Advertisement

ನೈಸ್‌ ರಸ್ತೆಯಲ್ಲಿ ಮೆಟ್ರೋ: ವರದಿ ನೀಡಲು ಸೂಚನೆ

12:26 PM Dec 11, 2018 | Team Udayavani |

ಬೆಂಗಳೂರು: ನೈಸ್‌ ರಸ್ತೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) “ನಮ್ಮ ಮೆಟ್ರೋ’ ಯೋಜನೆ ಜಾರಿಗೊಳಿಸುವ ಸಾಧಕ-ಬಾಧಕಗಳ ಕುರಿತು ವರದಿ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (ಬಿಎಂಆರ್‌ಸಿ) ಸೂಚಿಸಿದೆ.

Advertisement

ಭೂಸ್ವಾಧೀನದಿಂದಲೇ ಮೆಟ್ರೋ ಯೋಜನೆ ತಡವಾಗುತ್ತಿದೆ. ಇದರಿಂದ ಯೋಜನಾ ವೆಚ್ಚ ವಿಸ್ತರಣೆ ಆಗುತ್ತಿದೆ. ಆದರೆ, ಬಿಡಿಎ ಬಳಿ ಈಗಾಗಲೇ ನೈಸ್‌ ರಸ್ತೆಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿ ಇದೆ. ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ಜತೆ ಪಿಪಿಪಿ ಮಾದರಿಯಲ್ಲಿ ಉದ್ದೇಶಿತ ಜಾಗದಲ್ಲಿ ಮೆಟ್ರೋ ಮಾರ್ಗ ನಿರ್ಮಿಸಲು ಅವಕಾಶ ಇದೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಮೋಹನದಾಸ್‌ ಹೆಗ್ಡೆ ನಗರಾಭಿವೃದ್ಧಿ ನಗರಾಭಿವೃದ್ಧಿ ಇಲಾಖೆಗೆ ಸಲಹೆ ಮಾಡಿದ್ದಾರೆ. 

ಇದನ್ನು ಆಧರಿಸಿ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ. ಲಲಿತಾಬಾಯಿ, ಪಿಪಿಪಿ ಮಾದರಿಯಲ್ಲಿ ಯೋಜನೆ ಜಾರಿಗೊಳಿಸುವ ಬಗ್ಗೆ ಪರಿಶೀಲಿಸಿ  ವಿವರವಾದ ವರದಿ ಸಲ್ಲಿಸುವಂತೆ ಸೋಮವಾರ ನಿಗಮಕ್ಕೆ ನಿರ್ದೇಶನ ನೀಡಿದ್ದಾರೆ.  

ನೈಸ್‌ ರಸ್ತೆಯಲ್ಲಿ ಮೊದಲ ಹಂತದಲ್ಲಿ ತುಮಕೂರು ರಸ್ತೆಯಿಂದ ಎಲೆಕ್ಟ್ರಾನಿಕ್‌ ಸಿಟಿ (ಸುಮಾರು 42 ಕಿ.ಮೀ.) ಹಾಗೂ ಎರಡನೇ ಹಂತದಲ್ಲಿ ವೈಟ್‌ಫೀಲ್ಡ್‌ನಿಂದ ತುಮಕೂರು ರಸ್ತೆ (ಸುಮಾರು 65 ಕಿ.ಮೀ.)ಗೆ ಪೆರಿಫೆರಲ್‌ ರಿಂಗ್‌ ರೋಡ್‌ನ‌ಲ್ಲಿ ಪಿಪಿಪಿ ಮಾದರಿಯಲ್ಲಿ ಮೆಟ್ರೋ ನಿರ್ಮಿಸಲು ಸಾಧ್ಯವಿದೆ.

ಇದರಿಂದ ಯೋಜನಾ ವೆಚ್ಚದ ಹೊರೆ ಶೇ.50ರಷ್ಟು ಕಡಿಮೆ ಆಗಲಿದೆ. ಈಗಾಗಲೇ ಭೂಮಿ ಲಭ್ಯ ಇರುವುದರಿಂದ ಮೊದಲ ಹಂತ ಕೇವಲ ನಾಲ್ಕೈದು ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಬಹುದು ಎಂದು ಮೋಹನದಾಸ್‌ ಹೆಗ್ಡೆ ಸಲಹೆ ಮಾಡಿದ್ದಾರೆ.  ಜೈಕಾದಿಂದ ಈ ಯೋಜನೆಗೆ ಸಾಲ ಪಡೆಯಬಹುದು. ಬಿಡಿಎ ಸುಪರ್ದಿಯಲ್ಲಿರುವ ನೈಸ್‌ ರಸ್ತೆಯಲ್ಲಿನ ಜಾಗವನ್ನು 15 ವರ್ಷಗಳ ಕಾಲ ಬಿಎಂಆರ್‌ಸಿಗೆ ಹಸ್ತಾಂತರಿಸಿ,

Advertisement

ಅನಂತರ ಪರಸ್ಪರ ಒಪ್ಪಂದದ ಮೇರೆಗೆ ವಾಪಸ್‌ ಪಡೆಯಬಹುದು. ಇದರಿಂದ ಭೂಸ್ವಾಧೀನದ ವೆಚ್ಚ ಉಳಿಯುತ್ತದೆ. ಮರಗಳನ್ನು ಕಡಿಯಬೇಕಾಗಿಲ್ಲ. ಪ್ರಯಾಣಿಕರಿಗೂ ಅನುಕೂಲ ಆಗುತ್ತದೆ. ಇನ್ನು ಖಾಸಗಿ ಸಹಭಾಗಿತ್ವ ಹೊಂದಿರುವ ಕಂಪೆನಿಗೆ ಕಾರ್ಯಾಚರಣೆ ವೆಚ್ಚದಲ್ಲಿ ಇಂತಿಷ್ಟು ಪಾಲು ನೀಡಬಹುದು ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next