ಪುತ್ತೂರು: ನಿಡ್ಪಳ್ಳಿ ಗ್ರಾಮ ಪಂಚಾಯತ್‌ನ ತೆರವಾದ ಸ್ಥಾನಕ್ಕೆ ಜು. 23ರಂದು ನಡೆಯಲಿರುವ ಉಪಚುನಾವಣೆಗೆ ಪುತ್ತಿಲ ಪರಿವಾರದ ಅಭ್ಯರ್ಥಿ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಜತೆಗೆ ಆರ್ಯಾಪು ಗ್ರಾ.ಪಂ.ನ ತೆರವಾದ ಸ್ಥಾನಕ್ಕೂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿರುವುದು ಪುತ್ತೂರು ರಾಜಕೀಯ ಪಡಸಾಲೆ ಯಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನಾಯಕರ ಧೋರಣೆಯ ವಿರುದ್ಧ ಸೆಟೆದು ನಿಂತು ಪಕ್ಷೇತರನಾಗಿ ಸ್ಪರ್ಧಿಸಿದ್ದ ಅರುಣ್ ಪುತ್ತಿಲ 62 ಸಾವಿರಕ್ಕೂ ಅಧಿಕ ಮತ ಪಡೆಯುವ ಮೂಲಕ ತನ್ನ ಛಾಪು ಮೂಡಿಸಿದ್ದರು. ಅದಾದ ಬಳಿಕ ಅರುಣ್ ಪುತ್ತಿಲ ಪರ ಜಿಲ್ಲೆಯಾದ್ಯಂತ ಬೆಂಬಲ ವ್ಯಕ್ತವಾಗಿತ್ತು.
ಕೆಲವು ದಿನಗಳ ಹಿಂದೆಯಷ್ಟೇ ಬಿಜೆಪಿ ರಾ. ಸಂಘಟನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ದಿಲ್ಲಿಯಲ್ಲಿ ಅರುಣ್ ಪುತ್ತಿಲ ಪರಿವಾರದವರು ಭೇಟಿಯಾ ಗಿದ್ದರು. ಇದರಿಂದ ಬಿಜೆಪಿಯಲ್ಲಿ ಪುತ್ತಿಲ ಅವರಿಗೆ ಸೂಕ್ತಸ್ಥಾನ ನೀಡುವ ನಿರೀಕ್ಷೆ ಮೂಡಿತ್ತು. ಆದರೆ ಗ್ರಾ.ಪಂ. ಉಪ ಚುನಾವಣೆಯಲ್ಲಿ ಪುತ್ತಿಲ ಪರಿ ವಾರ ದಿಂದ ಪ್ರತ್ಯೇಕ ಅಭ್ಯರ್ಥಿ ಗಳು ಕಣಕ್ಕಿಳಿದಿದ್ದು ಮಾತುಕತೆ ಫಲ ಪ್ರದ ವಾಗಿಲ್ಲ ಅನ್ನುವುದನ್ನು ಪುಷ್ಟೀಕರಿಸುತ್ತಿದೆ.
ನಾಮಪತ್ರ ಸಲ್ಲಿಕೆ
ನಿಡ್ಪಳ್ಳಿ ಗ್ರಾ.ಪಂ.ನ ವಾರ್ಡ್ 2ರಲ್ಲಿ ಪುತ್ತಿಲ ಪರಿವಾರದ ಅಭ್ಯರ್ಥಿಯಾಗಿ ಜಗನ್ನಾಥ ರೈ ಕೊಳೆಂಬೆತ್ತಿಮಾರು ಸೋಮ ವಾರ ನಾಮಪತ್ರ ಸಲ್ಲಿಸಿ ದರು. ಅರುಣ್ ಕುಮಾರ್ ಪುತ್ತಿಲ, ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತಾ, ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ, ಉಪಸ್ಥಿತರಿದ್ದರು. 26ರಂದು ಮತ ಎಣಿಕೆ ನಡೆಯಲಿದೆ.