Advertisement
ಸದಾ ಜನಜಂಗುಳಿಯಿಂದ ಗಿಜುಗುಡುತ್ತಿದ್ದ ನೈಜೀರಿಯದ ಓರಿಲ್ ನಗರದಲ್ಲಿ ಸದ್ಯ ನೀರವ ಮೌನ ನೆಲೆಸಿದೆ. ಹೊಟ್ಟೆಪಾಡಿಗಾಗಿ ಕಟ್ಟಿಕೊಂಡ ತಗಡಿನ ಅಂಗಡಿಗಳ ಬಾಗಿಲುಗಳು ತುಕ್ಕು ಹಿಡಿಯುತ್ತಿದ್ದು, ಜನರ ಸುಳಿವು, ಆರ್ಥಿಕ ಚಟುವಟಿಕೆಗಳಿಲ್ಲದೆ ರಸ್ತೆಗಳು ಭಣಗುಡುತ್ತಿವೆ.
ಜೀವನೋಪಾಯಕ್ಕಾಗಿ ನೈರ್ಮಲ್ಯ , ಕೂಲಿನಾಲಿ, ಮನೆಗೆಲಸ ಎಂಬಿತ್ಯಾದಿ ಅಸಂಘಟಿತ ವಲಯವನ್ನು ನಂಬಿಕೊಂಡಿದ್ದ ಇಲ್ಲಿನ ಸಾವಿರಾರು ಕುಟುಂಬಗಳು ಕೋವಿಡ್‌ನಿಂದಾಗಿ ಬೀದಿಗೆ ಬಿದ್ದಿವೆ. ಅಲ್ಲದೆ ಕ್ಷೀರೋತ್ಪನ್ನ ಕಾರ್ಖಾನೆಗಳು ಕೂಡ ಕಾರ್ಯಾಚರಣೆಯನ್ನು ನಿಲ್ಲಿಸಿರುವುದರಿಂದ ಜನರು ಆದಾಯವಿಲ್ಲದೆ ಪರದಾಡುತ್ತಿದ್ದಾರೆ. ಈ ಬಿಕ್ಕಟ್ಟಿನ ನಡುವೆಯೇ ನಗರದಲ್ಲಿ ಗುಂಪು ಘರ್ಷಣೆ, ದರೋಡೆ ಮತ್ತು ಕೊಲೆಗಳಂತಹ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಹಗಲು ಗಳಿಕೆಗಾಗಿ ಏನು ಮಾಡುವುದು ಎಂಬ ಚಿಂತೆಯಾದರೆ, ರಾತ್ರಿ ಕಳ್ಳಕಾಕರಿಂದ ರಕ್ಷಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ. ಸದ್ಯ ರೋಗದ ವಿರುದ್ಧ ಹೋರಾಡುವುದೋ ಅಥವಾ ಡಕಾಯಿತರಿಂದ ರಕ್ಷಿಸಿಕೊಳ್ಳುವುದೋ ತಿಳಿಯುತ್ತಿಲ್ಲ ಎಂದು ಜನರು ತಮ್ಮ ದುಗುಡವನ್ನು ದಿ ಗಾರ್ಡಿಯನ್ ಜತೆ ಹಂಚಿಕೊಂಡಿದ್ದಾರೆ. ಕರ್ತವ್ಯ ಮರೆತ ಅಧಿಕಾರಿಗಳು
ಸೋಂಕಿನಿಂದ ಆಫ್ರಿಕ ದೇಶಗಳ ಆರೋಗ್ಯ ವ್ಯವಸ್ಥೆ ಮತ್ತಷ್ಟು ದುರ್ಬಲವಾಗಿದ್ದು, ಮುಂಬರುವ ದಿನಗಳಲ್ಲಿ ಏಡ್ಸ್, ಟಿಬಿ , ದಡಾರದಂತಹ ಮಾರಣಾಂತಿಕ ಕಾಯಿಲೆಗಳಿಗೆ ತೆರೆದುಕೊಳ್ಳಲಿದೆ ಎಂಬ ಎಚ್ಚರಿಕೆಯನ್ನು ವಿಶ್ವಸಂಸ್ಥೆ ನೀಡಿದೆ. ಆದರೂ ಎಚ್ಚೆತ್ತುಕೊಳ್ಳದ ಸರಕಾರ ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ.
Related Articles
Advertisement
ಲಾಕ್‌ಡೌನ್ ಕ್ರಮಗಳು ಬಿಗಿ ಆಗುತ್ತ ಹೋದಂತೆ ಲಾಗೋಸ್ ರಾಜ್ಯ ಸರಕಾರ ಬಡ ಪ್ರದೇಶಗಳಿಗೆ ಆಹಾರ ಸೇರಿದಂತೆ ಕೆಲ ಅಗತ್ಯ ಸಾಮಗ್ರಿಗಳನ್ನು ನೀಡುವುದಾಗಿ ಘೋಷಿಸಿತ್ತು. ಆದರೆ ವಾಸ್ತವದಲ್ಲಿ ಆ ನೆರವು ನಾಮಕಾವಸ್ಥೆಯ ಘೋಷಣೆಯಾಗಿದ್ದು, ಎಲ್ಲರಿಗೂ ಸಿಕ್ಕಿಲ್ಲ.
ಜನರು ಸೋಂಕಿನ ಭಯಕ್ಕಿಂತ ಹಸಿವಿನ ಸಂಕಟದಿಂದ ನರಳುತ್ತಿದ್ದಾರೆ. ನಮಗೆ ವೈರಸ್‌ನ ಹೆದರಿಕೆ ಇಲ್ಲ. ಆದರೆ ಅದು ಹುಟ್ಟು ಹಾಕಿದ ಹಸಿವಿನ ಭಯ ಕಾಡುತ್ತಿದೆ. ಮಕ್ಕಳು ಮರಿಗಳ ಹಸಿವಿನ ಆಕ್ರಂದನ ಸಹಿಸಲಾಗುತ್ತಿಲ್ಲ ಎನ್ನುತ್ತಿದ್ದಾರೆ ಇಲ್ಲಿನ ತಾಯಂದಿರು.
ನೈಜೀರಿಯದಲ್ಲಿ ಕಳೆದ 10 ದಿನಗಳಲ್ಲಿ ದೇಶಾದ್ಯಂತ ಹೊಸ ಪ್ರಕರಣಗಳ ಪ್ರಮಾಣ ದುಪ್ಪಟ್ಟಾಗಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ.