ. ಮಾ.25ಕ್ಕೆ “ಆರ್‌ಆರ್‌ಆರ್’ ಸಿನಿಮಾ ಬರಲಿದೆ. ಅದರ ಬೆನ್ನಿಗೆ ಅಂದರೆ ಏಪ್ರಿಲ್‌ನಿಂದ ಸಾಲು ಸಾಲು ಸ್ಟಾರ್ ಸಿನಿಮಾಗಳು ಬಿಡುಗಡೆಯಾಗಲಿರುವುದರಿಂದ ಸಿಕ್ಕ ಗ್ಯಾಪ್‌ನಲ್ಲಿ ಬಿಡುಗಡೆ ಮಾಡಲು ಹೊಸಬರು ಮುಂದಾಗಿದ್ದಾರೆ. ಅಂದಹಾಗೆ, ಈ ನಡುವೆಯೇ “ನರಗುಂದ ಬಂಡಾಯ’ ಚಿತ್ರ ಕೂಡಾ ಮಾ.4ರಂದು ಮರು ಬಿಡುಗಡೆಯಾಗುತ್ತಿದೆ.