ವಿದೇಶೀ ಬಂಡವಾಳ ಹೂಡಿಕೆದಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಸರಳ ಕೆವೈಸಿ ನಿಯಮಗಳನ್ನು ಜಾರಿಗೆ ತರಲಿದೆ. ಇದಕ್ಕಿಂತ ಪ್ರಮುಖವಾಗಿರುವ ಅಂಶವೆಂದರೆ ಸಾಮಾಜಿಕ ಸಂಸ್ಥೆಗಳು ಮತ್ತು ಸ್ವಯಂ ಸೇವಾ ಸಂಘಟನೆ ಗಳು ಕ್ಯಾಪಿಟಲ್ ಮಾರುಕಟ್ಟೆ ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಮೂಲಕ ಅವರ ಸಾಮಾಜಿಕ ಚಟುವಟಿಕೆಗಳಿಗೆ ಸಂಪನ್ಮೂಲ ಸಂಗ್ರಹಕ್ಕೆ ಅವಕಾಶ ನೀಡಲಾಗುತ್ತದೆ. ಮ್ಯೂಚ್ಯುವಲ್ ಫಂಡ್, ಈಕ್ವಿಟಿ ಮಾದರಿಯಲ್ಲಿ ಅದನ್ನು ಬಳಸಲು ಅನುಕೂಲವಾಗಲಿದೆ.
ಈ ನಿಟ್ಟಿನಲ್ಲಿ ಸೆಬಿ ಮತ್ತು ಆರ್‌ಬಿಐ ಜತೆಗೆ ಸಮಾಲೋಚನೆ ನಡೆಸಿ ಹಲವು ನಿಯಮಗಳನ್ನು ರಚಿಸಲಾಗುತ್ತದೆ. ಇದರ ಜತೆಗೆ ಬಂಡವಾಳ ಹೂಡಿಕೆ ಮಾರುಕಟ್ಟೆಯನ್ನು ಜನರ ಸಮೀಪಕ್ಕೆ ತೆಗೆದುಕೊಂಡು ಹೋಗಿ, ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುವ ಬಗ್ಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸೆಕ್ಯುರಿಟಿ ಟ್ರಾನ್ಸಾಕ್ಷನ್ ಟ್ಯಾಕ್ಸ್ ಸರಳ: ಸೆಕ್ಯುರಿಟೀಸ್‌ಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಶುಭ ಸುದ್ದಿ. ಈ ಕ್ಷೇತ್ರದಲ್ಲಿ ಇದುವರೆಗೆ ಇದ್ದ ತೆರಿಗೆ ಮಿತಿಯನ್ನು ಸರಳಗೊಳಿಸುವ ಪ್ರಸ್ತಾವನೆ ಇರಿಸಲಾಗಿದೆ. ಇದುವರೆಗೆ ಟ್ರೇಡ್ ಮಾಡುವ ಮೊತ್ತದ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಸೆಟಲ್‌ಮೆಂಟ್ ಪ್ರೈಸ್ ಮತ್ತು ಎಕ್ಸರ್‌ಸೈಸ್ ಪ್ರೈಸ್ ನಡುವಿನ ವ್ಯತ್ಯಾಸದ ಮೊತ್ತಕ್ಕೆ ಮಾತ್ರ ತೆರಿಗೆ ಪಾವತಿಸಿದರೆ ಸಾಕು. ಅಂದರೆ ನಿಗದಿತ ಷೇರುಗಳ ಮಾರಾಟದಲ್ಲಿ ಲಾಭ ಉಂಟಾದರೆ ಹೆಚ್ಚು ತೆರಿಗೆ, ನಷ್ಟ ಉಂಟಾದಲ್ಲಿ ಕಡಿಮೆ ತೆರಿಗೆ ಪಾವತಿಸಿದರೆ ಸಾಕು.
ಮಾರಲು ಅವಕಾಶ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ), ಫಾರಿನ್ ಪೋರ್ಟ್‌ಫೋಲಿಯೋ ಇನ್ವೆಸ್ಟರ್ಸ್‌ಗಳು ಡೆಟ್ ಸೆಕ್ಯುರಿಟಿಗಳಲ್ಲಿ ಮಾಡುವ ಹೂಡಿಕೆಯನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬಗ್ಗೆ ಪ್ರಸ್ತಾಪನೆಗೆ ಅನುಮೋದನೆ ನೀಡುವ ಸಾಧ್ಯತೆ ಇದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳು (ಎನ್‌ಬಿಎಫ್ಸಿ), ಇನ್ಫಾಸ್ಟ್ರಕ್ಚರ್ ಡೆಟ್ ಫಂಡ್‌ಗಳ ಮೂಲಕ ವಿದೇಶಿ ಸಂಸ್ಥೆಗಳು ಮಾಡುವ ಹೂಡಿಕೆಯನ್ನು ನಿಗದಿತ ಕಾಲ ಮಿತಿಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ವರ್ಗಾಯಿಸಿ ಮಾರಾಟ ಮಾಡುವ ಬಗ್ಗೆಯೂ ಅವಕಾಶ ನೀಡುವ ಉದ್ದೇಶವನ್ನು ಸರ್ಕಾರ ಪ್ರಕಟಿಸಿದೆ.