ಮುಂಬಯಿ: ಯುರೋಪ್ ಸೇರಿದಂತೆ ಜಾಗತಿಕವಾಗಿ ಒಮಿಕ್ರಾನ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿದ್ದು, ಇದರಿಂದ ಆರ್ಥಿಕ ಹೊಡೆತ ಬೀಳಲಿದೆ ಎಂಬ ಆತಂಕದ ಪರಿಣಾಮ ಸೋಮವಾರ (ಡಿಸೆಂಬರ್ 20) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಪಾತಾಳಕ್ಕೆ ಕುಸಿದಿದ್ದು, ಹೂಡಿಕೆದಾರರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.
ಇದನ್ನೂ ಓದಿ:ಪ್ರಕ್ರಿಯೆಗಳು ನಡೆಯುತ್ತಲೇ ಇರುತ್ತವೆ : ಸಿಎಂ ಹೇಳಿಕೆಗೆ ಯತ್ನಾಳ್ ಪ್ರತಿಕ್ರಿಯೆ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 1,300 ಅಂಕಗಳಷ್ಟು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ. ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 1,329.70 ಅಂಕ ಕುಸಿತದೊಂದಿಗೆ 55,682.04 ಅಂಕಗಳಲ್ಲಿ ವಹಿವಾಟು ನಡೆಸಿದೆ.
ಎನ್ ಎಸ್ ಇ ನಿಫ್ಟಿ 402.70 ಅಂಕಗಳಷ್ಟು ಕುಸಿತಗೊಂಡಿದ್ದು, 16,582.50 ಅಂಕಗಳ ಮಟ್ಟ ತಲುಪಿದೆ. ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 1,100 ಅಂಕಗಳಷ್ಟು ಕುಸಿತಗೊಂಡಿದ್ದರೆ, ಎನ್ ಎಸ್ ಇ ನಿಫ್ಟಿ 300 ಅಂಕಗಳಷ್ಟು ಇಳಿಕೆಯಾಗಿತ್ತು.
ಬಜಾಜ್ ಫೈನಾನ್ಸ್, ಬಜಾಜ್ ಫಿನ್ ಸರ್ವ್, ಇಂಡಸ್ ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟಾಟಾ ಸ್ಟೀಲ್, ಎಚ್ ಡಿಎಫ್ ಸಿ ಬ್ಯಾಂಕ್, ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಶೇ.4ರಷ್ಟು ನಷ್ಟ ಕಂಡಿದೆ.
ಮತ್ತೊಂದೆಡೆ ಪವರ್ ಗ್ರಿಡ್ ಕಾರ್ಪೋರೇಶನ್, ವಿಪ್ರೋ ಮತ್ತು ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಷೇರುಗಳು ಲಾಭಗಳಿಸಿದೆ. ವಿದೇಶಿ ಬಂಡವಾಳದ ಹೊರ ಹರಿವು, ಜಾಗತಿಕವಾಗಿ ಒಮಿಕ್ರಾನ್ ಪ್ರಕರಣ ಹೆಚ್ಚಳವಾಗುತ್ತಿರುವುದು ಷೇರುಪೇಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.