Advertisement
ನಿಖಿಲ್ ನಾಮಪತ್ರ ಸಲ್ಲಿಸಿರುವ ಫಾರಂ ನಂ.26ರಲ್ಲಿರುವ ನೂನ್ಯತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚುನಾವಣಾ ಏಜೆಂಟ್ ಮದನ್, ನಿಖಿಲ್ ಉಮೇದುವಾರಿಕೆಯಲ್ಲಿ ಫಾರಂ ನಂ.26 ನಿಯಮಬದ್ಧವಾಗಿಲ್ಲದ ಕಾರಣ ನಾಮಪತ್ರ ತಿರಸ್ಕರಿಸಬೇಕು ಎಂದು ನವದೆಹಲಿಯ ಚುನಾವಣಾ ಆಯುಕ್ತರು, ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
Related Articles
Advertisement
ಇನ್ನೊಮ್ಮೆ ಪರಿಶೀಲಿಸಿ: ನಾಮಪತ್ರ ಪರಿಶೀಲನೆ ಸಮಯದಲ್ಲೇ ನಿಖಿಲ್ ಸಲ್ಲಿಸಿರುವ ನಾಮಪತ್ರದ ಫಾರಂ ನಂ.26ನಲ್ಲಿ ಆಗಿರುವ ಲೋಪವನ್ನು ಗುರುತಿಸಿ ಅದನ್ನು ತಿರಸ್ಕರಿಸಬೇಕು ಎಂದು ಆಕ್ಷೇಪಣೆ ಸಲ್ಲಿಸಿದ್ದೇನೆ. ಆದರೆ, ಜಿಲ್ಲಾ ಚುನಾವಣಾಧಿಕಾರಿಗಳು ಬುಧವಾರ ರಾತ್ರಿ 10.50ಕ್ಕೆ ನೋಟಿಸ್ ಕಳುಹಿಸಿದ್ದು, ಅದರಲ್ಲಿ ನೀವು ಪರಿಶೀಲನೆ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಿಲ್ಲ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ನಾಮಪತ್ರ ಪರಿಶೀಲನೆ ಸಮಯದಲ್ಲೇ ನಾವೇ ಈ ವಿಷಯವಾಗಿ ಆಕ್ಷೇಪಣಾ ಅರ್ಜಿ ಬರೆದುಕೊಟ್ಟಿದ್ದೇವೆ.
ಅದಕ್ಕೆ ಅಕ್ನಾಡ್ಜ್ಮೆಂಟ್ ಕೂಡ ನೀಡಿದ್ದೀರಿ. ಇನ್ನೊಮ್ಮೆ ಪರಿಶೀಲಿಸಿ ಉತ್ತರ ನೀಡುವಂತೆ ಮದನ್ ಕೋರಿಕೆ ಇಟ್ಟಿದ್ದಾರೆ. ಇದರ ಜೊತೆಗೆ ನಾಮಪತ್ರ ಪರಿಶೀಲನೆ ಕಾರ್ಯದ ಸಂಪೂರ್ಣ ವಿಡಿಯೋ ಕೊಡಿ. ನಾವೂ ನೋಡ್ತೇವೆ. ಆಗ ನಿಜವೋ, ಸುಳ್ಳೋ ಎನ್ನುವುದು ಗೊತ್ತಾಗಲಿದೆ ಎಂದು ತಿಳಿಸಿದ್ದೇವೆ. ಅದಕ್ಕೆ ನೋಡಲ್ ಆಫೀಸರ್ ಅನುಮತಿ ಪಡೆದು ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಫಾರ್ಮೆಟ್ ಸರಿಯಾಗಿಲ್ಲ: ನಿಖಿಲ್ ಸಲ್ಲಿಸಿರುವ ನಾಮಪತ್ರದ ಅರ್ಜಿ ಸರಿಯಾಗಿಲ್ಲ. ಅದನ್ನು ಸರಿಯಾದ ಫಾರ್ಮೆಟ್‌ನಲ್ಲಿ ಸಲ್ಲಿಸಿಲ್ಲ. ಆ ಹಿನ್ನೆಲೆಯಲ್ಲಿ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ. ನಾವು ಹೇಳಿದ ಮೇಲೆ ಅವರು ಹೊಸ ಅರ್ಜಿ ಹಾಕಿರಬಹುದು ಎಂಬ ಶಂಕೆ ಇದೆ. ಫಾರಂ ನಂ.26 ಫಾರ್ಮೆಟ್ ಸರಿಯಾಗಿಲ್ಲದಿದ್ದರೆ ನಾವು ಆಕ್ಷೇಪಣೆ ಸಲ್ಲಿಸಿದ ಸಮಯದಲ್ಲೇ ಅದನ್ನು ತೋರಿಸಬೇಕಿತ್ತು. ಆ ಸಮಯದಲ್ಲಿ ನಮಗೆ ಅದನ್ನು ತೋರಿಸಲಿಲ್ಲ.
ಅದಕ್ಕೆ ಅಲ್ಲೇ ದೂರು ಅರ್ಜಿ ಕೊಟ್ಟಿದ್ದೇವೆ. ಸಾರ್ವಜನಿಕ ಪ್ರಕಟಣಾ ಫಲಕದಲ್ಲಿ ಹಾಕಿರುವ ಫಾರ್ಮೆಟ್ ಸರಿಯಾಗಿಲ್ಲ. ಅದು ಸಿಂಧುವಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಮದನ್ ತಿಳಿಸಿದ್ದಾರೆ. ಇದರಲ್ಲಿ ಎಲ್ಲಾ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಅವರು ಶಾಮೀಲಾಗಿರುವುದರಿಂದಲೇ ಈ ಪ್ರಶ್ನೆ ಉದ್ಭವಿಸಿದೆ. ತಕ್ಷಣವೇ ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಮದನ್ ಆಗ್ರಹಿಸಿದ್ದಾರೆ.
ನಿಖಿಲ್ ನಾಮಪತ್ರ ಸಲ್ಲಿಸಿರುವ ಫಾರಂ ನಂ.26 ಕ್ರಮಬದ್ಧವಾಗಿಲ್ಲ. ಈ ವಿಷಯವಾಗಿ ಚುನಾವಣಾ ಆಯುಕ್ತರು ಸೇರಿದಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿಗೂ ದೂರು ನೀಡಿದ್ದೇವೆ. ಇಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತೇವೆ. ಅವರೂ ಅಂಬರೀಶ್ ಅಭಿಮಾನಿಗಳೇ. ನಮಗೆ ಸಹಾಯ ಮಾಡುವುದಕ್ಕೆ ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದಾರೆ. ಅವರ ಸಲಹೆಯಂತೆ ನಡೆಯುತ್ತೇವೆ.-ಮದನ್, ಸುಮಲತಾ ಪರ ಚುನಾವಣಾ ಏಜೆಂಟ್