ಬೆಂಗಳೂರು: ಅವಾಚ್ಯ ಶಬ್ದದಿಂದ ನಿಂದಿಸಿದ ಎಂಬ ಕಾರಣಕ್ಕೆ ಕುಡಿದ ಅಮಲಿನಲ್ಲಿದ್ದ ಯುವಕನೋರ್ವ ಬೇಕರಿ ನೌಕರನನ್ನು ಹತ್ಯೆ ಮಾಡಿರುವ ಘಟನೆ ಹಳೇ ಬೈಯಪ್ಪನಹಳ್ಳಿಯ ಅಂಬೇಡ್ಕರ್ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಅಂಬೇಡ್ಕರ್ ನಗರ ನಿವಾಸಿ ಮುರಳಿ (48) ಕೊಲೆಯಾದ ವ್ಯಕ್ತಿ.
ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಪ್ರದೇಶದ ನಿವಾಸಿ ಜೈರಾಜ್ (26) ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುರಳಿ ಮತ್ತು ಜೈರಾಜ್ ಅಂಬೇಡ್ಕರ್ ನಗರ ನಿವಾಸಿಗಳಾಗಿದ್ದು, ಪರಿಚಯಸ್ಥರಾಗಿದ್ದರು. ಮುರುಳಿ ಅಂಬೇಡ್ಕರ್ ನಗರದ ವಿ.ಬಿ.ಬೇಕರಿಯಲ್ಲಿ ನೌಕರನಾಗಿದ್ದು, ಜೈರಾಜ್ ಪೈಂಟರ್ ಆಗಿದ್ದ.
ಪರಿಚಯಸ್ಥರಾದ ಕಾರಣ ಜೈರಾಜ್ ತಾಯಿ ಮುರಳಿ ಬಳಿ ಸಾಲ ಪಡೆದಿದ್ದರು. ಆದರೆ, ಸಾಲ ಹಿಂದಿರುಗಿಸದೆ ಜೈರಾಜ್ ತಾಯಿ ನೆಪ ಹೇಳುತ್ತಿದ್ದರು. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮುರಳಿ ಕೆಲಸ ಮಾಡುತ್ತಿದ್ದ ಬೇಕರಿಗೆ ಬಂದಿದ್ದ ಜೈರಾಜ್ ಸಿಗರೇಟ್ ಪಡೆದಿದ್ದ. ಆ ವೇಳೆ ತಾಯಿ ಪಡೆದಿದ್ದ ಸಾಲದ ಕುರಿತು ಜೈರಾಜ್‌ನಲ್ಲಿ ಮುರುಳಿ ಪ್ರಶ್ನಿಸಿದ್ದು, ಈ ವಿಚಾರವಾಗಿ ಇಬ್ಬರು ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಬೇಕರಿ ಮಾಲೀಕರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ.
ಆದರೆ, ಜಗಳದ ವೇಳೆ ಮುರಳಿ ತನ್ನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಕಾರಣಕ್ಕೆ ಕೋಪಗೊಂಡಿದ್ದ ಜೈರಾಜ್ ಅತನ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ಭಾನುವಾರ ತಡರಾತ್ರಿ ಮುರುಳಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದುದನ್ನೇ ಕಾದು ಕುಳಿತಿದ್ದ ಜೈರಾಜ್ ಮಾರ್ಗ ಮಧ್ಯೆ ಆತನನ್ನು ತಡೆದು ಚಾಕುವಿನಿಂದ ಎರಡು ಬಾರಿ ಹೊಟ್ಟೆಗೆ ಇರಿದಿದ್ದ. ಇದರಿಂದ ತೀವ್ರ ರಕ್ತಸ್ರಾವವಾಗಿ ಕೆಳಗೆ ಬಿದ್ದಿದ್ದ ಮುರುಳಿಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹಾಯಕ್ಕೆ ಬಂದವರ ಮೇಲೂ ಹಲ್ಲೆಗೆ ಯತ್ನ: ರಕ್ತದ ಮಡುವಿನಲ್ಲಿ ಬಿದ್ದಿದ್ದ ಮುರಳಿಯ ಸಹಾಯಕ್ಕೆ ಧಾವಿಸಿದ ಸುರೇಶ್ ಮತ್ತು ಅಮಿತ್ ಎಂಬುವರ ಮೇಲೂ ಜೈರಾಜ್ ಕುಡಿದ ಅಮಲಿನಲ್ಲಿ ಹಲ್ಲೆಗೆ ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬೈಯ್ಯಪ್ಪನ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.