ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಇಂದು ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆಸಿದ್ದು, ಒಂಬತ್ತು ಅಲ್ ಖೈದಾ ಉಗ್ರರನ್ನು ಬಂಧಿಸಲಾಗಿದೆ.
ಎನ್ ಐಎ ಅಧಿಕಾರಿಗಳು ಇಂದು ಬೆಳಿಗ್ಗೆ ಏಕಕಾಲದಲ್ಲಿ ಕೇರಳದ ಎರ್ನಾಕುಲಂ ಮತ್ತು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ನಲ್ಲಿ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ದಿಲ್ಲಿ ಪ್ರವಾಸ ಯಶಸ್ವಿ, ಸಂಪುಟ ವಿಸ್ತರಣೆ ಬಗ್ಗೆ ಇಂದೇ ಅಂತಿಮ ನಿರ್ಧಾರ: ಬಿ ಎಸ್ ಯಡಿಯೂರಪ್ಪ
ಮುರ್ಶಿದಾಬಾದ್ ನಲ್ಲಿ ಆರು ಜನ ಅಲ್ ಖೈದಾ ಉಗ್ರರನ್ನು ಬಂಧಿಸಿದ್ದರೆ, ಮೂವರು ಉಗ್ರರನ್ನು ಎರ್ನಾಕುಲಂ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿದೆ.
ಬಂಧಿತರೆಲ್ಲರೂ 20 ವರ್ಷದ ಆಸುಪಾಸಿನವರಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಕೇರಳದ ಎರ್ನಾಕುಲಂ ನಲ್ಲಿ ಬಂಧಿಸಿದವರನ್ನು ಮುರ್ಶಿದ್ ಹಸನ್, ಇಯಾಕುಬ್ ಬಿಸ್ವಾಸ್ ಮತ್ತು ಮೊಸರಫ್ ಹೊಸೈನ್ ಎಂದು ಗುರುತಿಸಲಾಗಿದೆ.
ನಜಮುಸ್ ಸಕಿಬ್, ಅಬು ಸುಫಿಯಾನ್, ಮೈನೂಲ್ ಮೊಂಡಾಲ್, ಲೂ ಯಾನ್ ಅಹಮದ್, ಅಲ್ ಮಮುನ್ ಕಮಲ್ ಮತ್ತು ಅತಿತುರ್ ರೆಹಮಾನ್ ಎಂಬ ಆರು ಜನರು ಪ.ಬಂಗಾಳದಲ್ಲಿ ಬಂದಿಸಲಾಗಿದೆ. ಇವರುಗಳು ಮುರ್ಶಿದಾಬಾದ್ ನಿವಾಸಿಗಳು ಎನ್ನಲಾಗಿದೆ.
ಈ ಬಂಧಿತ ವ್ಯಕ್ತಿಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನ ಮೂಲದ ಅಲ್-ಖೈದಾ ಭಯೋತ್ಪಾದಕರು ಒಟ್ಟುಗೂಡಿಸಿದ್ದಾರೆ. ಇವರುಗಳನ್ನು ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲು ಪ್ರೇರೇಪಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ತನಿಖಾ ಸಂಸ್ಥೆ ಮೂಲಗಳು ತಿಳಿಸಿದೆ.