Advertisement

ಎನ್‌ಎಚ್ 206 ರಸ್ತೆ ವಿಸ್ತರಣೆ ವಿವಾದ: ಎಡಭಾಗದ ಸಾಲು ಮರಗಳಿಗೆ ಮಾತ್ರ ಕತ್ತರಿ: ಹಾಲಪ್ಪ

04:15 PM Jan 23, 2022 | Suhan S |

ಸಾಗರ: ಪರಿಸರಸ್ನೇಹಿಗಳು ಮತ್ತು ಪರಿಸರವಾದಿಗಳ ಅಪೇಕ್ಷೆಯಂತೆ ರಾಷ್ಟ್ರೀಯ ಹೆದ್ದಾರಿ 206 ಅಗಲೀಕರಣ ಸಂದರ್ಭದಲ್ಲಿ ನಗರದ ಬಸವನಹೊಳೆ ಡ್ಯಾಂನಿಂದ ಸಣ್ಣಮನೆ ಸೇತುವೆವರೆಗೆ ರಸ್ತೆಯ ಎಡಭಾಗದಲ್ಲಿರುವ ಮರಗಳನ್ನು ಕಡಿತಲೆ ಮಾಡಲಾಗುತ್ತದೆ. ಇದರಿಂದ ಕಡಿಮೆ ಮರವನ್ನು ಕಡಿಯುವ ಮೂಲಕ ಅಗಲೀಕರಣ ಕೈಗೊಳ್ಳಲಾಗುತ್ತದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.

Advertisement

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಬಿಎಚ್ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ಮರ ಕಡಿತಲೆಗೆ ವಿರೋಧ ವ್ಯಕ್ತಪಡಿಸಿದ್ದ ಪರಿಸರವಾದಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ, ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಮರಗಳನ್ನು ಕಡಿಯುವುದು ಮಹಾಪಾಪ. ಅಂತಹ ಪಾಪವನ್ನು ನಾನು ಹೊತ್ತುಕೊಳ್ಳಲು ಸಿದ್ದನಿಲ್ಲ. ಅಗಲೀಕರಣ ಅನಿವಾರ್ಯವಾಗಿದ್ದರೂ, ಆದಷ್ಟು ಮರಗಳನ್ನು ಉಳಿಸಿಕೊಳ್ಳುವುದು, ಸರ್ಕಾರಿ ಜಾಗವನ್ನು ಹೆಚ್ಚು ಬಳಸಿಕೊಳ್ಳುವುದು ಸೇರಿದಂತೆ ಅಭಿವೃದ್ಧಿ ಜೊತೆ ಪರಿಸರವನ್ನೂ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಲಾಗುತ್ತದೆ. ಸುಮಾರು ೪೮೦ ಮರಗಳು ಅಗಲೀಕರಣ ಸಂದರ್ಭದಲ್ಲಿ ಬರುತ್ತದೆ. ರಸ್ತೆ ನಡುವೆ ಬರುವ ಡಿವೈಡರ್ ಒಂದು ಅಡಿಗೆ ಸೀಮಿತಗೊಳಿಸಿ, 75 ಅಡಿ ಅಗಲದ ಬದಲು 65 ಅಥವಾ 66 ಅಡಿ ಅಗಲ ಮಾತ್ರ ಅಗಲೀಕರಣ ಮಾಡುವ ಚಿಂತನೆ ನಡೆಸಲಾಗಿದೆ. ದೆಹಲಿಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಅಂತಿಮ ತೀರ್ಮಾನವಾಗಬೇಕು. ಬೆಂಗಳೂರಿನಲ್ಲಿ  ಸಭೆ ನಡೆಸಿ, ಅಗತ್ಯ ಬಿದ್ದರೆ ನವದೆಹಲಿಗೂ ಹೋಗಿ ಅಲ್ಲಿನ ಅಧಿಕಾರಿಗಳ ಮನವೊಲಿಸಲಾಗುತ್ತದೆ ಎಂದರು.

ಪರಿಸರವಾದಿ ಶಂಕರ ಶರ್ಮ ಮಾತನಾಡಿ, ಅರಣ್ಯ ಇಲಾಖೆ ಜೊತೆ ವಿಸ್ತೃತವಾಗಿ ಮಾತನಾಡಿದ್ದು ವ್ಯರ್ಥವಾಯಿತು. ಮರಗಳನ್ನು ಉಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ನಿಯಮದ ಗುಮ್ಮವನ್ನು ತೋರಿಸಿ ಕೈಜೋಡಿಸುವ ಬದಲು ಅರಣ್ಯ ಇಲಾಖೆಯ ಅಧಿಕಾರಿಗಳು ಜನ ಕೇಳುವ ಪ್ರಶ್ನೆಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಮುಂದೆ ಕೇಳಬೇಕಿತ್ತು. ಅಗಲೀಕರಣದ ಅಗತ್ಯತೆಯನ್ನು ವೈಜ್ಞಾನಿಕವಾಗಿ ದೃಢಪಡಿಸಿಕೊಳ್ಳುವ ಪ್ರಯತ್ನವನ್ನೇ ಅರಣ್ಯ ಇಲಾಖೆ ಮಾಡಿಲ್ಲ. ಇಂದು ಅವರನ್ನು ಅರಣ್ಯ ರಕ್ಷಕರು ಎನ್ನುವ ಬದಲು ಅರಣ್ಯ ಭಕ್ಷಕರು ಎನ್ನಬೇಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಸರವಾದಿ ಅಖಿಲೇಶ್ ಚಿಪ್ಳಿ ಮಾತನಾಡಿ, ಅಗಲೀಕರಣ ಸಂದರ್ಭದಲ್ಲಿ ಸಭೆ ಕರೆದು ಚರ್ಚೆ ಮಾಡಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಸಾಗರ ಮಧ್ಯ ಪಶ್ಚಿಮಘಟ್ಟ ಪ್ರದೇಶವಾಗಿದ್ದರಿಂದ ಇಲ್ಲಿ ಪ್ರತಿಯೊಂದು ಮರವೂ ಅಮೂಲ್ಯ. ಹಳೆ ಮರ ಕಡಿಯಬಾರದು ಎಂದು ಉಚ್ಛ ನ್ಯಾಯಾಲಯದ ಆದೇಶವೇ ಇದೆ. ಅದನ್ನು ಇಲ್ಲಿಯೂ ಪಾಲಿಸಬೇಕು ಎಂದು ಒತ್ತಾಯಿಸಿದರು.

ರಂಗಕರ್ಮಿ ಚಿದಂಬರ ರಾವ್ ಜಂಬೆ ಮಾತನಾಡಿ, ಅಗಲೀಕರಣ ಸಂದರ್ಭದಲ್ಲಿ ತೀರ ಅನಿವಾರ್ಯ ಹೊರತುಪಡಿಸಿ ಎಷ್ಟು ಮರ ಉಳಿಸಲು ಸಾಧ್ಯವೋ ಅಷ್ಟನ್ನು ಉಳಿಸಿ. ಕಡಿತಲೆಗೂ ಮುನ್ನ ಮತ್ತೊಮ್ಮೆ ಸರ್ವೇ ಮಾಡಿ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಗಲೀಕರಣ ಕೈಗೊಳ್ಳಿ ಎಂದು ಒತ್ತಾಯಿಸಿದರು.

Advertisement

ಸಭೆಯಲ್ಲಿ ಪತ್ರಕರ್ತ ಎಚ್.ಬಿ.ರಾಘವೇಂದ್ರ, ರಂಗಕರ್ಮಿ ಕೆ.ಜಿ.ಕೃಷ್ಣಮೂರ್ತಿ, ವೃಕ್ಷಲಕ್ಷ ಆಂದೋಲನದ ಬಿ.ಎಚ್.ರಾಘವೇಂದ್ರ ಮಾತನಾಡಿ ಸಲಹೆ ನೀಡಿದರು. ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಗಣೇಶ್ ಪ್ರಸಾದ್, ಅರವಿಂದ ರಾಯ್ಕರ್, ಪ್ರೇಮಸಿಂಗ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾದ ಭರ್ಮರೆಡ್ಡಿ, ನಿಂಗಪ್ಪ, ಈಶ್ವರಪ್ಪ, ಸುನೀಲ್, ಅರಣ್ಯ ಇಲಾಖೆಯ ಮೋಹನ್ ಕುಮಾರ್, ಶ್ರೀಧರ್, ಪ್ರಮೋದ್ ಡಿ.ಆರ್., ನಗರಸಭೆಯ ರಾಜು ಬಣಕಾರ್, ಎಚ್.ಕೆ.ನಾಗಪ್ಪ, ಪ್ರಮುಖರಾದ ನಾರಾಯಣಮೂರ್ತಿ ಕಾನುಗೋಡು, ಚೇತನ್‌ರಾಜ್ ಕಣ್ಣೂರು, ಲೋಕನಾಥ್ ಬಿಳಿಸಿರಿ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next