ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮಗ ನಿಖೀಲ್ ಕುಮಾರ್ ಅಭಿನಯದ ಎರಡನೇ ಚಿತ್ರ ಇಷ್ಟರಲ್ಲಿ ಶುರುವಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಚಿತ್ರದ ಮುಹೂರ್ತ ಸ್ವಲ್ಪ ಮುಂದಕ್ಕೆ ಹೋಗಿದೆ. ಚಿತ್ರದ ಮುಹೂರ್ತ ಜೂನ್ ಐದಕ್ಕೆ ಫಿಕ್ಸ್ ಆಗಿದ್ದು, ಅಂದು ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ಅಲ್ಲಿಂದ ಚಿತ್ರತಂಡ ಸತತವಾಗಿ 28 ದಿನಗಳ ಕಾಲ ಚಿತ್ರೀಕರಣ ಮಾಡಲಾಗುತ್ತದೆ. ಈ ಮಧ್ಯೆ ಚಿತ್ರಕ್ಕೆ ಯಾವ ಹೆಸರಿಡಲಾಗಿದೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಮೂಲಗಳ ಪ್ರಕಾರ, ಈ ಚಿತ್ರಕ್ಕೆ “ಹೊಯ್ಸಳ’ ಎಂಬ ಹೆಸರು ಸೂಟ್ ಆಗುತ್ತದಂತೆ. ಅಷ್ಟೇ ಅಲ್ಲ, ಆ ಹೆಸರು ಚಿತ್ರತಂಡದವರಿಗೂ ಇಷ್ಟವಾಗಿದೆ. ಆದರೆ, ಅಲ್ಲೊಂದು ಸಣ್ಣ ಸಮಸ್ಯೆ ಇದೆ. ಅದೇನೆಂದರೆ, ಈ ಚಿತ್ರದ ಹೆಸರು ನಿರ್ಮಾಪಕ ರಾಮು ಅವರ ಬಳಿ ಇದೆ.
ಬಹಳ ಹಿಂದೆಯೇ ರಾಮು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಆ ಹೆಸರನ್ನು ದಾಖಲಿಸಿದ್ದರು. ಈಗ ರಾಮು ಅವರೇನಾದರೂ ಆ ಹೆಸರು ಕೊಟ್ಟರೆ, ಚಿತ್ರತಂಡದವರು ಅದೇ ಹೆಸರಿನಲ್ಲಿ ಚಿತ್ರ ಶುರು ಮಾಡುವ ಯೋಚನೆಯಲ್ಲಿದ್ದಾರೆ. ಈಗಾಗಲೇ ಚಿತ್ರತಂಡದವರು ರಾಮು ಅವರ ಜೊತೆಗೆ ಸಂಪರ್ಕದಲಿದ್ದಾರೆ. ರಾಮು ಹೂಂ ಎಂದರೆ, ನಿಖೀಲ್ ಅಭಿನಯದ ಎರಡನೆಯ ಚಿತ್ರ “ಹೊಯ್ಸಳ’ ಹೆಸರಿನಲ್ಲೇ ಸೆಟ್ಟೇರಲಿದೆ.
ಈ ಮಧ್ಯೆ ನಾಯಕ ನಿಖೀಲ್, ದುಬೈಗೆ ಹೋಗಿ ಚಿತ್ರಕ್ಕೆ ಬೇಕಾಗುವ ತಮ್ಮ ಕಾಸ್ಟೂಮ್‌ಗಳೆಲ್ಲವನ್ನೂ ಖರೀದಿಸಿ ತಂದಿದ್ದಾರಂತೆ. ಅಷ್ಟೇ ಅಲ್ಲ, ಚಿತ್ರಕಥೆಗೆ ಸರಿಯಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡು, ಚಿತ್ರ ಶುರುವಾಗುವುದಕ್ಕೆ ಎದುರು ನೋಡುತ್ತಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನೂ ಮಾಜಿ ಮುಖ್ಯಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಮಿಸಲಿದ್ದು, ಇದು ಚೆನ್ನಾಂಬಿಕಾ ಪಿಕ್ಚರ್ನ ಏಳನೇ ಚಿತ್ರವಾಗಲಿದೆ.
ಚಿತ್ರಕ್ಕೆ ಶ್ರೀಷ ಕೂದುವಳ್ಳಿ ಛಾಯಾಗ್ರಹಣ ಮಾಡಿದರೆ, ವಿ. ಹರಿಕೃಷ್ಣ ಸಂಗೀತ ಸಂಯೋಜಿಸಲಿದ್ದಾರೆ. ನಿಖೀಲ್ ಎದುರು ನಾಯಕಿಯಾಗಿ ರಿಯಾ ನಲವಾಡೆ ಅಭಿನಯಿಸುತ್ತಿದ್ದು, ಜೊತೆಗೆ ಶೋಭರಾಜ್, ಸಾಧು ಕೋಕಿಲ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.