ಮಂಡ್ಯ: ಲೋಕಸಭಾ ಚುನಾವಣಾ ಅಖಾಡಕ್ಕಿಳಿಯಲು ಜೆಡಿಎಸ್ ಅಭ್ಯರ್ಥಿಗಳು ಹಾಸನ ಮತ್ತು ಮಂಡ್ಯದಲ್ಲಿ ಭರ್ಜರಿ ಬಲಪ್ರದರ್ಶನದೊಂದಿಗೆ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಪ್ರತಿಸ್ಪರ್ಧಿಗಳಿಗೆ ಸಡ್ಡು ಹೊಡೆದಿದ್ದಾರೆ.
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರ್ ಸ್ವಾಮಿ ನಾಮಪತ್ರ ಸಲ್ಲಿಸುವ ವೇಳೆ ಜನಸಾಗರ ಹರಿಬಂದಿತ್ತು. ಈ ಸಂದರ್ಭದಲ್ಲಿ ಜನಸ್ತೋಮ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ನಿಖಿಲ್ ನಾಮಪತ್ರ ಸಲ್ಲಿಸುವ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ರೇವಣ್ಣ, ಡಿಕೆ ಶಿವಕುಮಾರ್, ಸಿಎಸ್ ಪುಟ್ಟರಾಜಯ ಸಾಥ್ ನೀಡಿದ್ದರು. ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಿಖಿಲ್ ಸೋಮವಾರ ನಾಮಪತ್ರ ಸಲ್ಲಿಸಿದರು.
ರಾಲಿ ಮೊಟಕುಗೊಳಿಸಿ ನಿಗದಿತ ಸಮಯಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕಾರಿನಲ್ಲಿ ಬಂದ ನಿಖಿಲ್ ಕುಮಾರ್ ಸ್ವಾಮಿ 3.10ನಿಮಿಷದೊಳಗೆ ನಾಮಪತ್ರ ಸಲ್ಲಿಸಿದ್ದರು.
ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷದ ಟಿಕೆಟ್ ನಿಂದ ವಂಚಿತರಾಗಿದ್ದ ಸುಮಲತಾ ಅಂಬರೀಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಜನಸಾಗರವೇ ನೆರದಿತ್ತು. ಈ ವೇಳೆ ಸ್ಯಾಂಡಲ್ ವುಡ್ ನ ದರ್ಶನ್ ಹಾಗೂ ಯಶ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್ ಸಾಥ್ ನೀಡಿದ್ದರು. ಈ ಚುನಾವಣಾ ಪ್ರಚಾರ ಸಮಾರಂಭ ಜೆಡಿಎಸ್ ಹಾಗೂ ಕಾಂಗ್ರೆಸ್ ಪಾಳಯಕ್ಕೆ ಇರಿಸು ಮುರಿಸು ತಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ನಿಖಿಲ್ ನಾಮಪತ್ರ ಸಲ್ಲಿಕೆ ವೇಳೆ ಭರ್ಜರಿ ರೋಡ್ ಶೋ, ಜನಸಾಗರ ಸೇರಿಸುವ ಮೂಲಕ ಜೆಡಿಎಸ್ ತಿರುಗೇಟು ನೀಡಿದೆ.
ಎ ಮಂಜು ನಾಮಪತ್ರ ಸಲ್ಲಿಕೆ:
ಜೆಡಿಎಸ್ ಪಕ್ಷ ಹಾಗೂ ಗೌಡರ ಕುಟುಂಬದ ಮೇಲಿನ ಅಸಮಾಧಾನದಿಂದ ಕಾಂಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷ ಸೇರಿದ್ದ ಎ.ಮಂಜು ಅವರು ಸೋಮವಾರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುನ್ನ ಹುಟ್ಟೂರಿನ ಹನ್ಯಾಳು ಗ್ರಾಮ ದೇವತೆಗೆ ಪೂಜೆ ಸಲ್ಲಿಸಿದ್ದರು. ಅಲ್ಲದೇ ನಾಮಪತ್ರ ಸಲ್ಲಿಕೆಗೂ ಮೊದಲು ಪೌರ ಕಾರ್ಮಿಕ ದಂಪತಿ ಪಾದ ತೊಳೆದಿದ್ದರು.
ಎ.ಮಂಜು ನಾಮಪತ್ರ ಸಲ್ಲಿಕೆ ವೇಳೆ ಭರ್ಜರಿ ಮೆರವಣಿಗೆ ಮೂಲಕ ಆಗಮಿಸಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಬಿಜೆಪಿ ಶಾಸಕ ಪ್ರೀತಂ ಗೌಡ ಸೇರಿದಂತೆ ಇತರ ಗಣ್ಯರು ಜೊತೆಗಿದ್ದರು.