Advertisement

ಜ್ಯೋತಿಷಿ ಮಾತಿಗೆ ಹೆದರಿ ಊರನ್ನೇ ತೊರೆದರು​​​​​​​

06:30 AM Jul 28, 2018 | Team Udayavani |

ಎನ್‌.ಆರ್‌.ಪುರ: ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌.ಪುರ ತಾಲೂಕಿನ ಬಾಳೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ 50ಕ್ಕೂ ಹೆಚ್ಚು ಕುಟುಂಬಗಳು ಜ್ಯೋತಿಷಿಯೊಬ್ಬರ ಮಾತು ಕೇಳಿ 15 ವರ್ಷದಿಂದ ಇದ್ದ ಊರನ್ನೇ ತೊರೆದಿದ್ದಾರೆ. 

Advertisement

ಜ್ಯೋತಿಷಿಯೊಬ್ಬರು ಹೇಳಿದ ಮಾತಿಗೆ ಹೆದರಿ ತಮ್ಮ ಕುಟುಂಬಗಳನ್ನು ಉಳಿಸಿಕೊಳ್ಳುವ ಅನಿವಾರ್ಯತೆಗೆ ಬಿದ್ದ ಅಲೆಮಾರಿಗಳು ಊರನ್ನೇ ತೊರೆದು ಬೇರೆಡೆ ಗುಳೆ ಹೋಗಿದ್ದಾರೆ.

ಕಳೆದ 15 ವರ್ಷದ ಹಿಂದೆ ಬೇರೆ, ಬೇರೆ ಕಡೆಗಳಿಂದ ಬಂದ ಅಲೆಮಾರಿ ಜನಾಂಗದ ಕುಟುಂಬಗಳು ತಾಲೂಕಿನ ಬಿ.ಎಚ್‌.ಕೈಮರ ವ್ಯಾಪ್ತಿಯಲ್ಲಿ ನೆಲೆಸಿದ್ದರು. ಹಾವುಗೊಲ್ಲರು, ಹಕ್ಕಿಪಿಕ್ಕಿ ಜನಾಂಗದವರು ಹೀಗೆ ಅಲೆಮಾರಿ ಜನಾಂಗದವರೆಲ್ಲ ಒಂದೇ ಕಡೆ ನೆಲೆ ನಿಂತಿದ್ದರು. ನಂತರ ಇವರಿಗೆ ತಾಲೂಕಿನ ಬಾಳೆ ಗ್ರಾಮ ಪಂಚಾಯತ್‌ ಸೀಗುವಾನಿ ಸರ್ಕಲ್‌ ಬಳಿ ಇರುವ ನಿವೇಶನದಲ್ಲಿ ಟೆಂಟ್‌ ನಿರ್ಮಿಸಿಕೊಂಡು ವಾಸ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಅದರಂತೆ ಅಲೆಮಾರಿಗಳು ಇಲ್ಲಿಯೇ ಟೆಂಟ್‌ ನಿರ್ಮಿಸಿಕೊಂಡು ತಮ್ಮ ಶಾಶ್ವತ ನೆಲೆಯನ್ನಾಗಿಸಿಕೊಂಡಿದ್ದರು.

ಈ ಕುಟುಂಬಗಳಿಗೆ ಪಡಿತರ ಚೀಟಿ, ಆಧಾರ್‌ ಕಾರ್ಡ್‌, ಅನಿಲ ಸಂಪರ್ಕ, ಸಾಮೂಹಿಕ ಶೌಚಾಲಯವನ್ನು ನಿರ್ಮಿಸಿಕೊಡಲಾಗಿತ್ತು. ಆದರೆ, ಮನೆ ನಿರ್ಮಿಸಿಕೊಳ್ಳಲು ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ಹಕ್ಕು ಪತ್ರ ಸಿಕ್ಕಿರಲಿಲ್ಲ. ಇವರಲ್ಲಿ ಅನೇಕರು ಹಾವಾಡಿಗ ವೃತ್ತಿ ಬಿಟ್ಟು ಬೇರೆ, ಬೇರೆ ವೃತ್ತಿಯಲ್ಲಿ ತೊಡಗಿಕೊಂಡು ಆರ್ಥಿಕವಾಗಿಯೂ ಸಬಲರಾಗಿದ್ದರು.

ಸಾವು ತಂದ ಭಯ:
ಆದರೆ, ಅಲೆಮಾರಿಗಳ ಕಾಲೋನಿಯಲ್ಲಿ ಸಂಭವಿಸಿದ ಸಾವುಗಳು ಇವರನ್ನು ಅಧೀರರನ್ನಾಗಿ ಮಾಡಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ 25 ಪುರುಷರು ಹಾಗೂ ನಾಲ್ವರು ಮಹಿಳೆಯರು ಸೇರಿ ಒಟ್ಟು 29 ಮಂದಿ ಮೃತಪಟ್ಟಿದ್ದರು. ಈ ರೀತಿ ಸಾವುಗಳು ಸಂಭವಿಸುತ್ತಿರುವುದರಿಂದ ಹೆದರಿದ ಕೆಲವರು ಜ್ಯೋತಿಷ್ಯ ಕೇಳಿಸಲು ಮುಂದಾದರು. ಬುಧವಾರ ಜ್ಯೋತಿಷಿಯೊಬ್ಬರ ಬಳಿ ತೆರಳಿ ಇದಕ್ಕೆ ಕಾರಣ ಏನು ಇರಬಹುದು ಎಂದು ಕೇಳಿದರು. ಅದಕ್ಕೆ  ಜ್ಯೋತಿಷಿ ನಿಮ್ಮ ದೇವರನ್ನು ಕಟ್ಟಿ ಹಾಕಿದ್ದಾರೆ. ಕೇರಳದಿಂದ ಮಾಟ ಮಾಡಿಸಿ ತಂದು ಇಟ್ಟಿದ್ದಾರೆ. ಇಲ್ಲಿಯೇ ಉಳಿದರೆ ಮೂರು ದಿನದಲ್ಲಿ ಇನ್ನೂ ಎರಡು ಬಲಿ ಬೀಳುತ್ತದೆ ಎಂದು ಹೇಳಿದ್ದರು.

Advertisement

ಈ ಮಾತಿನಿಂದ ಕಂಗಾಲಾದ ಗ್ರಾಮಸ್ಥರು ಗುರುವಾರ ಸಂಜೆ 6 ಗಂಟೆ ವೇಳೆಗೆ ತಾವು ಸಾಕಿರುವ ಕೋಳಿ, ಕುರಿಗಳನ್ನು ಬಿಟ್ಟು ಪಾತ್ರೆ, ಬಟ್ಟೆ ಸಮೇತ ಮನೆ ಖಾಲಿ ಮಾಡಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಕುಟುಂಬ ಊರನ್ನು ತೊರೆದು ಬೇರೆ ಕಡೆ ಗುಳೆ ಹೋಗಿದೆ.

ನಾವು ಇಲ್ಲಿ ಬಂದು ವಾಸಿಸಲು ಪ್ರಾರಂಭಿಸಿದ ಮೇಲೆ 29 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ ಜ್ಯೋತಿಷಿಗಳನ್ನು ಕೇಳಿದಾಗ ಇಲ್ಲಿ ಮಾಟ ಮಾಡಿದ್ದಾರೆ ಎಂದು ತಿಳಿದು ಬಂತು. ಅಲ್ಲದೆ ಇನ್ನು ಇಲ್ಲಿಯೇ ಇದ್ದರೆ ಇಬ್ಬರು ಸಾವನ್ನಪ್ಪುತ್ತಾರೆ ಎಂದು ತಿಳಿಸಿದ್ದಾರೆ. ಹಾಗಾಗಿ ಜೀವ ಉಳಿಸಿಕೊಳ್ಳಲು ಎಲ್ಲವನ್ನೂ ಬಿಟ್ಟು ಕೊಪ್ಪ, ನಾರ್ವೆ ಭಾಗಕ್ಕೆ ಹೋಗುತ್ತಿದ್ದೇವೆ. ಬೇರೆ ಕಡೆ ನಿವೇಶನ ನೀಡಿದರೆ ಮಾತ್ರ ವಾಪಸ್‌ ಊರಿಗೆ ಬರುತ್ತೇವೆ ಎಂದು ಅಲೆಮಾರಿಗಳು ಹೇಳುತ್ತಿದ್ದಾರೆ.

ಇಷ್ಟು ವರ್ಷ ವಾಸಮಾಡಿ ಮೂಢನಂಬಿಕೆಗೆ ಹೆದರಿ ಮನೆ ಖಾಲಿ ಮಾಡಿರುವುದು ವಿರ್ಪಯಾಸ. ಗ್ರಾಮಸ್ಥರ ಗಮನಕ್ಕೂ ತರದೆ ಇದ್ದಕ್ಕಿದಂತೆ ಗ್ರಾಮ ತೊರೆದಿರುವುದು ಬೇಸರದ ಸಂಗತಿ
– ಇ.ಸಿ ಸೇವಿಯಾರ್‌, ನಾಗಲಾಪುರ ಗ್ರಾಪಂ ಸದಸ್ಯ

15 ವರ್ಷಗಳಿಂದ ವಾಸವಿದ್ದರೂ ಅವರಿಗೆ ಮನೆ, ಹಕ್ಕು ಪತ್ರ ನೀಡಿಲ್ಲ. ಅವರ ಕುಟುಂಬಗಳಲ್ಲಿ ನಡೆದ ಅವಘಡಗಳ ಬಗ್ಗೆ ಮೂಢನಂಬಿಕೆ ಬಿತ್ತಿರುವುದರಿಂದ ಅವರು ಹೆದರಿದ್ದಾರೆ. ಅವರು ಕೊಪ್ಪ, ಸೇರಿದಂತೆ ಬೇರೆ, ಬೇರೆ ಊರುಗಳಿಗೆ ಹೋಗಿರುವ ಮಾಹಿತಿ ಇದೆ. ಅವರ ಮನವೊಲಿಸುವ ಪ್ರಯತ್ನ ಮಾಡಲಾಗುವುದು. ಬಂದರೆ ಕಂದಾಯ ಅ ಧಿಕಾರಿಗಳೊಂದಿಗೆ ಚರ್ಚಿಸಿ ಶಾಶ್ವತ ನೆಲೆ ಕಲ್ಪಿಸಲಾಗುವುದು.
– ಟಿ.ಡಿ.ರಾಜೇಗೌಡ, ಶಾಸಕ.

Advertisement

Udayavani is now on Telegram. Click here to join our channel and stay updated with the latest news.

Next