Advertisement

ಹತ್ತೇ ತಾಸುಗಳಲ್ಲಿ ನಿಫಾ ದೃಢಪಡಿಸಿದೆವು: ಡಾ|ಅರುಣ್‌

06:00 AM May 23, 2018 | Team Udayavani |

ಉಡುಪಿ: ಕೇರಳದಲ್ಲಿ ಆತಂಕ ಸೃಷ್ಟಿಸಿರುವ ನಿಫಾ ವೈರಸನ್ನು ಮಣಿಪಾಲದಲ್ಲಿ ಅತ್ಯಂತ ಕ್ಷಿಪ್ರವಾಗಿ ಪತ್ತೆ ಹಚ್ಚಲಾಗಿತ್ತು. ಅಪರೂಪದ ಈ ಕಾಯಿಲೆ ಬಗ್ಗೆ ಮಾಹಿತಿ ಬಂದ 10 ತಾಸುಗಳೊಳಗೆ ವೈರಸ್‌ ಪತ್ತೆ ಸಾಧ್ಯವಾಗಿದೆ. ಈ ಕೂಡಲೇ ಕ್ರಮ ಕೈಗೊಂಡಿರುವುದರಿಂದ ಈಗ ನಿಫಾ ಸೋಂಕು ಕೇರಳದಲ್ಲಿ ಒಂದು ಹಂತದ ನಿಯಂತ್ರಣಕ್ಕೆ ಬಂದಿದೆ ಎಂದು ಕೇರಳ ಸರ ಕಾರದ ಜತೆಗಿನ ವೈದ್ಯಕೀಯ, ಸಂಶೋಧಕರ ತಂಡದಲ್ಲಿರುವ ಮಣಿಪಾಲ್‌ ಸೆಂಟರ್‌ ಫಾರ್‌ ವೈರಸ್‌ ರಿಸರ್ಚ್‌ (ಎಂಸಿವಿಆರ್‌) ನ ಮುಖ್ಯಸ್ಥ ಡಾ| ಅರುಣ್‌ ಕುಮಾರ್‌ ತಿಳಿಸಿದ್ದಾರೆ.

Advertisement

ನಿಫಾದಂತಹ ವೈರಸ್‌ ರೋಗಗಳನ್ನು ಪತ್ತೆ ಹಚ್ಚಲು ಬೇಕಾದ ಪ್ರಯೋಗಾಲಯಗಳು ಮಣಿಪಾಲದ ಕೆಎಂಸಿ, ಪುಣೆಯಲ್ಲಿ ಮಾತ್ರವೇ ಇವೆ. ನಮಗೆ ಬಂದ ಸ್ಯಾಂಪಲ್‌ಗ‌ಳ ಕುರಿತಾದ ವರದಿಯನ್ನು ಅತ್ಯಂತ ಕ್ಷಿಪ್ರವಾಗಿ ನೀಡಿದ್ದೇವೆ. ಮೇ18ರಂದೇ ವೈರಸ್‌ ಪತ್ತೆ ಹಚ್ಚಿದ್ದೇವೆ. ಅಪರೂಪದ ವೈರಸ್‌ ಆಗಿರುವುದರಿಂದ ಅದನ್ನು ಪುಣೆಯ ಲ್ಯಾಬ್‌ನಲ್ಲಿಯೂ ಮತ್ತೂಮ್ಮೆ ಖಚಿತ ಪಡಿಸಿಕೊಳ್ಳಲು ನಿರ್ಧರಿಸಲಾಯಿತು. ಪುಣೆಯಿಂದ ವರದಿ ಬಂದ ಅನಂತರವೇ ಪ್ರಕಟಿಸಲಾಯಿತು. ಕ್ಷಿಪ್ರ ವರದಿಯಿಂದಾಗಿ ಸರಕಾರ ಕೂಡ ಅಗತ್ಯ ಕ್ರಮ ತೆಗೆದುಕೊಳ್ಳಲು ಸಾಧ್ಯವಾಯಿತು. ಈಗ ಪರಿಸ್ಥಿತಿ ಒಂದು ಹಂತದ ನಿಯಂತ್ರಣಕ್ಕೆ ಬಂದಿದೆ ಎಂದು ಡಾ| ಅರುಣ್‌ ಕುಮಾರ್‌ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಒಂದು ಕುಟುಂಬ ಮಾತ್ರ:
ಒಂದು ನಿರ್ದಿಷ್ಟ ಪ್ರದೇಶದ ಒಂದೇ ಕುಟುಂಬದ ನಾಲ್ವರಿಗೆ ಸೋಂಕು ತಗಲಿದೆ. ಇದು ಯಾವ ರೀತಿ ತಗಲಿತು ಎಂಬುದರ ಬಗ್ಗೆ ಇನ್ನೂ ಅಧ್ಯಯನ ನಡೆಸುತ್ತಿದ್ದೇವೆ. ಇವರು ದಾಖಲಾದ ಎರಡು ಆಸ್ಪತ್ರೆಗಳಲ್ಲಿದ್ದ ಇತರ ಕೆಲವು ರೋಗಿಗಳಿಗೆ ಹಾಗೂ ಶುಶ್ರೂಷಕಿಯರಿಗೆ ಸೋಂಕು ತಗಲಿತು. ಎರಡನೇ ಪ್ರಕರಣ ದಾಖಲಾದ ಕೂಡಲೇ ವೈರಸ್‌ ಪತ್ತೆ ಹಚ್ಚಿ ಮುಂಜಾಗರೂಕತೆ ಕ್ರಮ ಕೈಗೊಂಡಿದ್ದರಿಂದ ನಿಫಾ ಹೆಚ್ಚು ಪ್ರಸರಣವಾಗಿಲ್ಲ. ಆತಂಕ ಬೇಕಾಗಿಲ್ಲ, ಸೂಕ್ತ ಎಚ್ಚರಿಕೆ ಬೇಕು. ಎರಡೂ ಆಸ್ಪತ್ರೆಗಳಲ್ಲಿ ಕೂಡ “ಪ್ರತ್ಯೇಕ ವಾರ್ಡ್‌’ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 12 ಮಂದಿಗೆ ಸೋಂಕು ತಗಲಿದ್ದು, ಇವರಲ್ಲಿ 10 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

ಮೇ 19ರಿಂದ ಸೇವೆ
ಕೇರಳ ಸರಕಾರದ ತುರ್ತು ಆಹ್ವಾನದ ಮೇರೆಗೆ ಮೇ 19ರಂದು ಮಣಿಪಾಲದಿಂದ ಹೊರಟು ಸೇವೆ ಆರಂಭಿಸಿದ್ದೇವೆ. ಮಣಿಪಾಲ್‌ ಲ್ಯಾಬ್‌ನ 4-5 ಮಂದಿ ತಜ್ಞರು, ಸಿಬಂದಿಯ ಜತೆಗೆ ನಾನು ಕೋಯಿಕ್ಕೋಡ್‌ನ‌ಲ್ಲಿ ಸೇವಾನಿರತರಾಗಿದ್ದೇವೆ. ಮಣಿಪಾಲ ಲ್ಯಾಬ್‌ನಲ್ಲಿಯೂ ಹಲವು ಮಂದಿ ತಜ್ಞರು ಪರೀಕ್ಷೆಯಲ್ಲಿ ತೊಡಗಿಕೊಂಡಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಗೋವಾ ಮೊದಲಾದೆಡೆ ವಿವಿಧ ರೀತಿಯ ವೈರಸ್‌ ರೋಗಗಳು ಹರಡಿದ್ದಾಗ ಕೂಡ ಸೇವೆ ಸಲ್ಲಿಸಿದ್ದೇನೆ ಎಂದು ಡಾ| ಅರುಣ್‌ ಕುಮಾರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next