Advertisement

ನೈಸ್‌ ಒಪ್ಪಂದ ರದ್ದು: ತಕರಾರು ಅರ್ಜಿ ಪರಿಶೀಲಿಸಿ ಕ್ರಮ

07:43 AM Nov 22, 2017 | Team Udayavani |

ವಿಧಾನಪರಿಷತ್‌: ಸುಪ್ರೀಂಕೋರ್ಟ್‌ ಹಾಗೂ ಹೈಕೋರ್ಟ್‌ ಮುಂದಿರುವ ತಕರಾರುಗಳು, ಜಂಟಿ ಸದನ ಸಮಿತಿ ನೀಡಿರುವ ವರದಿ ಪರಿಶೀಲಿಸಿ ನೈಸ್‌ ಒಪ್ಪಂದ ರದ್ದುಪಡಿಸುವ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ ಹೇಳಿದ್ದಾರೆ.

Advertisement

ಮಂಗಳವಾರ ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ರಮೇಶ್‌ಬಾಬು, ಶ್ರೀಕಂಠೇಗೌಡ ಮತ್ತು ಕಾಂತರಾಜು ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ನೈಸ್‌ ಒಪ್ಪಂದ ರದ್ದುಪಡಿಸುವುದು ಸೂಕ್ಷ್ಮವಿಚಾರ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನಲ್ಲಿ ಅನೇಕ ತಕರಾರು ಅರ್ಜಿಗಳಿವೆ. ಅದನ್ನು ಗಮನದಲ್ಲಿಟ್ಟುಕೊಂಡು ಸದನ ಸಮಿತಿ ಮಾಡಿರುವ ಶಿಫಾರಸುಗಳನ್ನೂ ಪರಿಶೀಲಿಸಿ, ಕಾನೂನು ಇಲಾಖೆಯ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ, ರಮೇಶ್‌ಬಾಬು, ಶ್ರೀಕಂಠೇಗೌಡ, ಕಾಂತರಾಜು ನೈಸ್‌ ಒಪ್ಪಂದ ರದ್ದು ಮಾಡುವ ವಿಚಾರ ಸರ್ಕಾರದ ಮುಂದೆ ಇದ್ದಂತೆ ಕಾಣುತ್ತಿಲ್ಲ. ಆದರೆ, ಈಗಾಗಲೇ ಸದನ ಸಮಿತಿ ನೀಡಿರುವ ವರದಿ ಅನ್ವಯ ನೈಸ್‌ ಅಕ್ರಮ ಬಯಲಾಗಿದ್ದು, ಕೂಡಲೇ ಈ ಒಪ್ಪಂದವನ್ನು ರದ್ದು ಮಾಡಲು ಸರ್ಕಾರಕ್ಕೆ ಏನು ತೊಂದರೆ ಎಂದು ಪ್ರಶ್ನಿಸಿದರು. ಈ ಕುರಿತು ಸುದೀರ್ಘ‌ ಚರ್ಚೆಗೆ ಅವಕಾಶ ನೀಡುವಂತೆ ಕೋರಿದಾಗ, ಬುಧವಾರ ಈ ಕುರಿತು ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ ಸಭಾಪತಿ ಶಂಕರಮೂರ್ತಿ ವಿಷಯಕ್ಕೆ ತೆರೆ ಎಳೆದರು.

ಚಾರ್ಮಾಡಿಗೆ ಪರ್ಯಾಯ ರಸ್ತೆ: ಡಿಪಿಆರ್‌ ನಂತರ ಕಾಮಗಾರಿ
ವಿಧಾನಪರಿಷತ್‌: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಹಾದು ಹೋಗುವ ಚಾರ್ಮಾಡಿ ಘಾಟ್‌ಗೆ ಪರ್ಯಾಯವಾಗಿ ಭೈರಾಪುರ- ಶಿಶಿಲ ಮಾರ್ಗವಾಗಿ ಪರ್ಯಾಯ ರಸ್ತೆ ನಿರ್ಮಾಣ ಸಂಬಂಧ ಸಮಗ್ರ ಯೋಜನಾ ವರದಿ ಸಲ್ಲಿಕೆಯಾದ ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದ್ದಾರೆ.

ಮಂಗಳವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಮೋಟಮ್ಮ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಚಿಕ್ಕಮಗಳೂರಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಹಾದು ಹೋಗುವ ಚಾರ್ಮಾಡಿ ಘಾಟ್‌ನ ರಸ್ತೆಗೆ ಪರ್ಯಾಯವಾಗಿ ಭೈರಾಪುರ- ಶಿಶಿಲ ಮಾರ್ಗದ ಸರ್ವೇ ಕಾರ್ಯ ಆರಂಭವಾಗಿದೆ. ಮೂಡಿಗೆರೆ ತಾಲೂಕಿನ ಬೈರಾಪುರದಿಂದ ನಾಯಿಹಳ್ಳ, ಪೇರಿಕೆ, ಶಿಶಿಲ ಮೂಲಕ ಸಂಪರ್ಕಿಸುವ ರಸ್ತೆಗೆ ಸಂಬಂಧಪಟ್ಟಂತೆ ಸಮಗ್ರ ಯೋಜನಾ ವರದಿ ಸಿದ್ಧವಾಗುತ್ತಿದೆ ಎಂದರು. 

Advertisement

ಬೆಂಗಳೂರಿನ ಪ್ರೀತಿ ಕ್ಯಾಡ್‌ ಕನ್ಸಲ್ಟಿಂಗ್‌ ಎಂಜಿನಿಯರ್ಸ್‌ ಪ್ರೈವೇಟ್‌ ಸಂಸ್ಥೆಗೆ ಡಿಪಿಆರ್‌ ಸಲ್ಲಿಸಲು 2016ರ ಆ.10ರಂದು ಕಾರ್ಯಾದೇಶ ನೀಡಿ 13.84 ಲಕ್ಷ ರೂ. ಒದಗಿಸಲಾಗಿದೆ. ಸರ್ವೇ ವರದಿ ಪರಿಶೀಲಿಸಿದರೆ ಆಲೈನ್‌ಮೆಂಟ್‌ನ ಬಹುಪಾಲು ಮಾರ್ಗ ಬಾಗೂರು ಮೀಸಲು ಅರಣ್ಯದ ಮೇಲೆ ಹಾದು ಹೋಗುವುದರಿಂದ ರಸ್ತೆ ನಿರ್ಮಾಣ ಕಷ್ಟಕರ ಎಂದು ಈಗಾಗಲೇ ಅಸ್ತಿತ್ವದಲ್ಲಿರುವ ಕಚ್ಚಾರಸ್ತೆಯ ಆಲೈನ್‌ಮೆಂಟ್‌ನಲ್ಲಿ ಸರ್ವೇ ನಡೆಸಿ ಡಿಪಿಆರ್‌ ಸಲ್ಲಿಸಲು ಸೂಚಿಸಲಾಗಿದೆ. ಆದರೆ ಸಂಸ್ಥೆ ಕಾಲಮಿತಿಯೊಳಗೆ ವರದಿ ಸಲ್ಲಿಸದ ಕಾರಣ ಕಳೆದ ಜುಲೈ 18ರಂದು ಸಾಫಟ್‌ ಟೆಕ್‌ ಸಂಸ್ಥೆಗೆ ಈ ಜವಾಬ್ದಾರಿ ವಹಿಸಲಾಗಿದೆ ಎಂದು ಹೇಳಿದರು.

ಟೋಲ್‌ರಸ್ತೆಯಲ್ಲಿ ಸೌಲಭ್ಯ: ಸದನ ಸಮಿತಿ ರಚಿಸಲು ಆಗ್ರಹ
ವಿಧಾನಪರಿಷತ್‌: ಟೋಲ್‌ ರಸ್ತೆಯನ್ನು ಬಳಸುವ ಬಳಕೆದಾರರಿಗೆ ಗುತ್ತಿಗೆ ಸಂಸ್ಥೆಗಳು ನಿಯಮಾನುಸಾರ ಸೌಲಭ್ಯ ಒದಗಿಸುತ್ತಿವೆಯೇ ಮತ್ತು ನಿಯಮ ಉಲ್ಲಂಘನೆಯಾಗಿದೆಯೇ ಎಂಬುದರ ಪರಿಶೀಲನೆಗೆ ಸದನ ಸಮಿತಿ ರಚಿಸುವಂತೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್‌ ಸದಸ್ಯರು ಸಭಾಪತಿಗಳ ಪೀಠದ ಎದುರು ಧಾವಿಸಿ ಧರಣಿ ನಡೆಸಿದರು.

ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಅರುಣ್‌ ಶಹಾಪುರ, ಟೋಲ್‌ ರಸ್ತೆಗಳಲ್ಲಿ ಸೌಲಭ್ಯಗಳಿಲ್ಲದಿರುವ ಬಗ್ಗೆ ಯಾವುದೇ ದೂರು ಸಲ್ಲಿಕೆಯಾಗಿಲ್ಲ ಎಂದು ಸಚಿವರು ಉತ್ತರ ನೀಡಿದ್ದಾರೆ. ಟೋಲ್‌ ರಸ್ತೆಗಳಲ್ಲಿ ವಾರ್ಷಿಕ ಸಾವಿರಾರು ಕೋಟಿ ಸಂಗ್ರಹವಾಗುತ್ತಿದೆ. ಹೀಗಾಗಿ, ನಿಯಮಾನುಸಾರ ಟೋಲ್‌ರಸ್ತೆ ಬಳಕೆದಾರರಿಗೆ ಸೌಲಭ್ಯ ಸಿಗುತ್ತಿದೆಯೇ ಎಂಬುದರ ಪರಿಶೀಲನೆಗೆ ಸದನ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಚಿವ  ಡಾ.ಎಚ್‌.ಸಿ.ಮಹದೇವಪ್ಪ, ವಿವಿಧ ಯೋಜನಾ ಮಾದರಿಯಡಿ ಟೋಲ್‌ ರಸ್ತೆ ನಿರ್ಮಾಣವಾಗಿವೆ. ರಾಷ್ಟ್ರೀಯ ಟೋಲ್‌ ನೀತಿಯಡಿ ಟೋಲ್‌ ರಸ್ತೆಗಳು ನಿರ್ಮಾಣವಾಗುತ್ತಿದೆ. ಈಗಾಗಲೇ ಎರಡು ಸಭೆ ನಡೆಸಲಾಗಿದ್ದು, ಮತ್ತೂಮ್ಮೆ ಸಭೆ ನಡೆಸಲಾಗುವುದು.
ನಿಯಮಾವಳಿಗಳು ಉಲ್ಲಂಘನೆಯಾಗಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

 ಕೊನೆಗೆ ಸಚಿವ ಮಹದೇವಪ್ಪ, ಈ ವಿಚಾರಗಳಿಗೆ ಸದನ ಸಮಿತಿ ರಚಿಸಲು ಸಾಧ್ಯವಿಲ್ಲ. ಸದ್ಯದಲ್ಲೇ ಮುಖಂಡರ ಸಭೆ ಕರೆದು ಚರ್ಚಿಸಲಾಗುವುದು. ಆನಂತರವೂ ಸಂಸ್ಥೆಗಳು ನಿಯಮಾವಳಿ ಪಾಲಿಸದಿದ್ದರೆ ಮುಂದೆ ಸೂಕ್ತ ಕ್ರಮ ಜರುಗಿಸಬಹುದು ಎಂದು ಹೇಳುವ ಮೂಲಕ ಚರ್ಚೆಗೆ ತೆರೆ ಎಳೆದರು.

Advertisement

Udayavani is now on Telegram. Click here to join our channel and stay updated with the latest news.

Next