ನವದೆಹಲಿ: ರಾಜಧಾನಿಯಲ್ಲಿ ಕೋವಿಡ್ 19 ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದಿನಿಂದಲೇ ರಾತ್ರಿ ಕರ್ಫ್ಯೂ ಜಾರಿಗೊಳಿಸುವುದಾಗಿ ದೆಹಲಿ ಸರ್ಕಾರ ಮಂಗಳವಾರ(ಏಪ್ರಿಲ್ 06) ಘೋಷಿಸಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾತ್ರಿ 10ರಿಂದ ಬೆಳಗ್ಗಿನ ಜಾವ 5ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಇದು ಇಂದಿನಿಂದಲೇ ಅನುಷ್ಠಾನಗೊಳ್ಳಲಿದ್ದು, ಏಪ್ರಿಲ್ 30ರವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ದೆಹಲಿಯಲ್ಲಿ ಕೋವಿಡ್ ಸೋಂಕು ಪ್ರಕರಣ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದೆ. ಸೋಮವಾರ(ಏ.05) ದೆಹಲಿಯಲ್ಲಿ 3,548 ಪ್ರಕರಣ ವರದಿಯಾಗಿದ್ದು, 15 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದರು. ಸತತ ನಾಲ್ಕು ದಿನಗಳಿಂದ ದೆಹಲಿಯಲ್ಲಿ 3,500ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗುತ್ತಿದೆ.
ಭಾನುವಾರ 4,033 ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ರಾತ್ರಿ ಕರ್ಫ್ಯೂ ವಿಧಿಸುವ ಪ್ರಸ್ತಾಪವನ್ನು ರವಾನಿಸಲಾಗಿದೆ ಎಂದು ವರದಿಯಾದ ನಂತರ ಈ ಘೋಷಣೆ ಹೊರಬಿದ್ದಿರುವುದಾಗಿ ವರದಿ ತಿಳಿಸಿದೆ.
ದೆಹಲಿಯಲ್ಲಿ ನಾಲ್ಕನೇ ಹಂತದ ಕೋವಿಡ್ ಅಲೆ ಹರಡುತ್ತಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಹೇರುವ ಬಗ್ಗೆ ಯೋಚಿಸಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಟ್ವೀಟ್ ಮಾಡಿದ್ದರು.