Advertisement

ನಿಡಶೇಷಿ ಫಾರ್ಮ್ ಪರಿಶೀಲನೆ

04:10 PM Sep 21, 2018 | Team Udayavani |

ಕುಷ್ಟಗಿ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ನ. 1ರಂದು ತಾಲೂಕಿನ ನಿಡಶೇಷಿ ಗ್ರಾಮದ ಸಸ್ಯ ಕ್ಷೇತ್ರದಲ್ಲಿ ಇಸ್ರೇಲ್‌ ತಂತ್ರಜ್ಞಾನ ಆಧಾರಿತ ತೋಟಗಾರಿಕೆ ಫಾರಂ ಲೋಕಾರ್ಪಣೆಗೊಳಿಸುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ. ಸುನೀಲ್‌ಕುಮಾರ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

Advertisement

ಈ ವೇಳೆ ತೋಟಗಾರಿಕೆ ಉಪ ನಿರ್ದೇಶಕ ಕೃಷ್ಣಾ ಉಕ್ಕುಂದ ಅವರು ಮಾತನಾಡಿ, ಇಸ್ರೇಲ್‌ ತಂತ್ರಜ್ಞಾನ ಮಾದರಿಯನ್ನು ಆಧರಿಸಿ ಈ ಭಾಗದಲ್ಲಿ ಬೆಳೆಯುವ ಸೀತಾಫಲ, ರಾಮಫಲ, ಕರೋಂಡ, ಹುಣಸೆ, ಗೋಡಂಬಿ, ಹಲಸು ತಾಕುಗಳನ್ನು ಪಾಲಿಹೌಸ್‌ನಲ್ಲಿ ಬೆಳೆಸುವ ಉದ್ದೇಶ ಹೊಂದಲಾಗಿದೆ. ಇಲ್ಲಿ ಬೆಳೆದ ನರ್ಸರಿಯನ್ನು ರೈತರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡುವ ಉದ್ದೇಶ ಹೊಂದಲಾಗಿದೆ. ಕಡಿಮೆ ನೀರಿನಲ್ಲಿ ತೋಟಗಾರಿಕೆ, ತರಕಾರಿ ಬೆಳೆಸುವ ಕುರಿತು ಪ್ರಾತ್ಯಕ್ಷಿತೆ, ತರಬೇತಿ, ತೋಟಗಾರಿಕೆ ಉತ್ಪನ್ನಗಳ ಮಾರಾಟ ವ್ಯವಸ್ಥೆ ಮಾಡಲಾಗುವುದು. ರಾಜ್ಯದಲ್ಲಿಯೇ ಮಾದರಿ ತೋಟಗಾರಿಕೆ ಫಾರ್ಮ್ ಆಗಲಿದ್ದು, ಫಾರ್ಮ್ ಅಭಿವೃದ್ಧಿಯಾದರೆ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ ಎಂದು ಜಿಲ್ಲಾಧಿಕಾರಿಗೆ ವಿವರಿಸಿದರು.

ಜಿಲ್ಲಾಧಿಕಾರಿ ಸುನೀಲಕುಮಾರ ಮಾತನಾಡಿ, ಸರಕಾರಿ ಕೆಲಸಗಳಿಗೆ ವಿನಾಕಾರಣ ಅಡ್ಡಿಪಡಿಸುವುದು ಕಾನೂನು ಬಾಹಿರವಾಗುತ್ತದೆ. ಕಾಮಗಾರಿಗಳಲ್ಲಿ ಲೋಪ, ಹಣ ದುರ್ಬಳಕೆಯಾಗುತ್ತಿದ್ದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಬೇಕು. ಇದನ್ನು ಬಿಟ್ಟು ಕೆಲಸ ನಡೆಯುವ ಸ್ಥಳಕ್ಕೆ ಬಂದು ಅಡ್ಡಿಪಡಿಸುವುದು ಸರಿಯಲ್ಲ ಎಂದು ಸ್ಥಳದಲ್ಲಿದ್ದ ಎಸ್‌ಐ ವಿಶ್ವನಾಥ ಹಿರೇಗೌಡ್ರ ಅವರಿಗೆ ಸೂಚನೆ ನೀಡಿದರು. ಕಾಮಗಾರಿಗೆ ಅಡ್ಡಿಪಡಿಸುತ್ತಿರುವ ಬಗ್ಗೆ ತೋಟಗಾರಿಕೆ ಅಧಿಕಾರಿಗಳು ದೂರು ನೀಡಿದ ತಕ್ಷಣ ಸ್ಪಂದಿಸಿ ಕಿರುಕುಳ ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೆಲಸ ಮುಗಿಯುವವರೆಗೆ ಪೊಲೀಸ್‌ ಸಿಬ್ಬಂದಿ ಇಲ್ಲಿಗೆ ಆಗಾಗ ಬಂದು ಹೋಗುವಂತೆ ವ್ಯವಸ್ಥೆ ಮಾಡಬೇಕು ಎಂದರು.

ಸ್ಥಳದಲ್ಲಿದ್ದ ಸ್ಥಳೀಯರು ‘ತಮಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ಸ್ಥಳೀಯರು ಯಾರೂ ತೋಟಗಾರಿಕೆ ಫಾರಂ ನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಅಡ್ಡಿಪಡಿಸಿಲ್ಲ. ಆವರಣಗೋಡೆ ಕಾಮಗಾರಿ ತೀರಾ ಕಳಪೆಯಾಗುತ್ತಿದೆ. ಬುನಾದಿಗೆ ಕಲ್ಲುಪುಡಿಯನ್ನು ಹಾಕಿ ಸಿಮೆಂಟ್‌ ಮಿಶ್ರಣ ಮಾಡದೇ ಬೇಸ್‌ಮೆಂಟ್‌ ಹಾಕಲಾಗುತ್ತಿದೆ. ದೊಡ್ಡ ಮೊತ್ತದ ಕಾಮಗಾರಿ ಕಳಪೆಯಾಗಬಾರದು ಎನ್ನುವುದು ಸ್ಥಳೀಯರ ಕಳಕಳಿಯಾಗಿದೆ’ ಎಂದು ವಿವರಿಸಿದರು.

ಸ್ಥಳದಲ್ಲಿದ್ದ ತೋಟಗಾರಿಕೆ ಉಪನಿರ್ದೇಶಕ ಕೃಷ್ಣಾ ಉಕ್ಕುಂದ ಮಾತನಾಡಿ, ಕೆಲವರು ಸಸಿಗಳನ್ನು ಕಿತ್ತು ಹಾಕಿರುವ, ಪೈಪ್‌ಲೈನ್‌ ಹಾಳು ಮಾಡಿರುವ ಫೋಟೋ ಸಹಿತ ದಾಖಲೆಗಳಿವೆ. ಆವರಣ ಗೋಡೆ ಕಳಪೆಯಾಗುತ್ತಿರುವುದು ಗಮನಕ್ಕೆ ಬಂದಿದ್ದು, ತೋಟಗಾರಿಕೆ ಇಲಾಖೆಯ ಇಂಜನಿಯರಿಂಗ್‌ ವಿಭಾಗಕ್ಕೆ ಪತ್ರ ಬರೆದು ಪರಿಶೀಲನೆ ನಡೆಸಿ ವರದಿ ಸಲ್ಲಿಸುವವರೆಗೆ ಬಿಲ್‌ ಪಾವತಿಸದಂತೆ ಸಮಾಜಾಯಿಷಿ ನೀಡಿದರು.

Advertisement

ತಹಶೀಲ್ದಾರ್‌ ಕೆ.ಎಂ. ಗುರುಬಸವರಾಜ, ತೋಟಗಾರಿಕೆ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ್‌, ಆರ್‌ಐ ಶರಣಯ್ಯಸ್ವಾಮಿ, ವಿ.ಎ. ರಮೇಶ ತಾಳಕೇರಿ, ತಾಪಂ ಸದಸ್ಯ ಚನ್ನಪ್ಪ ಮೇಟಿ, ಗ್ರಾಪಂ ಸದಸ್ಯರಾದ ಶರಣಪ್ಪ ಹಾವರಗಿ, ಪರಶುರಾಮ ಹಾವರಗಿ, ಪ್ರಮುಖರಾದ ಗೋವಿಂದಪ್ಪ ಹಾವರಗಿ, ಮಂಜುನಾಥ ಕರಿಭೀಮಪ್ಪನವರ್‌, ಹನುಮಪ್ಪ ಅಗಸಿಮುಂದಿನ, ಪರಶುರಾಮ ಅಗಸಿಮುಂದಿನ ಇತರರಿದ್ದರು.

ಗ್ರಾಮಸ್ಥರ ತರಾಟೆ
ಜಿಲ್ಲಾಧಿಕಾರಿ ಸ್ಥಳದಿಂದ ನಿರ್ಗಮಿಸುತ್ತಿದ್ದಂತೆ ಸ್ಥಳೀಯರು ತೋಟಗಾರಿಕೆ ಉಪನಿರ್ದೇಶಕ ಕೃಷ್ಣಾ ಉಕ್ಕುಂದ್‌ ಅವರನ್ನು ತರಾಟೆ ತೆಗೆದುಕೊಂಡರು. ಆವರಣಗೋಡೆ ಕಾಮಗಾರಿ ಕಳಪೆಯಾಗುತ್ತಿರುವ ಬಗ್ಗೆ ದೂರಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಫಾರ್ಮ್ನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಗೆ ಸ್ಥಳೀಯರು ಅಡ್ಡಿಪಡಿಸುತ್ತಾರೆ ಎಂದು ಹೇಳಿರುವುದು ಸರಿಯಲ್ಲ ಎಂದು ವಾದಿಸಿದರು. ಎಸ್‌ಐ ವಿಶ್ವನಾಥ ಹಿರೇಗೌಡ್ರ ಮಧ್ಯೆ ಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next