Advertisement

ಕೂಟೇಲು ಕಿಂಡಿ ಅಣೆಕಟ್ಟು : ಹಲಗೆ ಅಳವಡಿಸಲು ನಿರಾಸಕ್ತಿ

04:42 AM Dec 30, 2018 | |

ನಿಡ್ಪಳ್ಳಿ : ಇಲ್ಲಿಯ ಕೂಟೇಲು ಎಂಬಲ್ಲಿರುವ ಕಿಂಡಿ ಅಣೆಕಟ್ಟಿಗೆ ಇನ್ನೂ ಹಲಗೆಗಳನ್ನು ಅಳವಡಿಸದ ಕಾರಣ ನೀರು ಹರಿದು ಹೋಗುತ್ತಿದ್ದು, ಫ‌ಲಾನುಭವಿಗಳ ಕೃಷಿಗೆ ಈ ಬೇಸಗೆಯಲ್ಲಿ ನೀರಿನ ಕೊರತೆ ಎದುರಾಗುವ ಆತಂಕ ಗೋಚರಿಸಿದೆ.

Advertisement

ಪುತ್ತೂರು ಶಾಸಕರಾಗಿದ್ದ ಮಲ್ಲಿಕಾ ಪ್ರಸಾದ್‌ ಅವರ ಅವಧಿಯಲ್ಲಿ ಈ ಭಾಗದ ಜನರ ಬೇಡಿಕೆಯಂತೆ ಸಣ್ಣ ನೀರಾವರಿ ಇಲಾಖೆಯ ಅನುದಾನವನ್ನು ಬಳಸಿಕೊಂಡು ಕಿಂಡಿ ಅಣೆಕಟ್ಟು ನಿರ್ಮಿಸಲಾಗಿತ್ತು. ಅನಂತರ ಅದಕ್ಕೆ ಅಳವಡಿಸಲು ಹಲಗೆಗಳನ್ನೂ ಒದಗಿಸಲಾಗಿತ್ತು. ಫೆಬ್ರವರಿ ತನಕ ಹರಿವು ಇರುವ ಕಾರಣ ಡಿಸೆಂಬರ್‌ ತಿಂಗಳಿನಲ್ಲಿ ಹಲಗೆ ಅಳವಡಿಸಿದರೆ ಇಲ್ಲಿ ಸಾಕಷ್ಟು ನೀರು ಸಂಗ್ರಹವಾಗುತ್ತಿತ್ತು. ಸುತ್ತಲಿನ ಸುಮಾರು ಅರ್ಧ ಕಿ.ಮೀ. ದೂರದ ವರೆಗೆ ಇರುವ ತೋಟ ಹಾಗೂ ಕೃಷಿ ಭೂಮಿಯಲ್ಲಿ ಅಂತರ್ಜಲವೂ ವೃದ್ಧಿಯಾಗಿ ನೀರು ಹಾಯಿಸುವ ಕೆಲಸ ಕಡಿಮೆಯಾಗುತ್ತಿತ್ತು. ಆಸುಪಾಸಿನ ಬಾವಿಗಳಲ್ಲೂ ಅಂತರ್ಜಲ ಮಟ್ಟ ಹೆಚ್ಚುತ್ತಿತ್ತು.

ಕಳೆದ ವರ್ಷದ ತನಕ ಹಲಗೆ ಜೋಡಿಸಲು ಬರುತ್ತಿದ್ದವರು ಈ ಬಾರಿ ನಿರಾಸಕ್ತಿ ತಾಳಿದ್ದರಿಂದ ನೀರು ಸಂಗ್ರಹ ಶೂನ್ಯವಾಗಿದೆ.

ಸರಕಾರ ಮೂಲಸೌಕರ್ಯಗಳನ್ನು ಒದಗಿಸಿದರೂ ಅದನ್ನು ಉಪಯೋಗಿಸಲು ಸ್ಥಳೀಯರು ಆಸಕ್ತಿ ವಹಿಸದಿರುವುದು ಅಚ್ಚರಿ ಮೂಡಿಸುತ್ತಿದೆ. ಇಲ್ಲಿ ಹಲಗೆ ಅಳವಡಿಸಲು ಹಾಗೂ ಕಿಂಡಿ ಅಣೆಕಟ್ಟನ್ನು ನಿರ್ವಹಿಸಲು ಸಮಿತಿಯ ರಚನೆಯಾಗಿದೆ. ಈ ಸಮಿತಿಯ ಸದಸ್ಯರೇ ಹಲಗೆ ಹಾಕುವ ಹಾಗೂ ಮಳೆಗಾಲದ ಆರಂಭದಲ್ಲಿ ಅವುಗಳನ್ನು ತೆಗೆದು ಸಂರಕ್ಷಿಸುವ ಕೆಲಸ ಮಾಡುತ್ತಿದ್ದರು. ಆದರೆ, ಈ ಬಾರಿ ಡಿಸೆಂಬರ್‌ ತಿಂಗಳು ಕಳೆದರೂ ಹಲಗೆ ಅಳವಡಿಸಲು ಇಚ್ಛಾಶಕ್ತಿ ಪ್ರದರ್ಶಿಸಿಲ್ಲ. ನೀರು ಹರಿದು ಹೋಗುತ್ತಿದೆ. ಹೊಳೆಯಲ್ಲಿ ನೀರು ಹರಿವಿನ ಪ್ರಮಾಣ ಕ್ಷೀಣಿಸುತ್ತಿದ್ದು, ರೈತರನ್ನು ಆತಂಕಕ್ಕೆ ತಳ್ಳಿದೆ. 

ತೋಟಕ್ಕೆ ತೊಂದರೆ
ಅಣೆಕಟ್ಟು ಕಟ್ಟಿ ನೀರು ತೋಟದೊಳಗೆ ಬರುತ್ತದೆ. ಇದರಿಂದ ಅಡಿಕೆ ಹೆಕ್ಕಲು ಆಗುತ್ತಿಲ್ಲ ಮತ್ತು ಅಡಿಕೆ ಮರದ ಬೇರು ಕೊಳೆಯುವ ಸ್ಥಿತಿ ಉಂಟಾಗಿ ಮರ ಸಾಯುತ್ತದೆ. ಇದರಿಂದ ಹಲಗೆ ಹಾಕಲು ಮನಸ್ಸಿಲ್ಲ.
 - ಚನಿಯಪ್ಪ ಪೂಜಾರಿ ಸ್ಥಳೀಯರು

Advertisement

 ಸಹಕಾರ ನೀಡುತ್ತಿಲ್ಲ
ಪ್ರತಿವರ್ಷ ಮಳೆ ಕಡಿಮೆಯಾದ ಕೂಡಲೇ ಹಲಗೆ ಹಾಕಲಾಗುತ್ತಿತ್ತು. ಆದರೆ ಈ ಸಲ ಸಮಿತಿಯ ಸದಸ್ಯರು ಸಹಕಾರ ನೀಡುತ್ತಿಲ್ಲ. ಹೀಗಾಗಿ, ಹಲಗೆ ಜೋಡಿಸಿಲ್ಲ.
– ವಿಶ್ವನಾಥ ಕೆ., ಅಧ್ಯಕ್ಷರು,
ಹಲಗೆ ಜೋಡಣ ಸಮಿತಿ

ಗಂಗಾಧರ ಸಿ.ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next